ಪ್ರತಿ ಮನೆಯಲ್ಲೂ ಬಚ್ಚಲು ಗುಂಡಿ ನಿರ್ಮಿಸಿ ಆರೋಗ್ಯ ಕಾಪಾಡಿಕೊಳ್ಳಲು ಮನವಿ : ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆ

0

ಪುತ್ತೂರು: ಈಗಾಗಲೇ ಮಳೆಗಾಲ ಆರಂಭವಾಗುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿ ಶುರುವಾಗಲಿದೆ. ಆದ್ದರಿಂದ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಆದ್ದರಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಪ್ರತಿ ಮನೆಯವರು ಬಚ್ಚಲು ಗುಂಡಿಯನ್ನು ನಿರ್ಮಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಯಿತು.


ಸಭೆಯು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ರತನ್ ರೈಯವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಬಚ್ಚಲು ಗುಂಡಿ ನಿರ್ಮಾಣಕ್ಕೆ ರೂ.17 ಸಾವಿರ ಅನುದಾನ ನೀಡಲಾಗುತ್ತಿದ್ದು ಪ್ರತಿ ಮನೆಯವರು ತಮ್ಮ ಮನೆಯ ಸಮೀಪ ಬಚ್ಚಲು ಗುಂಡಿ ನಿರ್ಮಿಸಿ ಮನೆಯ ಕೊಳಚೆ, ತ್ಯಾಜ್ಯ ನೀರನ್ನು ಇದಕ್ಕೆ ಹರಿದು ಹೋಗುವಂತೆ ಮಾಡಿದರೆ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಬಹುದು ಆದ್ದರಿಂದ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಮನೆಯವರು ಕಡ್ಡಾಯವಾಗಿ ಬಚ್ಚಲು ಗುಂಡಿ ನಿರ್ಮಿಸುವಂತೆ ಕೇಳಿಕೊಂಡರು ಈ ಬಗ್ಗೆ ಸದಸ್ಯರು ತಮ್ಮ ವಾರ್ಡ್‌ನಲ್ಲಿ ಗ್ರಾಮಸ್ಥರ ಮನವೊಲಿಸುವಂತೆ ಕೇಳಿಕೊಳ್ಳಲಾಯಿತು.

ಅಮೃತ ಗ್ರಾಮ-ಶಾಸಕರಿಗೆ ಅಭಿನಂದನೆ

ಕೆದಂಬಾಡಿ ಗ್ರಾಮವನ್ನು ಅಮೃತ ಗ್ರಾಮ ಯೋಜನೆಗೆ ಸೇರ್ಪಡೆ ಮಾಡಿದ ಬಗ್ಗೆ ಶಾಸಕ ಸಂಜೀವ ಮಠಂದೂರುರವರಿಗೆ ಗ್ರಾಪಂ ವತಿಯಿಂದ ಅಧ್ಯಕ್ಷ ರತನ್ ರೈಯವರು ಅಭಿನಂದನೆ ಸಲ್ಲಿಸಿದರು. ಅಮೃತ ಗ್ರಾಮ ಯೋಜನೆಯಡಿ ಗ್ರಾಮಕ್ಕೆ ರೂ.25 ಲಕ್ಷ ಅನುದಾನ ದೊರೆಯಲಿದ್ದು ಇದು ಬರಬೇಕಾದರೆ ಸರಕಾರ ಸೂಚಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿದೆ. ಆದ್ದರಿಂದ ಈಗಾಗಲೇ ಸರಕಾರ ಸೂಚಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಇದರಲ್ಲಿ ಕೆರೆ ನಿರ್ಮಾಣಕ್ಕೆ ಅಮೃತ ಸರೋವರ ಯೋಜನೆಯಡಿ ಸುಮಾರು 30 ಲಕ್ಷ ರೂ.ವೆಚ್ಚದ ಕೆರೆ ನಿರ್ಮಾಣಕ್ಕೆ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ ಅಲ್ಲದೆ ಉದ್ಯಾನವನ ನಿರ್ಮಾಣಕ್ಕೂ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದರು. ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷರು ಮೂರು ತಾಲೂಕುಗಳನ್ನು ಗಮನದಲ್ಲಿಟ್ಟುಕೊಂಡು ಕೆದಂಬಾಡಿ ಗ್ರಾಮದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಎಂ.ಆರ್.ಎಫ್ ಘಟಕ ನಿರ್ಮಾಣದ ಬಗ್ಗೆ ಅನುದಾನಕ್ಕೆ ಸರಕಾರಕ್ಕೆ ಬರೆದುಕೊಳ್ಳಲು ನಿರ್ಣಯ ಮಾಡಲಾಯಿತು.

