ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭೆ

0

  • ಅಧ್ಯಕ್ಷರ ಕಡೆಗಣನೆ, ಏಕಪಕ್ಷೀಯವಾಗಿ ಅಂಗಡಿ ಪರವಾನಿಗೆ ನೀಡಿಕೆಯ ಆರೋಪ
  • ಸದಸ್ಯರಿಂದ ಪಿಡಿಒ ತರಾಟೆ, ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ತಾಕೀತು
  •  ಹಗೆ ಸಾಧನೆ ಮಾಡಬೇಡಿ
  •  ಒಂದೂವರೆ ವರ್ಷ ಕಳೆದರೂ ಕ್ರಿಯಾ ಯೋಜನೆ ಆಗಿಲ್ಲ
  •  ಮಳೆಗಾಲ ಬಂತು, ಚರಂಡಿ ದುರಸ್ಥಿ ಆಗಿಲ್ಲ

 

 

ಉಪ್ಪಿನಂಗಡಿ: ಪಿಡಿಒರವರೇ ತಾವು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಸರ್ವಾಧಿಕಾರಿಯಾಗಿ ವರ್ತಿಸುತ್ತೀರಿ, ಪ್ರತಿಯೊಂದು ವಿಚಾರವನ್ನೂ ಏಕಪಕ್ಷೀಯವಾಗಿ, ಪಂಚಾಯಿತಿ ಅಧ್ಯಕ್ಷರನ್ನು ತೀರಾ ಲಘುವಾಗಿ ಪರಿಗಣಿಸಲಾಗಿ ಕಡೆಗಣಿಸುತ್ತಿದ್ದೀರಿ ಇದನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎಂದು ಪಿಡಿಒರನ್ನು ತರಾಟೆಗೆ ತೆಗೆದುಕೊಂಡ ಪಂಚಾಯಿತಿ ಸದಸ್ಯರುಗಳು ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಒತ್ತುಕೊಟ್ಟು ಕೆಲಸ ಮಾಡುವಂತೆ ತಾಕೀತು ಮಾಡಿದ ಘಟನೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ಮೇ.12ರಂದು ನಡೆದ ಸಭೆಯಲ್ಲಿ ಕಾರ್‍ಯಸೂಚಿ ಪ್ರಕಾರ ಅಂಗಡಿ, ಕಟ್ಟಡ ಪರವಾಣಿಗೆ ನೀಡುವ ಬಗ್ಗೆ ಪಿಡಿಒ ತಿಳಿಸುತ್ತಿದ್ದಂತೆ ಆಕ್ಷೇಪಿಸಿದ ಸದಸ್ಯರುಗಳು ಪಂಚಾಯಿತಿಯಲ್ಲಿ ಅಂಗಡಿ ಪರವಾಣಿಗೆ ನೀಡುವಾಗ ಇಲ್ಲಿ ಶ್ರೀಮಂತರಿಗೊಂದು ನಿಯಮ, ಬಡವರಿಗೊಂಡು ನಿಯಮ ನಡೆಯುತ್ತಿದೆ. ಪಂಚಾಯಿತಿ ನಿಯಮ ಜನ ಸಾಮಾನ್ಯರಿಗೆ ಮಾತ್ರ ಅನ್ವಯಿಸುವಂತಿದ್ದು, ರಿಲಯನ್ಸ್, ಮೋರ್‌ನಂತಹ ಬೃಹತ್ ಉದ್ದಿಮೆದಾರರ ವ್ಯಾಪಾರ ಪರವಾನಿಗೆ ಅರ್ಜಿಯನ್ನು ಕನಿಷ್ಠ ಅಧ್ಯಕ್ಷರ ಗಮನಕ್ಕೂ ತಾರದೇ, ಸಾಮಾನ್ಯ ಸಭೆಗೂ ಇಡದೇ ತಾನೇ ತಾನಾಗಿ ಪರವಾನಿಗೆ ನೀಡಿದ್ದೀರಿ, ಇದೆಷ್ಟು ಸರಿ ಎಂದು ಪಿಡಿಒರನ್ನು ಅಧ್ಯಕ್ಷರಾದಿಯಾಗಿ ಪಂಚಾಯಿತಿ ಸದಸ್ಯರೆಲ್ಲರೂ ತೀವ್ರ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ “ಈ ವೇಳೆ ಇಂತಹ ಹೊಂದಾಣಿಕೆಗೆ ನೀವು ಸಹಕರಿಸದಿದ್ದರೆ ನಿಮ್ಮ ಬೇಡಿಕೆಗೂ ತೊಂದರೆಯಾದೀತು” ಎಂದರು. ಇದರಿಂದ ಆಕ್ರೋಶಿತರಾದ ಸದಸ್ಯರುಗಳು ನೀವು ಯಾಕೆ ಹೀಗೆ ಹಗೆ ಸಾಧನೆ ರೀತಿ ವರ್ತಿಸುತ್ತಿದ್ದೀರಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ, ಪಂಚಾಯಿತಿಯ ಅಭಿವೃದ್ಧಿಗೆ ಸಹಕರಿಸಿ ಎಂದರು

