ಹಾರಾಡಿ ರೈಲ್ವೇ ರಸ್ತೆ ಅಭಿವೃದ್ಧಿಗೆ ರೈಲ್ವೇ ಎನ್‌ಒಸಿ ಪುತ್ತೂರು ನಗರಸಭೆಯಿಂದ ರಸ್ತೆ ಪರಿಶೀಲನೆ

0

ಪುತ್ತೂರು:ಪುತ್ತೂರು ಪುತ್ತೂರು ರೈಲ್ವೆ ನಿಲ್ದಾಣ ಸಂಪರ್ಕದ ಹಾರಾಡಿ ರಸ್ತೆ ಅಭಿವೃದ್ಧಿಗೆ ರೈಲ್ವೇ ಇಲಾಖೆ ನಿರಾಕ್ಷೇಪಣಾ ಪತ್ರವನ್ನು ನಗರಸಭೆಗೆ ನೀಡಿದ ಹಿನ್ನೆಲೆಯಲ್ಲಿ ಜೂ.1ರಂದು ನಗರಸಭೆ ಅಧ್ಯಕ್ಷ  ಕೆ.ಜೀವಂಧರ್ ಜೈನ್ ನೇತೃತ್ವದಲ್ಲಿ ಸದಸ್ಯರು, ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದರು.

ಸುಮಾರು ರೂ.1 ಕೋಟಿ ವೆಚ್ಚದಲ್ಲಿ ಹಾರಾಡಿ ರೈಲ್ವೇ ರಸ್ತೆ ಡಾಮರೀಕರಣದ ಮೂಲಕ ಅಭಿವೃದ್ಧಿ ಹೊಂದಲಿದ್ದು, ಈ ಕುರಿತು ನಗರಸಭೆಗೆ ರೈಲ್ವೇ ಇಲಾಖೆ ಎನ್‌ಒಸಿ ನೀಡಿದೆ.

ಪುತ್ತೂರು ರೈಲು ನಿಲ್ದಾಣ ಆದರ್ಶ ರೈಲು ನಿಲ್ದಾಣವಾಗಿ ಕಂಗೊಳಿಸುತ್ತಿದ್ದರೂ, ಹಾರಾಡಿ ರಸ್ತೆ ಸಂಪೂರ್ಣ ನಾದುರಸ್ತಿ ಹೊಂದಿ ಪುತ್ತೂರಿಗೆ ಬರುವ ಹೊರಗಿನ ನಾಗರಿಕರಿಗೆ ಸುಂದರ ಪುತ್ತೂರಿನ ಇನ್ನೊಂದು ಮುಖವನ್ನು ತೋರಿಸುವಂತಿತ್ತು. ಈ ಭಾಗದಲ್ಲಿ ಅಭಿವೃದ್ಧಿ ಯಾ ದುರಸ್ತಿ ಮಾಡಲು ರೈಲ್ವೇ ಇಲಾಖೆ ಬಿಡುತ್ತಿರಲಿಲ್ಲ ಎಂಬ ಆರೋಪವಿತ್ತು. ಹಾಗಾಗಿ ರಸ್ತೆ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷರು ಸಂಸದರು, ಶಾಸಕರ ಮೂಲಕ ರೈಲ್ವೇ ಇಲಾಖೆಯಿಂದ ಎನ್‌ಒಸಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ರಸ್ತೆ ಅಭಿವೃದ್ಧಿಗಾಗಿ ಅಂದಾಜು ಪಟ್ಟಿ ತಯಾರಿಸಿದ ಬಳಿಕ ರಸ್ತೆಯ ಪರಿಶೀಲನೆಯನ್ನು ನಡೆಸಿದರು.

