ಎ.30: ಗೋಳಿತ್ತಟ್ಟು ಶಾಲಾ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ್ ನಿವೃತ್ತಿ

0

ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತಟ್ಟು ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ್ ಎಸ್.,ರವರು ಎ.30ರಂದು ಕರ್ತವ್ಯದಿಂದ ನಿವೃತ್ತಿಯಾಗಲಿದ್ದಾರೆ. ಶೀನಪ್ಪ ನಾಯ್ಕ್‌ರವರು ಶಿಕ್ಷಣ ಇಲಾಖೆಯಲ್ಲಿ32 ವರ್ಷ3 ತಿಂಗಳುಗಳ ಕಾಲ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ, ಪ್ರಭಾರ ಸಿಆರ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ.

1990ರಲ್ಲಿ ಪಡುಮಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಆರಂಭಿಸಿದ್ದ ಶೀನಪ್ಪ ನಾಯ್ಕ್‌ರವರು ಬಳಿಕ ಇಚ್ಲಂಪಾಡಿ ಗ್ರಾಮದ ಕೊರಮೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನೆಲ್ಯಾಡಿ ಗ್ರಾಮದ ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಮುಖ್ಯಶಿಕ್ಷಕರಾಗಿ ಭಡ್ತಿಗೊಂಡು ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಸರಕಾರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡಿದ್ದರು. ನಂತರ ನೆಲ್ಯಾಡಿ, ಬಜತ್ತೂರು ಕ್ಲಸ್ಟರ್ ಸಿಆರ್‌ಪಿಯಾಗಿ ಕರ್ತವ್ಯ ನಿರ್ವಹಿಸಿ 2014ರಿಂದ ಗೋಳಿತ್ತಟ್ಟು ಸರಕಾರಿ ಉನ್ನತ ಹಿ.ಪ್ರಾ.ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2020-21 ಮತ್ತು 2021-22ನೇ ಸಾಲಿನಲ್ಲಿ ಹೆಚ್ಚುವರಿ ಪ್ರಭಾರ ಸಿಆರ್‌ಪಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಶಿಕ್ಷಣ ಇಲಾಖೆಯಲ್ಲಿ ಒಟ್ಟು 32 ವರ್ಷ 3ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಇವರು ಎ.30ರಂದು ನಿವೃತ್ತರಾಗಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಇವರಿಗೆ 2021ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು.

ಪುತ್ತೂರು ತಾಲೂಕಿನ ನೆಟ್ಟಣಗೆ ಮುಡ್ನೂರು ಗ್ರಾಮದ ಸರೋಳಿಮೂಲೆ ನಿವಾಸಿ ರಾಮನಾಯ್ಕ್ ಹಾಗೂ ಸೀತಮ್ಮ ದಂಪತಿ ಪುತ್ರರಾಗಿರುವ ಶೀನಪ್ಪ ನಾಯ್ಕ್‌ರವರು ನೆಟ್ಟಣಿಗೆ ಮುಡ್ನೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ, ಪುತ್ತೂರು ಸರಕಾರಿ ಜೂನಿಯರ್ ಕಾಲೇಜು ಹಾಗೂ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಸುಳ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ.ಪೂ.ಶಿಕ್ಷಣ ಮುಗಿಸಿ ಮಂಗಳೂರಿನ ಕೋಡಿಯಾಲ್ ಬೈಲ್‌ನಲ್ಲಿರುವ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರ ತರಬೇತಿ ಪಡೆದುಕೊಂಡಿದ್ದರು. ಪ್ರಸ್ತುತ ಕೌಕ್ರಾಡಿ ಗ್ರಾಮದ ಬರೆಗುಡ್ಡೆಯಲ್ಲಿ ವಾಸ್ತವ್ಯವಿರುವ ಶೀನಪ್ಪ ನಾಯ್ಕ್‌ರವರ ಪತ್ನಿ ನೆಲ್ಯಾಡಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದಾರೆ. ಪುತ್ರ ವಂದನ್‌ಕುಮಾರ್ ಎಸ್., ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here