.
ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ “ನನ್ನ ಗಮನಕ್ಕೆ ತಾರದೆ ಗೊತ್ತಿಲ್ಲದೆ ತಾತ್ಕಾಲಿಕ ನೆಲೆಯಲ್ಲಿ ಸಿಬ್ಬಂದಿಯೋರ್ವರನ್ನು ನೇಮಿಸಿದ್ದೀರಿ”, ಇದು ಸರಿನಾ? ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡರು. ಇದರಿಂದ ತೀರಾ ಆಕ್ರೋಶಿತರಾದ ಸದಸ್ಯರುಗಳು “ನಿಮ್ಮ ಈ ನಡೆ ಸರಿ ಅಲ್ಲ, ನಮಗೆ ಗ್ರಾಮ ಅಭಿವೃದ್ಧಿ ಆಗಬೇಕು, ಅಧ್ಯಕ್ಷರು ಮತ್ತು ಪಿಡಿಒ ಈ ಹಿಂದಿನ ವಿಚಾರವನ್ನು ಬಿಟ್ಟು ಮುಂದೆ ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಿ” ಎಂದು ಸಲಹೆ ನೀಡಿದರು.

ಹಗೆ ಸಾಧನೆ ಮಾಡಬೇಡಿ:
ವಾಣಿಜ್ಯ ಮಳಿಗೆ, ವಸತಿ ಸಮುಚ್ಚಯಗಳಿಗೆ ಮಾತ್ರ ಕಠಿಣ ಕ್ರಮ ಕೈಗೊಳ್ಳಲು ಪಂಚಾಯಿತಿ ನಿರ್ಣಯ ಕೈಗೊಂಡಿರುವಾಗ, ೪೦೦ ಒಂಟಿ ಮನೆಗಳಿರುವ ಗ್ರಾಮದಲ್ಲಿ ಒಂದು ಮನೆಯ ಪೈಪಿಗೆ ಮಾತ್ರ ಕಾಂಕ್ರೀಟ್ ಮಿಶ್ರಣ ಸುರಿಯಲು ಕಾರಣವೇನು? ಎಂದು ಪ್ರಶ್ನಿಸಿದ ಸದಸ್ಯರು ನಿಮ್ಮ ದ್ವೇಷ ಸಾಧನೆಯ ಕೃತ್ಯಕ್ಕೆ ಪಂಚಾಯಿತಿ ಸದಸ್ಯರನ್ನು ಬಲಿಕೊಡಬೇಡಿ ಎಂದರು. ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷ ಸಣ್ಣಣ್ಣನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು ಸಮಿತಿಯ ಅಧ್ಯಕ್ಷನೆಂದ ಮಾತ್ರಕ್ಕೆ ಆಡಳಿತ ಮಂಡಳಿಯನ್ನು ದಿಕ್ಕರಿಸಿ ನಡೆಯುವುದಾಗಲಿ, ಪಿಡಿಒ ಅವರ ದ್ವೇಷ ಸಾಧನೆಗೆ ಕೈ ಜೋಡಿಸುವುದಾಗಲಿ ಮಾಡಿದರೆ ಯಾರೂ ಸಹಿಸಲಾರರು ಎಂದು ಎಚ್ಚರಿಸಿದರು.