ಅಂಬೇಡ್ಕರ್ ಭವನಕ್ಕೆ ಜಾಗ ಗುರುತಿಸಲಾಗಿದೆ

ಕೆದಂಬಾಡಿ ಗ್ರಾಮಕ್ಕೆ ಅಂಬೇಡ್ಕರ್ ಭವನ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕುಯ್ಯಾರು ಎಂಬಲ್ಲಿ ಜಾಗ ಕಾದಿರಿಸಲಾಗಿದೆ. ಜಾಗದ ಗಡಿ ಗುರುತು ಕೂಡ ಮಾಡಲಾಗಿದ್ದು ಆರ್‌ಟಿಸಿಗೆ ಕಳುಹಿಸಲಾಗಿದೆ ಅಲ್ಲದೆ ಭವನಕ್ಕೆ ಅನುದಾನಕ್ಕೆ ಸರಕಾರಕ್ಕೆ ಮತ್ತು ಶಾಸಕರಿಗೆ ಬರೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಸರಕಾರಿ ಜಾಗಕ್ಕೆ ಬೋರ್ಡ್ ಹಾಕಿ

ಗ್ರಾಮದ ನಿಡ್ಯಾಣ ಎಂಬಲ್ಲಿ ಪಂಚಾಯತ್‌ನಿಂದ ಮೀಸಲಿರಿಸಿದ ಸರಕಾರಿ ಜಾಗ ಇದ್ದು ಇದಕ್ಕೆ ಪಂಚಾಯತ್‌ನಿಂದ ಬೋರ್ಡ್ ಹಾಕುವಂತೆ ತಿಳಿಸಲಾಗಿದ್ದರೂ ಇದುವರೆಗೆ ಬೋರ್ಡ್ ಹಾಕುವ ಕೆಲಸ ಆಗಿಲ್ಲ, ಈ ಜಾಗದಲ್ಲಿ ಮನೆ, ಕಟ್ಟಡ ನಿರ್ಮಾಣ ಆಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿದ್ದೇನೆ ಎಂದು ಪ್ರವೀಣ್ ಶೆಟ್ಟಿ ತಿಳಿಸಿದರು. ಈ ಜಾಗವನ್ನು ಎಸ್‌ಸಿ,ಎಸ್‌ಟಿ ಸಹಿತ ವಸತಿ ರಹಿತರಿಗೆ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ರತನ್ ರೈಯವರು ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸರಕಾರಿ ಬಾವಿಗಳ ದುರಸ್ತಿ

ಗ್ರಾಮದಲ್ಲಿರುವ ಸರಕಾರಿ ಬಾವಿಗಳನ್ನು ದುರಸ್ತಿ ಪಡಿಸುವ ಬಗ್ಗೆ ನಿರ್ಣಯಿಸಲಾಯಿತು. ಗ್ರಾಮದಲ್ಲಿ ಉಪಯೋಗದಲ್ಲಿರುವ ಸರಕಾರಿ ಬಾವಿಗಳಿದ್ದರೆ ಆ ಬಗ್ಗೆ ಪಂಚಾಯತ್‌ಗೆ ಮಾಹಿತಿ ನೀಡುವಂತೆ ಅಧ್ಯಕ್ಷರು ಕೇಳಿಕೊಂಡರು. ಇದಲ್ಲದೆ ಜನರಿಗೆ ಉಪಯೋಗವಾಗುವ ಸ್ಥಳದಲ್ಲಿ ಅವಶ್ಯಕತೆ ಇದ್ದರೆ ಸರಕಾರಿ ಬಾವಿ ಕೊರೆಯುವ ಬಗ್ಗೆಯೂ ಮಾಹಿತಿ ನೀಡಿದರು. ಈ ಎಲ್ಲಾ ಕಾಮಗಾರಿಗಳು ಉದ್ಯೋಗ ಖಾತರಿ ಯೋಜನೆಯ ಮೂಲಕ ನಡೆಯಲಿದೆ ಎಂದರು.

ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಪಂಚಾಯತ್‌ನಿಂದ ಸಹಾಯಧನ

ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ವರ್ಷವೂ ಗ್ರಾಮದ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ ನಿರ್ಣಯಿಸಲಾಯಿತು. 1 ನೇ ತರಗತಿಯಿಂದ ಪದವಿ ವಿದ್ಯಾಭ್ಯಾಸ ತನಕದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ವಿದ್ಯಾಭ್ಯಾಸ ಮಾಡುತ್ತಿರುವ ಗ್ರಾಮದ ವಿದ್ಯಾರ್ಥಿಗಳು ತಕ್ಷಣವೇ ಪಂಚಾಯತ್‌ಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಬಡವರಿಗೆ ತೊಂದರೆ ನೀಡುತ್ತಿದೆ 9/11

ಹಿಂದೆ ಗ್ರಾಮ ಪಂಚಾಯತ್‌ನಲ್ಲಿ ಆಗುತ್ತಿದೆ 9/11 ಪ್ರಸ್ತುತ ನಗರ ಪ್ರಾಧಿಕಾರದಲ್ಲಿ ಆಗುತ್ತಿರುವುದರಿಂದ ಗ್ರಾಮದ ಬಡಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ಕ್ರಮವನ್ನು ತಕ್ಷಣವೇ ರದ್ದುಪಡಿಸಿ ಈ ಹಿಂದಿನಂತೆ ಪಂಚಾಯತ್‌ನಲ್ಲೇ ಆಗುವಂತೆ ಆಗಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ನಗರ ಪ್ರಾಧಿಕಾರದಲ್ಲಿ 9/೧೧ ಆಗುತ್ತಿರುವುದರಿಂದ ಇದು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತೆ ಆಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು. ಆದ್ದರಿಂದ 9/11 ಅರ್ಜಿಗಳನ್ನು ನಗರ ಪ್ರಾಧಿಕಾರಕ್ಕೆ ಕಳುಹಿಸಿಕೊಡದೆ ಕೆಲ ದಿನ ಪಂಚಾಯತ್‌ನಲ್ಲೇ ಇಟ್ಟುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸರಕಾರದ ಸುತ್ತೋಲೆಗಳನ್ನು ಓದಿದರು. ಕಾರ್ಯದರ್ಶಿ ಸುನಂದ ರೈ ಸ್ವಾಗತಿಸಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿ ಜಯಂತ ಮೇರ್ಲ ಅರ್ಜಿಗಳನ್ನು ಓದಿದರು. ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಜಯಲಕ್ಷ್ಮೀ ಬಲ್ಲಾಳ್, ಸುಜಾತ, ರೇವತಿ, ವಿಠಲ ರೈ ಮಿತ್ತೋಡಿ, ಸುಜಾತ ಎನ್, ಅಸ್ಮಾ ಗಟ್ಟಮನೆ ಚರ್ಚೆಯಲ್ಲಿ ಪಾಲ್ಗೊಂಡರು. ಸಿಬ್ಬಂದಿಗಳಾದ ಗಣೇಶ್, ಮೃದುಳಾ, ಶಶಿಪ್ರಭಾ, ವಿದ್ಯಾಪ್ರಸಾದ್ ಸಹಕರಿಸಿದ್ದರು.

LEAVE A REPLY

Please enter your comment!
Please enter your name here