ಮೇ 31: ಬ್ಯಾಂಕ್ ಆಫ್ ಬರೋಡದ ಡಿಜಿಎಂ, ಹಿರಿಯ ರಾಷ್ಟ್ರಮಟ್ಟದ ವೈಟ್‌ಲಿಪ್ಟರ್ ಪುತ್ತೂರಿನ ಬ್ಯಾಪ್ಟಿಸ್ಟ್ ಲೋಬೋ  ಸೇವಾ ನಿವೃತ್ತಿ

0


ಪುತ್ತೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುದೀರ್ಘ 35.6 ವರ್ಷಗಳ ಸೇವೆ ಸಲ್ಲಿಸಿರುವ ಬ್ಯಾಂಕ್ ಆಫ್ ಬರೋಡ(ಮೊದಲು ವಿಜಯಾ ಬ್ಯಾಂಕ್)ದ ಡಿಜಿಎಂ, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್‌ನ ಹಿರಿಯ ವಿದ್ಯಾರ್ಥಿ ಹಾಗೂ ರಾಷ್ಟ್ರಮಟ್ಟದ ವೈಟ್‌ಲಿಪ್ಟರ್ ಆಗಿರುವ ಬ್ಯಾಪ್ಟಿಸ್ಟ್ ಲೋಬೋರವರು ಮೇ 31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಬಂಟ್ವಾಳ ತಾಲೂಕಿನ ಬಿಳಿಯೂರು ದಿ.ಪಿಯಾದ್ ಲೋಬೋ ಹಾಗೂ ದಿ.ಮೆರ್ಸಿನ್ ಲೋಬೋರವರ ಏಳು ಮಕ್ಕಳ ಪೈಕಿ ಕೊನೆಯವರಾಗಿ ಜನಿಸಿದ ಬ್ಯಾಪ್ಟಿಸ್ಟ್ ಲೋಬೋರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಿಳಿಯೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಉಪ್ಪಿನಂಗಡಿ ಸಂತ ಫಿಲೋಮಿನಾ ಪ್ರಾಥಮಿಕ ಶಾಲೆಯಲ್ಲಿ, ಎಂಟರಿಂದ ದ್ವಿತೀಯ ಪಿಯುಸಿ ಹಂತದವರೆಗಿನ ಶಿಕ್ಷಣವನ್ನು ಉಪ್ಪಿನಂಗಡಿ ಜ್ಯೂನಿಯರ್ ಕಾಲೇಜ್‌ನಲ್ಲಿ, 1983-86ರಲ್ಲಿ ಬಿಎ ಪದವಿ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಫಿಲೋಮಿನಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಮೇಜರ್ ವೆಂಕಟ್ರಾಮಯ್ಯ ಹಾಗೂ ಧರ್ಮಗುರು ವಂ|ಎಫ್.ಎಕ್ಸ್ ಗೋಮ್ಸ್‌ರವರ ಮಾರ್ಗದರ್ಶನದಲ್ಲಿ 1983ರಲ್ಲಿ ಬ್ಯಾಪ್ಟಿಸ್ಟ್ ಲೋಬೋರವರು ವೈಟ್‌ಲಿಪ್ಟಿಂಗ್ ಅನ್ನು ಆಯ್ಕೆ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಸಾಧನೆಯನ್ನು ಮಾಡಿರುತ್ತಾರೆ. ವೈಟ್‌ಲಿಪ್ಟಿಂಗ್‌ನಲ್ಲಿ ಮಾಡಿದ ಸಾಧನೆಗಾಗಿ ಕ್ರೀಡಾ ಕೋಟಾದಡಿಯಲ್ಲಿ ವಿಜಯಾ ಬ್ಯಾಂಕ್‌ನಲ್ಲಿ ಉದ್ಯೋಗ ಗಿಟ್ಟಿಸಿದ್ದು, ಅಂದು ಶಾಸಕರಾಗಿದ್ದ ವಿನಯಕುಮಾರ್ ಸೊರಕೆಯವರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿರುತ್ತಾರೆ.

1986, ಡಿಸೆಂಬರ್ ೧ ರಂದು ವಿಜಯಾ ಬ್ಯಾಂಕ್‌ನಲ್ಲಿ ಉದ್ಯೋಗಕ್ಕೆ ಭರ್ತಿಯಾದ ಬಳಿಕ ಮೊದಲಿಗೆ ಬೆಂಗಳೂರಿನಲ್ಲಿನ ವಿಜಯಾ ಬ್ಯಾಂಕ್‌ನ ಪ್ರಧಾನ ಕಾರ್ಯಾಲಯದಲ್ಲಿ ವೃತ್ತಿ ಆರಂಭಿಸಿದ್ದು, ಬೆಂಗಳೂರಿನ ವಿವಿಧ ಘಟಕಗಳಲ್ಲಿ ೨೦ ವರ್ಷ ಸೇವೆ ಸಲ್ಲಿಸಿರುತ್ತಾರೆ. ಬಳಿಕ ನಾಗಾಲ್ಯಾಂಡ್, ಚೆನ್ನೈ, ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸಿ ಕಳೆದ ಎರಡು ವರ್ಷದಿಂದ ಬಾಂಬೆಯಲ್ಲಿನ ಬ್ಯಾಂಕ್ ಆಫ್ ಬರೋಡದ ಪ್ರಧಾನ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುವ ಮೂಲಕ ನಿವೃತ್ತಿ ಹೊಂದಲಿದ್ದಾರೆ.