ವೈಯಕ್ತಿಕ ದ್ವೇಷ ಸಾಧನೆಗೆ ಅಧಿಕಾರ ದುರುಪಯೋಗ ಪಡಿಸುವ ಕೃತ್ಯವನ್ನು ಮುಂದುವರೆಸಿದರೆ ಜನತೆ ಸಹನೆ ಕಳೆದುಕೊಂಡು ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾದರೆ ಮೊದಲಿಗೆ ನಾವೇ ಬಲಿಯಾಗಬೇಕಾಗುತ್ತದೆ. ಹೊಣೆ ಅರಿತು ವರ್ತನೆ ತೋರಿ ಎಂದು ಸಲಹೆ ನೀಡಿದರು.

ಒಂದೂವರೆ ವರ್ಷ ಕಳೆದರೂ ಕ್ರಿಯಾ ಯೋಜನೆ ಆಗಿಲ್ಲ:
ಪಂಚಾಯತ್ ಆಡಳಿತ ಬಂದು ಒಂದೂವರೆ ವರ್ಷವಾಯಿತು. ಆದರೆ ಇನ್ನೂ ಕ್ರಿಯಾ ಯೋಜನೆ ತಯಾರಿಸಿಲ್ಲ, ಅಗತ್ಯ ಕಾಮಗಾರಿಗಳ ಬಗ್ಗೆ ತೀರಾ ಮಂದಗತಿಯ ನಡೆ ತೋರಿಸುತ್ತಿರುವುದರಿಂದಾಗಿ ಸಾರ್ವಜನಿಕ ಟೀಕೆಗೆ ಗುರಿಯಾಗುತ್ತಿದ್ದೇವೆ ಎಂದು ಸದಸ್ಯರು ಅಧ್ಯಕ್ಷರು ಮತ್ತು ಪಿಡಿಒರನ್ನು ಉದ್ದೇಶಿಸಿ ಮಾತನಾಡಿ ನಿಮ್ಮಲ್ಲಿ ಏನೇ ಅಸಮಾಧಾನ ಇದ್ದರೂ, ಅದನ್ನು ಬಿಟ್ಟು ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡಿ ಎಂದರು.

ಮಳೆಗಾಲ ಬಂತು ಚರಂಡಿ ದುರಸ್ಥಿ ಆಗಿಲ್ಲ:

ಮಳೆಗಾಲ ಬಂದಾಯಿತು. ಆದರೆ ಯಾವುದೇ ವಾರ್ಡುನಲ್ಲಿ ಚರಂಡಿ ಕೆಲಸ ಆಗಿಲ್ಲ, ಅತೀ ಶೀಘ್ರವಾಗಿ ಚರಂಡಿ ಕೆಲಸವನ್ನು ಮಾಡಬೇಕು ಎಂದು ಸದಸ್ಯರುಗಳು ಪಿಡಿಒರನ್ನು ಆಗ್ರಹಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪೈ, ಕೆ. ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ. ತೌಸೀಫ್, ಲೋಕೇಶ್ ಬೆತ್ತೋಡಿ, ಧನಂಜಯ ಕುಮಾರ್, ವಿದ್ಯಾಲಕ್ಷ್ಮೀ ಪ್ರಭು, ಯು.ಕೆ. ಇಬ್ರಾಹಿಂ, ಸಣ್ಣಣ್ಣ ಯಾನೆ ಸಂಜೀವ ಮಡಿವಾಳ ಮಾತನಾಡಿದರು. ಮೈಸಿದಿ ಇಬ್ರಾಹಿಂ, ಲಲಿತಾ, ಉಷಾ ನಾಯ್ಕ್, ರುಕ್ಮಿಣಿ, ಶೋಭಾ, ಜಯಂತಿ, ವನಿತಾ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಲೆಕ್ಕ ಸಹಾಯಕಿ ಜ್ಯೋತಿ ವಂದಿಸಿದರು.

LEAVE A REPLY

Please enter your comment!
Please enter your name here