ಒಳಮೊಗ್ರು ಕಾಂಗ್ರೆಸ್ ವಲಯ ಗ್ರಾಮ ಸಮಿತಿ ಸಭೆ

0

  • ವಾರ್ಡುಗಳ ಅಭಿವೃದ್ದಿಯಲ್ಲಿ ತಾರತಮ್ಯ ನೀತಿ: ಕಾರ್ಯಕರ್ತರ ಆರೋಪ

ಪುತ್ತೂರು: ಒಳಮೊಗ್ರು ಗ್ರಾಪಂನ ವಾರ್ಡುಗಳ ಅಭಿವೃದ್ದಿಯಲ್ಲಿ ತಾರತಮ್ಯ ನೀತಿಯನ್ನುಯ ಅನುಸರಿಸಲಾಗುತ್ತಿದ್ದು ಇದು ಖಂಡನೀಯವಾಗಿದೆ ಇದರ ವಿರುದ್ಧ  ಪಕ್ಷ ಸೂಕ್ತಕ್ರಮಕೈಗೊಳ್ಳುವ ಮೂಲಕ ತಾರತಮ್ಯ ರಾಜಕೀಯಕ್ಕೆ ಬ್ರೇಕ್ ಹಾಕಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.

 

ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಮೇ. 31 ರಂದು ಕುಂಬ್ರದ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾರ್ಯಕರ್ತರು ಗ್ರಾಮದಲ್ಲಿ ಕೆಲವೇ ವಾರ್ಡುಗಳಲ್ಲಿ ಮಾತ್ರ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಒಂದನೇ ವಾರ್ಡು ಮತ್ತು ಎರಡನೇ ವಾರ್ಡಿನ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ. ಇದು ನ್ಯಾಯವಲ್ಲ. ಗ್ರಾಪಂ ಅನುದಾನ ಎಲ್ಲಾ ವಾರ್ಡುಗಳಿಗೂ ಹಂಚಿಕೆಯಾಗಬೇಕು, ಎಲ್ಲಾ ವಾರ್ಡುಗಳಲ್ಲಿ ಕೆಲಸಗಳು ನಡೆಯಬೇಕು ಎಂದು ಅಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬ್ಲಾಕ್ ಅಧ್ಯಕ್ಷರು ತಾರತಮ್ಯ ನೀತಿ ಉತ್ತಮ ಬೆಳವಣಿಗೆಯಲ್ಲ, ಎಲ್ಲಾ ವಾರ್ಡುಗಳೂ ಒಳಮೊಗ್ರು ಗ್ರಾಮಕ್ಕೇ ಸೇರಿದೆ, ಎಲ್ಲಾ ವಾರ್ಡುಗಳೂ ಅಭಿವೃದ್ದಿಯಾಗಬೇಕು ಎಂಬ ಯೋಚನೆ ತಾರತಮ್ಯ ಮಾಡುವವರಿಗೆ ಗೊತ್ತಿರಬೇಕು. ಪದೇ ಪದೇ ಇದೇ ರೀತಿ ತಾರತಮ್ಯ ನೀತಿ ಮುಂದುವರೆದರೆ ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಬೇಕು ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.

ತಾರತಮ್ಯ ಮಾಡಿದ್ದಕ್ಕೆ ಸಾಕ್ಷಿಗಳಿವೆ: ದುರ್ಗಾಪ್ರಸಾದ್ ರೈ

ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ ಒಳಮೊಗ್ರು ಗ್ರಾಪಂನಲ್ಲಿ ತಾರತಮ್ಯ ನೀತಿ ಮಾಡುತ್ತಿದ್ದಾರೆ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಕುಂಬ್ರ ಕೆಪಿಎಸ್ ಶಾಲಾ ಕಟ್ಟಡ ಉದ್ಘಾಟನೆಗೆ ಸೌಜನ್ಯಕ್ಕಾದರೂ ನಮ್ಮನ್ನು ಕರೆಯಲಿಲ್ಲ, ಇದು ತಪ್ಪು ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗಿರುವುದು ಗ್ರಾ.ಪಂ ಜವಾಬ್ದಾರಿ. ಗ್ರಾ.ಪಂ ಉಪಾಧ್ಯಕ್ಷೆಗೂ ಕೂಡಾ ಆಹ್ವಾನ ನೀಡಲಿಲ್ಲ ಎಂಬ ಆರೋಪವೂ ಇದೆ. ಇದೆಲ್ಲದರ ಬಗ್ಗೆ ನಾವು ಸೂಕ್ತ ಸಂದರ್ಭದಲ್ಲಿ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಇದೆ. ಗ್ರಾಮದ ಬೂತ್ ಬೂತ್‌ಗಳಲ್ಲಿ ಪಕ್ಷ ಸಂಘಟನೆಯ ಕಾರ್ಯ ಮತ್ತು ಕಾರ್ಯಕರ್ತರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಜನರಿಗೆ ತಿಳಿಸುವ ಯೋಜನೆಯನ್ನೂ ಹಾಕಿಕೊಳ್ಳಬೇಕಿದೆ ಎಂದು ಹೇಳಿದರು.