ಬ್ಯಾಪ್ಟಿಸ್ಟ್ ಲೋಬೋರವರು ಬ್ಯಾಂಕ್ ಉದ್ಯೋಗಿಯಾದ ಬಳಿಕ 1991ರಲ್ಲಿ ವೈಟ್‌ಲಿಪ್ಟಿಂಗ್‌ನಲ್ಲಿ ಅಖಿಲ ಭಾರತ ಬ್ಯಾಂಕ್ ಚಾಂಪಿಯನ್‌ಶಿಪ್ ಅನ್ನು ವಿಜೇತರಾಗಿದ್ದರು. ಮೂರು ಸಲ ಕರ್ನಾಟಕ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ವಿಜಯಾ ಬ್ಯಾಂಕ್ ಹುಬ್ಬಳ್ಳಿಯ ಪ್ರಾದೇಶಿಕ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ 2017-18ರ ಉತ್ತಮ ರಾಜಭಾಷಾ ಪುರಸ್ಕಾರ(ತೃತೀಯ) ನೀಡಿ ಗೌರವಿಸಲಾಗಿತ್ತು ಮಾತ್ರವಲ್ಲದೆ ಕೊಚ್ಚಿಯಲ್ಲಿ ಅಂದು ಕೇರಳದ ರಾಜ್ಯಪಾಲ ಪಿ.ಸದಾಶಿವಂರವರು ಈ ಪುರಸ್ಕಾರವನ್ನು ಪ್ರದಾನ ಮಾಡಿದ್ದರು.

ಬ್ಯಾಪ್ಟಿಸ್ಟ್ ಲೋಬೋರವರು ಆಫೀಸರ್, ಚೀಫ್ ಮ್ಯಾನೇಜರ್, ಎಜಿಎಂ, ಡಿಜಿಎಂ ಆಗಿ ಪದೋನ್ನತಿ ಹೊಂದಿ ಪ್ರಸ್ತುತ ಬಾಂಬೆ ಪ್ರಾದೇಶಿಕ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸರಕಾರಿ ಕಾರ್ಯಕ್ರಮವೆನಿಸಿದ ಅಟಲ್ ಪೆನ್ಸನ್ ಯೋಜನೆಯನ್ನು ಮಾಡುವ ಮೂಲಕ ರಾಷ್ಟ್ರಮಟ್ಟದ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ಅಲ್ಲದೆ ಬೆಂಗಳೂರು ರೀಜನಲ್ ಆಫೀಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭ ಬೆಂಗಳೂರು ರೀಜನ್‌ನಲ್ಲಿ ಉತ್ತಮ ಮ್ಯಾನೇಜರ್ ಆಗಿಯೂ ಬ್ಯಾಪ್ಟಿಸ್ಟ್‌ರವರು ಗುರುತಿಸಿಕೊಂಡಿದ್ದರು.

ಬ್ಯಾಪ್ಟಿಸ್ಟ್ ಲೋಬೋರವರು ಭದ್ರಾವತಿಯಲ್ಲಿನ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್‌ನಲ್ಲಿ ಚೀಫ್ ಮ್ಯಾನೇಜರ್ ಆಗಿರುವ ಪತ್ನಿ ವಿವಿನ್ ಲೋಬೋ, ಪುತ್ರಿ ಇಂಜಿನಿಯರ್ ಪದವೀಧರೆ, ಪ್ರಸ್ತುತ ಯು.ಕೆಯಲ್ಲಿ ಉದ್ಯೋಗದಲ್ಲಿರುವ ಬ್ಯುನೆಟ್ ಲೋಬೋ, ಪುತ್ರ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆನಡಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಬರ್ಟನ್‌ರವರನ್ನು ಹೊಂದಿದ್ದಾರೆ. ಬ್ಯಾಪ್ಟಿಸ್ಟ್‌ರವರಿಗೆ ನಾಲ್ಕು ಜನ ಸಹೋದರರು ಮತ್ತು ಇಲ್ಲಿನ ಕಾವೇರಿಕಟ್ಟೆಯಲ್ಲಿ ವಾಸವಾಗಿರುವ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಸ್‌ರವರ ಪತ್ನಿ ನಿವೃತ್ತ ಶಿಕ್ಷಕಿ ಪ್ರೆಸಿಲ್ಲಾ ಲೋಬೋರವರು ಸಹೋದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here