ತೆರವಾಗದ ನದಿ ದಿಬ್ಬಗಳು: ಕೃತಕ ನೆರೆ ಭೀತಿ

0

 

 

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ- ಕುಮಾರಧಾರ ಸಂಗಮಗೊಳ್ಳುವ ಜಾಗದಲ್ಲಿ ನದಿಯುದ್ದಕ್ಕೂ ದಿಬ್ಬಗಳು ನಿರ್ಮಾಣವಾಗಿದ್ದು, ಅದರಲ್ಲಿ ಕುರುಚಲು ಕಾಡುಗಳು ಬೆಳೆದಿವೆ. ಇದನ್ನು ತೆರವುಗೊಳಿಸದಿದ್ದಲ್ಲಿ ನೀರಿನ ಸರಾಗ ಹರಿಯುವಿಕೆಗೆ ತಡೆಯಾಗಿ ಕೃತಕ ನೆರೆ ಬರುವ ಭೀತಿಯೂ ಎದುರಾಗಿದೆ.

ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಸಂಗಮಗೊಳ್ಳುವ ಉಪ್ಪಿನಂಗಡಿಯಲ್ಲಿ ನದಿ ಒಡಲು ತುಂಬಾ ದಿಬ್ಬಗಳೇ ತುಂಬಿಕೊಂಡಿದೆ. ಸಂಪೂರ್ಣ ಬಂಡೆಕಲ್ಲುಗಳಿಂದಾವೃತವಾಗಿದ್ದ ಸಂಗಮ ಸ್ಥಳದ ಕುಮಾರಧಾರಾ ನದಿ ಭಾಗದಲ್ಲಿ ಕಳೆದ ಕೆಲ ವರ್ಷಗಳಿಂದ ಮರಳು ಮಿಶ್ರಿತ ಮಣ್ಣು ರಾಶಿ ಬಿದ್ದು ದಿಬ್ಬಗಳು ಮೂಡುತ್ತಿದ್ದು, ಅದರಲ್ಲಿ ಕುರುಚಲು ಗಿಡಗಳು ತುಂಬಿ ಅವು ದಿಬ್ಬಗಳಾಗೇ ಉಳಿದುಕೊಳ್ಳುತ್ತಿವೆ. ಪ್ರಸಕ್ತ ಆ ಕುರುಚಲು ಗಿಡಗಳು ವಿಶಾಲವಾಗಿಯೂ ಎತ್ತರವಾಗಿಯೂ ಬೆಳೆದಿರುತ್ತದೆ. ಇದರಿಂದಾಗಿ ಮಳೆಗಾಲದಲ್ಲಿ ನದಿ ನೀರಿನ ಸರಾಗ ಹರಿಯುವಿಕೆಗೆ ತೊಂದರೆಯುಂಟಾಗಿ ನೆರೆಯಂತಹ ಸಮಸ್ಯೆ ಉದ್ಭವಿಸುವ ಬಗ್ಗೆ ಕಳೆದ ವರ್ಷ ನಡೆದ ನೆರೆ ಮುಂಜಾಗ್ರತಾ ಸಭೆಯಲ್ಲಿ ನಾಗರಿಕರು ಕಳವಳ ವ್ಯಕ್ತಪಡಿಸಿದ್ದರು. ಸ್ಥಳ ಪರಿಶೀಲನೆ ನಡೆಸಿದ ಶಾಸಕರು ನದಿ ಒಡಲ ದಿಬ್ಬವನ್ನು ತೆರವುಗೊಳಿಸಲು ತಹಶೀಲ್ದಾರ್ ರವರಿಗೆ ಸೂಚನೆ ನೀಡಿದ್ದರು. ಮಾತ್ರವಲ್ಲದೆ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಸಹಕಾರ ಪಡೆಯಲೂ ತಿಳಿಸಿದ್ದರು. ಶಾಸಕರ ನಿದೇರ್ಶನವನ್ನೂ ಅಧಿಕಾರಿಗಳು ಕಡೆಗಣಿಸಿದ್ದರಿಂದ ಈ ಬಾರಿಯೂ ಈ ಸಮಸ್ಯೆಗೆ ಮುಕ್ತಿ ದೊರೆಯದೇ ಸಮಸ್ಯೆ ಜೀವಂತವಾಗಿದೆ.

ಆದರೆ ಕಳೆದ ಬಾರಿ ಸಭೆಯ ಬೆನ್ನಲ್ಲೇ ನದಿಯ ನೀರಿನ ಮಟ್ಟ ಹೆಚ್ಚಳವಾದ ಕಾರಣ ದಿಬ್ಬ ತೆರವು ಕಾರ್ಯಾಚರಣೆ ಅಸಾಧ್ಯವಾಗಿದ್ದು, ಈ ಬಾರಿಯಾದರೂ ಈ ಬಗ್ಗೆ ಚಿಂತಿಸಬೇಕಾಗಿದೆ. ನದಿ ಒಡಲಲ್ಲಿ ಕೆಸರು ಮಣ್ಣು ಶೇಖರಣೆಗೊಂಡು ಅಲ್ಲಿ ಮೂಡುವ ಕುರುಚಲು ಗಿಡಗಂಟಿಗಳು ಬೆಳೆಬೆಳೆಯುತ್ತಾ ಮಣ್ಣು ಮರಳನ್ನು ತನ್ನಲ್ಲೇ ತಡೆ ಹಿಡಿದು, ವಿಶಾಲವಾಗಿ ಬೆಳೆಯುತ್ತಿರುವುದರಿಂದ ಇದೀಗ ದಿಬ್ಬಗಳೇ ಬಂಡೆಗಲ್ಲುಗಳಿಗಿಂತ ದೊಡ್ಡದಾಗಿ ಕಾಣಿಸುತ್ತಿದೆ.

ದಿಬ್ಬಗಳ ತೆರವು ಅನಿವಾರ್ಯ: ರಾಜಗೋಪಾಲ ಭಟ್
ನೇತ್ರಾವತಿ ನದಿಯುದ್ದಕ್ಕೂ ಕುರುಚಲು ಗಿಡಗಳಿಂದ ನಿರ್ಮಾಣವಾದ ದಿಬ್ಬಗಳು ನದಿಯೊಡಲಿನಲ್ಲಿ ಮಳೆಗಾಲದ ನೀರಿನ ಹರಿಯುವಿಕೆಯ ವೇಳೆ ಅಡಚಣೆಯನ್ನುಂಟು ಮಾಡುತ್ತಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿದೆ. ನೀರಿನ ಸರಾಗ ಹರಿಯುವಿಕೆಯನ್ನು ತಡೆಗಟ್ಟಿದಂತಾದಾಗ ಸಹಜವಾಗಿ ನೆರೆಯಂತಹ ಸಮಸ್ಯೆಗಳು ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಶಾಸಕರು ನೀಡಿದ ಸಲಹೆ ಸೂಚನೆಯನ್ನು ಅಧಿಕಾರಿಗಳು ಪಾಲಿಸಿದರೆ ಉತ್ತಮ . ಅಂತೆಯೇ ಪೇಟೆಯೊಳಗಿನ ಚರಂಡಿಯ ಹೂಳು ಎತ್ತುವಿಕೆಯನ್ನು ಮಳೆಗಾಲದ ಮುನ್ನಾ ಆದ್ಯತೆಯಲ್ಲಿ ಮಾಡುವಲ್ಲಿ ಪಂಚಾಯತ್ ಆಡಳಿತ ಗಮನ ಹರಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೈಲಾರ್ ರಾಜಗೋಪಾಲ ಭಟ್ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here