ಕೊಂಬಾರು: ಬೊಟ್ಟಡ್ಕದಲ್ಲಿ ಆಗಬೇಕಿದೆ ರೈಲ್ವೇ ಅಂಡರ್‌ಪಾಸ್ ವ್ಯವಸ್ಥೆ

0

  • ಬೇಡಿಕೆ ಈಡೇರಿದರೆ ವಿದ್ಯಾರ್ಥಿಗಳು, ಕೃಷಿಕರಿಗೆ ಅನುಕೂಲ
  • ಮನವಿಗಳ ಮೇಲೆ ಮನವಿ ಸಲ್ಲಿಸಿದರೂ ಸಿಕ್ಕಿಲ್ಲ ಮನ್ನಣೆ

ಕಡಬ: ಮಂಗಳೂರು-ಬೆಂಗಳೂರು ರೈಲು ಮಾರ್ಗ ಹಾದುಹೋಗುತ್ತಿರುವ ಕೊಂಬಾರು ಗ್ರಾಮದ ಬೊಟ್ಟಡ್ಕ (93-94 ಕಿ.ಮೀ. ಮದ್ಯೆ ೨೦೦ ಮೀ.ನಲ್ಲಿ)ದಲ್ಲಿ ಮಕ್ಕಳು, ಕೃಷಿಕರು ಸೇರಿದಂತೆ ಪರಿಸರದ ಜನರು ಸಂಚರಿಸಲು ರೈಲ್ವೇ ಅಂಡರ್‌ಪಾಸ್ ನಿರ್ಮಿಸಬೇಕೆನ್ನುವ ಹಲವು ವರ್ಷಗಳ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.

ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಅತ್ಯಂತ ಅಪಾಯಕಾರಿ ರೀತಿಯಲ್ಲಿ ರೈಲು ಹಳಿಯನ್ನು ದಾಟಿ ಹೋಗುತ್ತಿರುವುದು.

 


ಗ್ರಾಮದ ಬೊಟ್ಟಡ್ಕ ಮತ್ತು ಕಲ್ಲರ್ತನೆ ಪ್ರದೇಶದ ನಡುವೆ ರೈಲು ಮಾರ್ಗ ಹಾದುಹೋಗುತ್ತಿದೆ. ಹತ್ತಿರದಲ್ಲಿಯೇ ಮೊಗೇರಡ್ಕ ಸರಕಾರಿ ಹಿ.ಪ್ರಾ.ಶಾಲೆಯೂ ಇದೆ. ಆ ಶಾಲೆಗೆ ಬರುವ ಪುಟಾಣಿ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ಸೇರಿದಂತೆ ಸ್ಥಳೀಯ ಜನರು ಅನಿವಾರ್ಯವಾಗಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ರೈಲು ಹಳಿಯನ್ನು ದಾಟಿ ತಮ್ಮ ಕೆಲಸಗಳಿಗೆ ತೆರಳಬೇಕಿದೆ.