ಎಂಥಾ ನೀಚ ಕೃತ್ಯಕ್ಕೂ ಬಿಜೆಪಿ ಸಿದ್ದ; ಅಮಲರಾಮಚಂದ್ರ

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ ಮಾತನಾಡಿ ಒಳಮೊಗ್ರು ಗ್ರಾಪಂನಲ್ಲಿ ನಮ್ಮವರೇ ಉಪಾಧ್ಯಕ್ಷರಾಗಿದ್ದರೂ ತಾರತಮ್ಯ ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ. ವಾರ್ಡುಗಳ ಅಭಿವೃದ್ದಿ ವಿಚಾರದಲ್ಲಿ ತಾರತಮ್ಯ ಮಾಡುವವರ ಬಗ್ಗೆ ನಾವು ಗ್ರಾಮಸ್ಥರಿಗೆ ತಿಳಿಸಬೇಕು. ದೇಶದಲ್ಲಿ ಜನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದು ಇದನ್ನು ಮರೆಮಾಚುವ ಉದ್ದೇಶದಿಂದ ಬಿಜೆಪಿ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ. ಗ್ರಾಮದ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಸಲುವಾಗಿ ಎಂಥಾ ನೀಚ ಕೃತ್ಯಕ್ಕೂ ಬಿಜೆಪಿಗರು ಸಿದ್ದವಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರದ ಬೆಲೆ ಏರಿಕೆ ನೀತಿ ವಿರುದ್ಧ ನಾವು ಸಂಘಟಿತ ಹೋರಾಟ ನಡೆಸಬೇಕು ಇದಕ್ಕಾಗಿ ಕಾರ್ಯಕರ್ತರು ಸಜ್ಜಾಗಬೇಕು ಎಂದು ಹೇಳಿದರು.

ಗ್ರಾಮದಲ್ಲಿ ಪಕ್ಷ ಬಲವರ್ಧನೆಗೆ ಕ್ರಮ: ಅಶೋಕ್ ಪೂಜಾರಿ
ಒಳಮೊಗ್ರು ಗ್ರಾಮದಲ್ಲಿ ಪಕ್ಷ ಬಲವರ್ಧನೆಗೆ ಕಾರ್ಯಕರ್ತರ ಸಹಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸರಕರದ ಜನ ವಿರೋಧಿ ನೀತಿಯ ಬಗ್ಗೆ ಮತ್ತು ಅಡುಗೆ ಅನಿಲ, ನಿತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ನಾವು ವಲಯ ಮಟ್ಟದ ಪ್ರತಿಯೊಬ್ಬ ಗ್ರಾಮಸ್ಥರ ಮನೆಗೂ ತೆರಳಿ ಮಾಹಿತಿ ನೀಡಲಿದ್ದೇವೆ. ದೇಶದಲ್ಲಿ ಜನ ನೆಮ್ಮದಿಯಿಂದ ಬದುಕಬೇಕಾದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರಬೇಕಿದೆ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟಿಸುವಲ್ಲಿ ಪ್ರಥಮ ಆದ್ಯತೆಯನ್ನು ನೀಡಲಿದ್ದೇವೆ ಎಂದು ಹೇಳಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮದ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ಇಬ್ರಾಹಿಂ ಕಡ್ತಿಮಾರ್ ರವರನ್ನು ಸನ್ಮಾನಿಸಲಾಯಿತು. ಶಾಲು, ಹೊದಿಸಿ , ಸ್ಮರಣಿಕೆ ನೀಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಪೂಜಾರಿ ಬೊಳ್ಳಾಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಉಪಾಧ್ಯಕ್ಷ ಮೌರಿಷ್ ಮಸ್ಕರ್‌ನೇಸ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ , ಶಶಿಕಿರಣ್ ರೈ ನೂಜಿಬೈಲು, ಬ್ಲಾಕ್ ಅಲ್ಪಸಂಖ್ಯಾತ ಘಟಕದ ರಝಾಕ್ ಪರ್ಪುಜ, ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ, ಎಸ್ ಘಟಕದ ಅಧ್ಯಕ್ಷ ಕೇಶವ ಪಡೀಲ್, ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಸದಸ್ಯರುಗಳಾದ ಬಿ.ಸಿ ಚಿತ್ರಾ, ಶಾರದಾ, ಶೀನಪ್ಪ ನಾಯ್ಕ ,ಅಶ್ರಫ್ ಉಜಿರೋಡಿ ಕಾಂಗ್ರೆಸ್ ಮುಖಂಡರಾದ ನಾಸಿರುದ್ದೀನ್ ಕುಂಬ್ರ, ಚೆನ್ನ, ಚೆನ್ನಯ ಆಚಾರಿ, ಮಹಮ್ಮದ್ ಅಡ್ಕ , ವಲಯ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಬೊಳ್ಳಾಡಿ ಉಪಸ್ಥಿತರಿದ್ದರು. ಅಶೋಕ್ ಬೊಳ್ಳಾಡಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here