ಉಪ್ಪಿನಂಗಡಿ: ಅನಧಿಕೃತ ವ್ಯಾಪಾರ ತೆರವಿಗೆ ಹೋಗಿದ್ದ ಪಿಡಿಒ ಕರ್ತವ್ಯಕ್ಕೆ ಅಡ್ಡಿ-ಪೊಲೀಸರಿಗೆ ದೂರು

0

ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ ಅಕ್ರಮವಾಗಿ ವಾಹನದಲ್ಲಿ ಮಾರಾಟ ವ್ಯವಹಾರ ನಿರತರಾಗಿದ್ದವರನ್ನು ತೆರವುಗೊಳಿಸಲು ಕಾರ್ಯಾಚರಣೆಗಿಳಿದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಪಿಡಿಒರವರಿಗೆ ಅಡೆತಡೆಯೊಡ್ಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮೂವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ ಘಟನೆ ವರದಿಯಾಗಿದೆ.

ಪಂಚಾಯತ್ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ರವರು ಸ್ಥಳೀಯ ಅಧಿಕೃತ ವ್ಯಾಪಾರಿಗಳಿಗೆ ತೊಂದರೆಯೊಡ್ಡುವ ರೀತಿಯಲ್ಲಿ, ಯಾವುದೇ ಪರವಾನಿಗೆ ಪಡೆಯದೇ ವಾಹನಗಳಲ್ಲಿ ಹಣ್ಣು ಹಂಪಲುಗಳನ್ನು ತಂದು ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಬಗ್ಗೆ ವ್ಯಕ್ತಗೊಂಡ ದೂರಿನನ್ವಯ ಗುರುವಾರದಂದು ಅನಧಿಕೃತ ಸಂಚಾರಿ ವ್ಯಾಪಾರ ಮಳಿಗೆಯನ್ನು ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ನೆಕ್ಕಿಲಾಡಿಯ ಹಾಗೂ ಕರಾಯದ ನಿವಾಸಿಗರಿಬ್ಬರು ಅನಧಿಕೃತ ವ್ಯಾಪಾರಿಯ ಪರವಾಗಿ ಸಂಘರ್ಷಕ್ಕಿಳಿದು ತನ್ನ ಸರಕಾರಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದಾರೆಂದು ಪಿಡಿಒರವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅಪಾದಿಸಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿ ಘಟನೆಯ ವಿಡಿಯೋ ದಾಖಲೆಗಳನ್ನು ಸಲ್ಲಿಸಿದ್ದು, ಪೊಲೀಸರು ಪ್ರಕರಣವನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here