ಎಂಡೋ ಸಂತ್ರಸ್ತ ಕುಟುಂಬಕ್ಕೆ ಮಂಜೂರಾದ ಭೂಮಿ ಸಾರ್ವಜನಿಕ ಕೆರೆ ನಿರ್ಮಾಣಕ್ಕೆ ಕಾಯ್ದಿರಿಸಲು ಗ್ರಾ.ಪಂ. ನಿರ್ಣಯ ವಿರುದ್ಧ ಡಿಸಿಗೆ ದೂರು

0

ಉಪ್ಪಿನಂಗಡಿ : ಎಂಡೋ ಸಂತ್ರಸ್ತ ಕುಟುಂಬವೊಂದಕ್ಕೆ ಭೂ ಮಸೂದೆ ಕಾಯಿದೆಯಡಿ ಮಂಜೂರಾಗಿದ್ದ ಭೂಮಿಯನ್ನು ಸಾರ್ವಜನಿಕ ಕೆರೆ ನಿರ್ಮಾಣಕ್ಕೆ ಕಾಯ್ದಿರಿಸಬೇಕೆಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ನಿರ್ಣಯ ಕೈಗೊಂಡ ಹಾಗೂ ಭೂ ಸ್ವಾಧೀನಕ್ಕೆ ಯತ್ನಿಸುತ್ತಿರುವ ಕೃತ್ಯದ ಬಗ್ಗೆ ಸಂತ್ರಸ್ತ ಕುಟುಂಬವು ದ.ಕ ಜಿಲ್ಲಾಧಿಕಾರಿಯವರಿಗೆ ಲಿಖಿತ ದೂರು ಸಲ್ಲಿಸಿದೆ.
ಉಪ್ಪಿನಂಗಡಿ ಗ್ರಾಮದ ಮಾಧವ ಸಪಲ್ಯರವರು ತನ್ನಿಬ್ಬರು ಗಂಡು ಮಕ್ಕಳೂ ಎಂಡೋಪೀಡಿತರಾಗಿ ನರಳಾಟದ ಬದುಕು ಕಂಡು ತೀರಾ ಸಂಕಷ್ಠದ ಬದುಕು ನಡೆಸುತ್ತಿದ್ದಾರೆ. ಭೂ ಮಸೂದೆ ಕಾಯಿದೆಯ ಅನುಸಾರ ಎಲ್ ಆರ್ ವೈ ಟಿ 2125/74-75 ರಂತೆ ತನ್ನ ಮಾವನಿಗೆ ದೊರೆತ ಭೂಮಿಯಲ್ಲಿ ಇವರು ಕೃಷಿ ಕೃತಾವಳಿ ನಡೆಸಿಕೊಂಡು ಬರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮೂರು ಬಾರಿ ಉಪ್ಪಿನಂಗಡಿ ಪಂಚಾಯತ್ ಅಧಿಕಾರಿಗಳು ತಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ನಿರ್ದೇಶನ ನೀಡುತ್ತಿರುವ ಘಟನಾವಳಿಯನ್ನು ಕಂಡು ಕಳವಳಕ್ಕೆ ಸಿಲುಕಿದ್ದರು. ಈ ಬಗ್ಗೆ ಸ್ಥಳೀಯ ಪಂಚಾಯತ್ ಸದಸ್ಯರಲ್ಲಿ ವಿಚಾರಿಸಿದಾಗ ಪ್ರದೇಶದ ಸರ್ವೆ ನಂಬ್ರವೊಂದರಲ್ಲಿ ಸುಮಾರು 1 ಎಕ್ರೆ ಭೂಮಿಯನ್ನು ಸಾರ್ವಜನಿಕ ಕೆರೆ ನಿರ್ಮಿಸಲು ಕಾಯ್ದಿರಿಸಬೇಕೆಂದು ಪಂಚಾಯತ್ ಆಡಳಿತದಲ್ಲಿ ನಿರ್ಣಯಿಸಲಾಗಿದೆ ಎಂಬ ವಿಚಾರವು ಅವರಿಗೆ ತಿಳಿಯಲ್ಪಟ್ಟಿತ್ತು. ತನಗೆ ಕಾನೂನು ಬದ್ದವಾಗಿ ದೊರಕಿದ ಭೂಮಿಯಲ್ಲಿ ಸಾರ್ವಜಿನಿಕ ಕೆರೆ ನಿರ್ಮಿಸುವ ಪಂಚಾಯತ್ ನಿರ್ಣಯ ಹಾಗೂ ಪದೇ ಪದೇ ತಮ್ಮ ಜಮೀನಿಗೆ ತಂಡದೊಂದಿಗೆ ಆಗಮಿಸುವ ಪಂಚಾಯತ್ ಅಧಿಕಾರಿಗಳ ನಡೆಯು ಭೀತಿಯನ್ನು ಮೂಡಿಸುತ್ತಿದೆ ನಮ್ಮ ಭೂಮಿಗೆ ಯಾಕಾಗಿ ಬಂದಿರುವಿರಿ ಎಂದು ಪ್ರಶ್ನಿಸಿದಾಗಲೆಲ್ಲಾ ನಿರ್ಲಕ್ಷತನದ ವರ್ತನೆ, ಭೂಮಿಯಲ್ಲಿದ್ದ ಮರವನ್ನು ನೋಡಲು ಬಂದಿರುವುದೆಂದು ಉತ್ತರಿಸುವ ಅಧಿಕಾರಿಗಳ ನಡೆ ಮನೆಯಲ್ಲಿರುವ ಎಂಡೋ ಪೀಡಿತ ಮಗನ ಸಹಿತ ಕುಟುಂಬವನ್ನು ಕಂಗೆಡಿಸಿದೆ ಎಂದೂ, ತಮಗೆ ರಕ್ಷಣೆಯನ್ನು ಒದಗಿಸಬೇಕೆಂದೂ ಮಾಧವ ಸಪಲ್ಯರವರು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here