ಪಡೀಲ್ ಗೂಡಂಗಡಿಯಲ್ಲಿ 20  ವರ್ಷಗಳ ಹಿಂದೆ ದಿನಸಿ ಸಾಮಾಗ್ರಿ ಕಳವು ಪ್ರಕರಣ – ಆರೋಪಿ ಐಟಿ ಉದ್ಯೋಗಿಯನ್ನು ಬಂಧಿಸಿದ ಪುತ್ತೂರು ಪೊಲೀಸರು

0

ಪುತ್ತೂರು: ಪಡೀಲ್ ಗೂಡಂಗಡಿಯಲ್ಲಿ 2002 ನೇ ಜೂ.10 ರಂದು ದಿನಸಿ ಸಾಮಾಗ್ರಿಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಐಟಿ ಉದ್ಯೋಗಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ನೆಹರುನಗರ ಸ್ವಾಮಿ ಕಂಪೌಂಡ್ ನ ಚಿನ್ನಸ್ವಾಮಿ ಅವರ ಪುತ್ರ ಚೆನ್ನಕೇಶವ ಯಾನೆ ಸೂರ್ಯರಾಜ್ ಬಂಧಿತ ಆರೋಪಿ. ಚೆನ್ನಕೇಶವ ಅವರು ಪ್ರಸ್ತುತ ತಮಿಳುನಾಡು ರಾಜ್ಯದ ತಿರುನಾಳ್ ವೆಲ್ಲಿ ಜಿಲ್ಲೆಯ ಮರ್ಫಿನಗರದಲ್ಲಿ ಐಟಿ ಉದ್ಯೋಗಿಯಾಗಿದ್ದರು.

ಘಟನೆ ವಿವರ:
ಪುತ್ತೂರು ಪಡೀಲ್ ನಲ್ಲಿರುವ ಕುದ್ಮಾರು ನಿವಾಸಿ ವಸಂತ ಗೌಡ ಅವರ ಗೂಡಂಗಡಿಯಿಂದ 2002 ರ ಜೂ 10 ರಂದು ದಿನಸಿ ಸಾಮಾಗ್ರಿಗಳು ಮತ್ತು ರೂ.1500/- ಕಳವು ನಡೆದಿತ್ತು. ಈ ಕುರಿತು ಪೊಲೀಸರು ತನಿಖೆ ನಡೆಸಿ ನಾಲ್ವರು ಯುವಕರನ್ನು ಬಂಧಿಸಿದರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ವಿಚಾರಣೆ ವೇಳೆ ನ್ಯಾಯಾಧೀಶರು ಮೂವರು ಆರೋಪಿಗಳನ್ನು ದೋಷಮುಕ್ತರಾಗಿ ತೀರ್ಪು ನೀಡಿದ್ದರು. 4 ನೇ ಆರೋಪಿ ಚೆನ್ನಕೇಶವ ಅವರು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಹಾಗಾಗಿ ನ್ಯಾಯಾಲಯ ಅವರ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಆರೋಪಿ ಪತ್ತೆಗೆ ಠಾಣಾ ಹೆಡ್ ಕಾನ್ ಸ್ಟೇಬಲ್ ಪರಮೇಶ್ವರ ಅವರನ್ನು ನೇಮಕ ಮಾಡಿ ಆರೋಪಿ ವಾಸ್ತವ್ಯ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು , ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ಮಂಗಳೂರು ಮತ್ತು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಂತೆ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುನೀಲ್ ಕುಮಾರ್ ಮತ್ತು ಪೊಲೀಸ್ ಉಪನಿರೀಕ್ಷಕರುಗಳಾದ ರಾಜೇಶ್ , ನಸ್ರೀನ್ ತಾಜ್ ರವರ ಆದೇಶದಂತೆ ಮೇ 28 ರಂದು ಹೆಡ್ ಕಾನ್ ಸ್ಟೇಬಲ್ ಪರಮೇಶ್ವರ, ಜಗದೀಶ್ ಮತ್ತು ಕೇಶವರವರು ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿ ಮೇ ೩೦ ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಐಟಿ ಉದ್ಯೋಗಿಯಾದ ಚೆನ್ನಕೇಶವ:
ಕಳವು ಮಾಡಿದ ಸಂದರ್ಭದಲ್ಲಿ ಚೆನ್ನಕೇಶವ ಅವರಿಗೆ ೨೮ ವರ್ಷ ವಯಸ್ಸಾಗಿದ್ದು, ಬಳಿಕ ಅವರು ಶೈಕ್ಷಣಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿ ಎಮ್ ಸಿ ಎಫ್ ಮಾಡಿ ಐಟಿ ಉದ್ಯೋಗಿಯಾಗಿದ್ದರು.

LEAVE A REPLY

Please enter your comment!
Please enter your name here