ಎಪಿಎಂಸಿ ರಸ್ತೆಯ ಸೇತುವೆ ಅಗಲೀಕರಣಕ್ಕೆ ಪರಿಶೀಲನೆ:

ಎಪಿಎಂಸಿ ಹೋಗುವ ರಸ್ತೆಯಲ್ಲಿ ಆದರ್ಶ ಆಸ್ಪತ್ರೆಯ ಬಳಿಯ ಸೇತುವೆ ಅಗಲೀಕರಣಕ್ಕೂ ನಗರಸಭೆ ಅಂದಾಜುಪಟ್ಟಿ ತಯಾರಿಸಿದ್ದು, ಈ ಕುರಿತು ನಗರಸಭೆ ಅಧ್ಯಕ್ಷರು ಪರಿಶೀಲನೆ ನಡೆಸಿದರು. ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಪೌರಾಯುಕ್ತ ಮಧು ಎಸ್ ಮನೋಹರ್, ನಗರಸಭೆ ಮಾಜಿ ಸದಸ್ಯ ಚಂದ್ರಸಿಂಗ್, ಅಭಿಯಂತರರಾದ ಕೃಷ್ಣಮೂರ್ತಿ, ಶ್ರೀಧರ್, ಸ್ಥಳೀಯರಾದ ರಾಧಕೃಷ್ಣ ಗೌಡ ನಂದಿಲ, ರಾಮ್‌ದಾಸ್ ಹಾರಾಡಿ ಉಪಸ್ಥಿತರಿದ್ದರು.

ನಗರಸಭೆಯೊಳಗೆ ರಸ್ತೆ ಅಭಿವೃದ್ಧಿ

ನಗರಸಭೆ ವ್ಯಾಪ್ತಿಯಲ್ಲಿ ಬಹಳಷ್ಟು ವರ್ಷಗಳ ಬೇಡಿಕೆಯಂತೆ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆ ಅಭಿವೃದ್ಧಿಗೆ ಶಾಸಕರ ಮತ್ತು ಸಂಸದರ ಮುತುವರ್ಜಿಯಿಂದ ರೈಲ್ವೇ ಇಲಾಖೆ ನಮಗೆ ಎನ್‌ಒಸಿ ಕೊಟ್ಟಿದೆ. ರಸ್ತೆ ಅಭಿವೃದ್ಧಿಗೆ ಅಂದಾಜು ಪಟ್ಟಿ ಈಗಾಗಲೇ ಸಿದ್ಧಪಡಿಸಲಾಗಿದೆ. ಸುಮಾರು ರೂ. 1 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಆಗಲಿದೆ. ಅದೇ ರೀತಿ ಆದರ್ಶ ಆಸ್ಪತ್ರೆಯ ಬಳಿಯಿಂದ ಎಪಿಎಂಸಿಗೆ ಹೋಗುವ ರಸ್ತೆಯಲ್ಲಿರುವ ಅಂಡರ್‌ಪಾಸ್ ಯೋಜನೆಗೆ ಪೂರಕವಾಗಿ ರಸ್ತೆಯಲ್ಲಿರುವ ಸೇತುವೆ ಅಗಲೀಕರಣಕ್ಕೂ ಅಂದಾಜಪಟ್ಟಿ ತಯಾರಿಸಲಾಗಿದೆ. ಹಾರಾಡಿಯಿಂದ ಮಡಿವಾಳಕಟ್ಟೆಗೆ ಹೋಗುವ ರಸ್ತೆಗೆ ಅಭಿವೃದ್ಧಿಗೂ ಬಹುತೇಕ ಮಂದಿ ಸ್ಥಳ ಬಿಟ್ಟು ಕೊಟ್ಟಿದ್ದಾರೆ. ಒಂದೆರಡು ಮಂದಿಯಲ್ಲಿ ಮಾತುಕತೆ ನಡೆಯುತ್ತಿದೆ. ಆ ರಸ್ತೆ ಪೂರ್ಣಗೊಂಡರೆ ಮುಂದೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹಾರಾಡಿಯಿಂದ ನೇರ ಸಂಪರ್ಕ ಸಿಗಲಿದೆ. ಒಟ್ಟಿನಲ್ಲಿ ನಗರಸಭೆಯೊಳಗೆ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ.
ಕೆ.ಜೀವಂಧರ್ ಜೈನ್, ಅಧ್ಯಕ್ಷರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here