ಹಿಜಾಬ್: ನ್ಯಾಯಾಲಯದ ತೀರ್ಪು ಉಲ್ಲಂಘನೆ ಆರು ಮಂದಿ ವಿದ್ಯಾರ್ಥಿನಿಯರ ಅಮಾನತು

0

ಉಪ್ಪಿನಂಗಡಿ: ಹಿಜಾಬ್ ವಿಚಾರವಾಗಿ ಸತತ ವಿನಂತಿ, ಮನವಿಗಳ ಹೊರತಾಗಿಯೂ ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸುವ ಮೂಲಕ ಉಚ್ಛ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಿದ್ದಾರೆಂದು ಆರು ಮಂದಿ ವಿದ್ಯಾರ್ಥಿನಿಯರನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸಿದ ಘಟನೆ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.


ಯಾವುದೇ ಕಾರಣಕ್ಕ್ಕೂ ಕಾಲೇಜಿನಲ್ಲಿ ಹಿಜಾಬ್ ಧರಿಸಬಾರದೆಂಬ ಸರಕಾರಿ ಆದೇಶ ಹಾಗೂ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಪದೇ ಪದೇ ಹಿಜಾಬ್ ಧರಿಸಿಕೊಂಡು ಬಂದು ತರಗತಿಯೊಳಗೆ ಪ್ರವೇಶಿಸುವ ಮೂಲಕ ಕಾಲೇಜಿನ ಕಲಿಕಾ ವಾತಾವರಣಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಅವರ ಮೇಲೆ ಶಿಸ್ತು ಕ್ರಮ ಜರಗಿಸುವ ಸಲುವಾಗಿ ಅಮಾನತು ಆದೇಶ ಮಾಡಲಾಗಿದೆ.


ವಿದ್ಯಾರ್ಥಿಗಳ ಗುಂಪು ಘರ್ಷಣೆ- ಪೊಲೀಸ್ ಮಧ್ಯ ಪ್ರವೇಶದಿಂದ ನಿಯಂತ್ರಣ :
ಬುಧವಾರದಂದು ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ಕೋಮಿನ ವಿದ್ಯಾರ್ಥಿನಿಯರನ್ನು ಇನ್ನೊಂದು ಕೋಮಿನ ವಿದ್ಯಾರ್ಥಿಗಳು ಚುಡಾಯಿಸಿದಾಗ ಆಕ್ಷೇಪಿಸಿದ ವಿದ್ಯಾರ್ಥಿಗಳ ವಿರುದ್ದ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಹೊ -ಕೈ ನಡೆಸಿ ಸಂಘರ್ಷವುಂಟಾಯಿತು. ಪರಿಸ್ಥಿತಿ ಕೈ ಮೀರುವ ಲಕ್ಷಣ ಕಂಡು ಬಂದಾಗ ಕಾಲೇಜು ಪ್ರಾಂಶುಪಾಲರು ಪೊಲೀಸ್ ರಕ್ಷಣೆಯನ್ನು ಬಯಸಿದರು. ತಕ್ಷಣವೇ ಕಾಲೇಜಿಗೆ ದೌಡಾಯಿಸಿದ ಪೊಲೀಸ್ ಪಡೆ ಘರ್ಷಣೆ ನಿರತ ವಿದ್ಯಾರ್ಥಿಗಳನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.


ಸಿಡಿಸಿ ಸಭೆ ನಡೆಯುತ್ತಿದ್ದಂತೆಯೇ ಪ್ರಾಂಶುಪಾಲರಿಗೆ ಬುಲಾವ್  ಶಾಸಕರ – ಜಿಲ್ಲಾಧಿಕಾರಿಯ ಹೆಸರು ಎಳೆದು ತಂದ ಜಂಟಿ ನಿರ್ದೇಶಕಿ
ಕಾಲೇಜಿನಲ್ಲಿ ನಡೆಯುತ್ತಿರುವ ಅನಪೇಕ್ಷಿತ ವಿದ್ಯಾಮಾನಗಳ ಬಗ್ಗೆ ಚರ್ಚಿಸಲು ಹಾಗೂ ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಮಂಗಳವಾರದಂದು ಸಾಯಂಕಾಲ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಪೋನ್ ಕರೆಯೊಂದನ್ನು ಸ್ವೀಕರಿಸಿದ ಪ್ರಾಂಶುಪಾಲ ಶೇಖರ್ ಅವರು ಮಂಗಳೂರಿಗೆ ತೆರಳಲು ಆದೇಶ ಬಂದಿದೆ ಎಂದು ತಿಳಿಸಿ ಸಭೆಯನ್ನು ಮೊಟಕುಗೊಳಿಸಿದರು. ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸಭೆಗೆ ಬಂದಿದ್ದ ಸಿಡಿಸಿ ಸದಸ್ಯರು ಪ್ರಾಂಶುಪಾಲರ ನಡೆಯನ್ನು ಆಕ್ಷೇಪಿಸಿ ಯಾಕಾಗಿ ಸಭೆಯನ್ನು ಮೊಟಕುಗೊಳೀಸುತ್ತಿದ್ದೀರಾ ಎಂದು ಪ್ರಶ್ನಿಸಿದಾಗ, ಮಂಗಳೂರು ವಿಶ್ವ ವಿದ್ಯಾನಿಲಯದ ಜಂಟಿ ನಿರ್ದೇಶಕರು ಸಭೆಯನ್ನು ನಿಲ್ಲಿಸಿ ಬೇರೊಬ್ಬರಿಗೆ ಚಾರ್ಜ್ ಕೊಟ್ಟು ತಕ್ಷಣ ಬರಬೇಕೆಂದು ಮೌಖಿಕ ಆದೇಶ ಹೊರಡಿಸಿದ್ದಾರೆಂದು ಪ್ರಾಂಶುಪಾಲರು ತಿಳಿಸಿದರು. ಕುