ಪುತ್ತೂರು ನಗರದಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಬೃಹತ್ ವಾಹನ ಜಾಥ

0

  • ಮೇ.26ರಂದು ಅ.3ರಿಂದ ವಾಹನ ಜಾಥ-4.30ರಿಂದ ಸಭಾ ಕಾರ್ಯಕ್ರಮ
  • ಶಾಸಕರ ನೇತೃತ್ವದಲ್ಲಿ ಲಂಚ, ಭ್ರಷ್ಟಾಚಾರ ಮುಕ್ತ ತಾಲೂಕು ಘೋಷಣೆ
  • ಲಂಚವಾಗಿ ಪಡೆದ ಹಣವನ್ನು ವಾಪಾಸು ಕೊಡಿಸುವ ಆಂದೋಲನಕ್ಕೆ ಚಾಲನೆ

ಕಳೆದ ಮೂರು ತಿಂಗಳಿನಿಂದ ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ. ಸುದ್ದಿ ಜನಾಂದೋಲನಕ್ಕೆ ಅಮೋಘ ಬೆಂಬಲ ದೊರಕಿದೆ. ಗ್ರಾಮ-ಗ್ರಾಮಗಳಲ್ಲಿ, ನಗರದಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧದ ಫಲಕ ಹಾಗೂ ಬ್ಯಾನರ್‌ಗಳು ಅಳವಡಿಕೆಯಾಗಿವೆ. ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾ.ಪಂ. ಲಂಚ, ಭ್ರಷ್ಟಾಚಾರ ಮುಕ್ತ ಘೋಷಣೆ ಕೂಗಿದ್ದಾರೆ. ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಹಲವಾರು ಪಂಚಾಯತ್‌ಗಳು ಆ ದಿಕ್ಕಿನಲ್ಲಿ ನಿರ್ಣಯ ಕೈಗೊಳ್ಳಲಿವೆ. ಉತ್ತಮ ಸೇವೆ ಮಾಡುತ್ತಿರುವ ಅಧಿಕಾರಿಗಳ ಗುರುತಿಸುವ ಕಾರ್ಯಕ್ರಮ ನಡೆಯುತ್ತಿದೆ. ಪುತ್ತೂರು ತಾಲೂಕು ಪೂರ್ಣವಾಗಿ ಲಂಚ, ಭ್ರಷ್ಟಾಚಾರ ಮುಕ್ತ, ಉತ್ತಮ ಸೇವೆಯ ತಾಲೂಕು ಆಗುವತ್ತ ಜನಾಂದೋಲನ ಆಗಬೇಕಾಗಿದೆ. ಅದಕ್ಕಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಪುತ್ತೂರಿನಲ್ಲಿ ಬೃಹತ್ ವಾಹನ ಜಾಥ ನಡೆಸುವುದಾಗಿ ತೀರ್ಮಾನಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ ಮೇ೨೬ರ ಅಪರಾಹ್ನ ತಾಲೂಕಿನ ಮೂಲೆ ಮೂಲೆಗಳಿಂದ ಜನರು ವಾಹನ ಜಾಥದಲ್ಲಿ ಬಂದು ಪುತ್ತೂರಿನಲ್ಲಿ ಸೇರಿ ಅಪರಾಹ್ನ ೩ ಗಂಟೆಯಿಂದ ಪುತ್ತೂರು ನಗರದಲ್ಲಿ ವಾಹನ ಜಾಥ ನಡೆಸಲಿದ್ದಾರೆ. ರಸ್ತೆಯ ಎರಡೂ ಬದಿಯ ಜನರು ಲಂಚ, ಭ್ರಷ್ಟಾಚಾರ ವಿರುದ್ಧದ ಜಾಥಕ್ಕೆ ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಲಿದ್ದಾರೆ, ಘೋಷಣೆ ಕೂಗಲಿದ್ದಾರೆ. ಆ ಮೂಲಕ ಭ್ರಷ್ಟಾಚಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಲಿದ್ದಾರೆ. ಅಧಿಕಾರಿಗಳು ಲಂಚವಾಗಿ ಜನತೆಯಿಂದ ಪಡೆದ ಹಣವನ್ನು ಜನತೆಗೆ ಹಿಂತಿರುಗಿಸುವಂತೆ ಮಾಡುವ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಉತ್ತಮ ಸೇವೆ ಮಾಡುವವರಿಗೆ ಗೌರವ ಸಮರ್ಪಿಸಲಿದ್ದಾರೆ. ಜಾಥದ ನಂತರ ೪.೩೦ಕ್ಕೆ ಪುತ್ತೂರು ಟೌನ್ ಬ್ಯಾಂಕ್‌ನ ಸಭಾಭವನದಲ್ಲಿ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ, ಸಂಘಸಂಸ್ಥೆಗಳ, ಜನಪ್ರತಿನಿಧಿಗಳ, ಪ್ರಮುಖರ, ಪ್ರತಿ ಗ್ರಾಮದ ಪ್ರತಿನಿಧಿಗಳ ಸಭೆ ನಡೆಯಲಿದೆ. ಅಲ್ಲಿ ಲಂಚ, ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ, ಸಮಸ್ಯೆಗಳ ಮತ್ತು ಅಭಿವೃದ್ಧಿಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಅಂತಿಮವಾಗಿ ಪುತ್ತೂರು ತಾಲೂಕನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುವ ಘೋಷಣೆಯಾಗಲಿದೆ. ಈ ಮೇಲಿನ ಎಲ್ಲಾ ಘಟನೆಗಳನ್ನು ಚಿತ್ರೀಕರಿಸಿ ಮೇ೨೯ರಂದು ದೆಹಲಿಯಲ್ಲಿ ನಡೆಯಲಿರುವ ದ.ಕ., ಉಡುಪಿ ಜಿಲ್ಲೆಯವರ “ನಮ್ಮೂರು ನಮ್ಮ ಹೆಮ್ಮೆ” ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಲಾಗುವುದು ಹಾಗೂ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯ ಮೂಲಕ ಸರ್ಕಾರದ ಮತ್ತು ದೇಶದ ಗಮನಕ್ಕೆ ತರಲು ಪ್ರಯತ್ನಿಸಲಾಗುವುದು.

 

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ವಾಹನ ಚಾಲಕರು, ಜನತೆ ತಮ್ಮ ಮಾಹಿತಿಯನ್ನು ಕಳುಹಿಸಬೇಕಾಗಿ ವಿನಂತಿ. ವಾಟ್ಸಪ್ ನಂಬ್ರ: 9620372389

LEAVE A REPLY

Please enter your comment!
Please enter your name here