ಶಾಲೆಗೆ ಹೋಗುವ ಪುಟಾಣಿ ಮಕ್ಕಳನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮನೆಯವರು ಹಳಿ ದಾಟಿಸಿ ಬಿಡಬೇಕಾದ ಅನಿವಾರ್ಯತೆ ಇಲ್ಲಿದೆ. ಕಲ್ಲಾಯ, ಕಲ್ಲರ್ತನೆ, ಬೊಟ್ಟಡ್ಕ, ಉರುಂಬಿ, ಮುಗೇರು ಮುಂತಾದ ಪ್ರದೇಶದ ಜನರಿಗೆ ಇಲ್ಲಿ ಅಂಡರ್ ಪಾಸ್ ನಿರ್ಮಾಣವಾದರೆ ಅನುಕೂಲವಾಗಲಿದೆ. ಕಲ್ಲಾಯ ಮತ್ತು ಕಲ್ಲರ್ತನೆ ಪ್ರದೇಶದ ಜನರಿಗಂತೂ ರಸ್ತೆಯೇ ಇಲ್ಲ. ಬೇಸಗೆಯಲ್ಲಿ ಹೊಳೆಯಲ್ಲಿ ನೀರು ಕಡಿಮೆಯಾದಾಗ ಮಾತ್ರ ಹೊಳೆ ದಾಟಿ ಸುತ್ತು ಬಳಸಿ ಸಂಚರಿಸಬಹುದು. ಮಳೆಗಾಲದಲ್ಲಿ ಹಳಿ ದಾಟಿ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕು. ಕೃಷಿ ಉತ್ಪ್ಪನ್ನಗಳು, ಗೊಬ್ಬರ ಸೇರಿದಂತೆ ಯಾವುದೇ ಸಾಮಾಗ್ರಿಗಳನ್ನು ಸಾಗಿಸಬೇಕಿದ್ದರೂ ತಲೆಹೊರೆಯಲ್ಲಿಯೇ ಸಾಗಿಸಬೇಕಾದ ದುರ್ದೈವ ಇಲ್ಲಿನ ಜನರದ್ದು. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಜನರ ಬವಣೆಯನ್ನು ನೀಗಿಸಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಹಲವು ವರ್ಷಗಳ ಬೇಡಿಕೆ
ಬೊಟ್ಟಡ್ಕದಲ್ಲಿ ರೈಲ್ವೇ ಅಂಡರ್‌ಪಾಸ್ ನಿರ್ಮಿಸಬೇಕೆನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳ ಹಿಂದೆ ಮಂಗಳೂರು-ಬೆಂಗಳೂರು ರೈಲು ಮಾರ್ಗವನ್ನು ಮೀಟರ್‌ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಪರಿವರ್ತಿಸುವ ಸಂದರ್ಭದಲ್ಲಿಯೂ ಸ್ಥಳೀಯ ಜನರು ರೈಲ್ವೇ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಗ್ರಾಮಸಭೆಗಳಲ್ಲಿಯೂ ಈ ಕುರಿತು ನಿರ್ಣಯಗಳನ್ನು ಕೈಗೊಂಡು ಸಂಬಂಧಪಟ್ಟವರಿಗೆ ರವಾನಿಸಲಾಗಿತ್ತು. ಆದರೆ ಜನರ ಬೇಡಿಕೆಗಳಿಗೆ ಇದುವರೆಗೆ ಯಾವುದೇ ಮನ್ನಣೆ ದೊರೆತಿಲ್ಲ.

ಪ್ರಶಸ್ತ ಜಾಗ


ಬೊಟ್ಟಡ್ಕದಲ್ಲಿ ರೈಲ್ವೇ ಅಂಡರ್‌ಪಾಸ್ ನಿರ್ಮಿಸಲು ಯಾವುದೇ ರೀತಿಯ ಸಮಸ್ಯೆಗಳಿಲ್ಲ. ರೈಲು ಮಾರ್ಗದ ಎರಡೂ ಬದಿಯಲ್ಲಿ ತಗ್ಗು ಪ್ರದೇಶವಾಗಿರುವುದರಿಂದ ಬೌಗೋಳಿಕವಾಗಿಯೂ ಇದು ಅತ್ಯಂತ ಪ್ರಶಸ್ತವಾದ ಜಾಗವಾಗಿದೆ. ರೈಲ್ವೇ ಇಲಾಖೆಗೆ ಸೇರಿದ ವಿಶಾಲವಾದ ಜಾಗ ಇಲ್ಲಿದ್ದು ಅರಣ್ಯ ಸೇರಿದಂತೆ ಯಾವುದೇ ತಕರಾರುಗಳೂ ಇಲ್ಲ. ಇಲ್ಲಿಯೇ ರೈಲ್ವೇ ಇಲಾಖೆಗೆ ಸೇರಿದ ಸಲಕರಣೆಗಳನ್ನು ಸಂಗ್ರಹಿಸಿಡುವ ಡಂಪಿಂಗ್ ಯಾರ್ಡ್ ಕೂಡ ಇರುವುದರಿಂದ ಇಲ್ಲಿ ರೈಲ್ವೇ ಅಂಡರ್‌ಪಾಸ್ ನಿರ್ಮಿಸಿದರೆ ಇಲಾಖೆಗೂ ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯ ಕೃಷಿ ಕಲ್ಲರ್ತನೆ ಆನಂದ ಗೌಡ.

ಬೊಟ್ಟಡ್ಕದಲ್ಲಿ ರೈಲ್ವೇ ಅಂಡರ್‌ಪಾಸ್ ನಿರ್ಮಿಸಿದರೆ ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸಂಸದರು ಹಾಗೂ ಸಚಿವರ ಜೊತೆ ಮಾತುಕತೆ ನಡೆಸಿ ನಮ್ಮ ಸಲಹಾ ಸಮಿತಿಯ ಸಭೆಯಲ್ಲಿ ರೈಲ್ವೇ ಇಲಾಖೆಯ ಉನ್ನತಾಧಿಕಾರಿಗಳ ಗಮನ ಸೆಳೆಯಲಾಗುವುದು.ವೆಂಕಟ್ ದಂಬೆಕೋಡಿ, ಸದಸ್ಯರು, ರೈಲ್ವೇ ಸಲಹಾ ಸಮಿತಿ,

LEAVE A REPLY

Please enter your comment!
Please enter your name here