ಸರ್ವೆ ಕಲ್ಪಣೆ ಶಾಲಾ ಅದ್ಧೂರಿ ಪ್ರಾರಂಭೋತ್ಸವ

0

  • ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

 

 

ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಮಾಡಲಾಯಿತು.


ವಿದ್ಯಾರ್ಥಿಗಳನ್ನು ಶಾಲೆಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ಶಾಲೆಯಿಂದ ರೆಂಜಲಾಡಿ ವರೆಗೆ ಬ್ಯಾಂಡ್, ವಾದ್ಯಗಳೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು. ಎಸ್.ಡಿ.ಎಂ.ಸಿಯವರು, ಶಿಕ್ಷಕ ವೃಂದದವರು ಹಾಗೂ ಪೋಷಕರು ಮೆರವಣಿಗೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಮೆರವಣಿಗೆಯುದ್ದಕ್ಕೂ ಶಾಲೆಗೆ ಮತ್ತು ಮಕ್ಕಳ ಕಲಿಕೆಗೆ ಸಂಬಂಧಪಟ್ಟ ವಿಚಾರಗಳಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿಗಳು ಬೆಲೂನುಗಳನ್ನು ಹಾರಿಸಿ ಸಂಭ್ರಮಟ್ಟರು. ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಕಲ್ಪಣೆ ಕೆ.ಜಿ.ಎನ್ ಸೂಪರ್ ಮಾರ್ಕೆಟ್‌ನ ಮಾಲಕ ಮಹಮ್ಮದ್ ಕೆ.ಜಿ.ಎನ್ ಅವರು ತಮ್ಮ ಅಂಗಡಿಯ ಬಳಿ ಸಿಹಿ ತಿಂಡಿ ವಿತರಿಸಿದರು. ಮೆರವಣಿಗೆ ಶಾಲೆಯ ಬಳಿಗೆ ಬಂದಾಗ ಶಿಕ್ಷಕರು ವಿದ್ಯಾರ್ಥಿಗಳಿಗೆ ಆರತಿ ಎತ್ತುವ ಮೂಲಕ ಮಕ್ಕಳನ್ನು ಬರ ಮಾಡಿಕೊಂಡರು. ನಂತರ ಸಿಹಿ ತಿಂಡಿ ವಿತರಿಸಲಾಯಿತು.

ಶಾಲೆಯ ಇನ್ನಷ್ಟು ಅಭಿವೃದ್ಧಿಗೆ ಚಿಂತನೆ-ಹನೀಫ್ ರೆಂಜಲಾಡಿ
ನಂತರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ ಶಾಲಾ ಪ್ರಾರಂಭೋತ್ಸವವನ್ನು ನಾವೆಲ್ಲರೂ ಸೇರಿ ಅದ್ದೂರಿಯಾಗಿ ಮತ್ತು ಅರ್ಥ ಪೂರ್ಣವಾಗಿ ಮಾಡಿದ್ದೇವೆ, ಕಲಿಕಾ ಚೇತರಿಕೆ ವರ್ಷದಲ್ಲಿ ನಮ್ಮ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು ಶಿಕ್ಷಕರು, ಎಸ್‌ಡಿಎಂಸಿ ಹಾಗೂ ಪೋಷಕರು ಸೇರಿಕೊಂಡು ಒಗ್ಗಟ್ಟಿನಿಂದ ಶಾಲೆಯ ಅಭಿವೃದ್ಧಿಯನ್ನು ಮಾಡಲಿದ್ದೇವೆ, ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಶಾಲೆಯ ಕೆಲಸ ಕಾರ್ಯಗಳು ನಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಹೇಳಿದರು. ೧೦ ದಿನಗಳೊಳಗಾಗಿ ಶಾಲೆಯಲ್ಲಿ ಪೋಷಕರ ಸಭೆ ಕರೆಯಲಿದ್ದು ಅದರಲ್ಲಿ ಮಕ್ಕಳ ಪೋಷಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.

ನಷ್ಟಗೊಂಡ ಕಲಿಕೆಯನ್ನು ಭರಿಸಲಿದ್ದೇವೆ-ಸುನೀತಾ
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕಿ ಸುನೀತಾ ಅವರು ಕೊರೋನಾ ಸಮಯದಲ್ಲಿ ನಷ್ಟಗೊಂಡ ಶೈಕ್ಷಣಿಕ ಅವಧಿಯನ್ನು ಭರಿಸುವ ಸಲುವಾಗಿ ಸರಕಾರ ಈ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಿದ್ದು ಶಿಕ್ಷಣ ಇಲಾಖೆಯ ಆದೇಶದಂತೆ ಮುಂದಿನ ತರಗತಿಗಳು ನಡೆಯಲಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.

ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ, ಶಾಲಾ ಎಸ್‌ಡಿಎಂಸಿ ಸದಸ್ಯ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ ಶುಭ ಹಾರೈಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಉಮಾವತಿ, ಸದಸ್ಯರಾದ ತಾಜು ರೆಂಜಲಾಡಿ, ನಿಶಾ ಲವಕುಮಾರ್ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ನೂತನ ಮುಖ್ಯ ಶಿಕ್ಷಕಿಗೆ ಸ್ವಾಗತ:
ಕಲ್ಪಣೆ ಸ.ಹಿ.ಪ್ರಾ.ಶಾಲೆಗೆ ನೂತನ ಮುಖ್ಯ ಗುರುಗಳಾಗಿ ಕರ್ತವ್ಯಕ್ಕೆ ಹಾಜರಾದ ಕಮಲ ಅವರಿಗೆ ಶಾಲೆಯ ವತಿಯಿಂದ ಸ್ವಾಗತ ಕಾರ್ಯಕ್ರಮ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿಯವರು ಹೂಗುಚ್ಚ ನೀಡಿ ಸ್ವಾಗತಿಸಿದರು.

ಶಾಲಾ ಮುಖ್ಯಗುರು ಕಮಲ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ್ ವಂದಿಸಿದರು. ಶಾಲಾ ದೈ.ಶಿ.ಶಿಕ್ಷಕ ನವೀನ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸತೀಶ್, ಅನಿತಾ ಜ್ಯೋತಿ ಸಹಕರಿಸಿದರು.

LEAVE A REPLY

Please enter your comment!
Please enter your name here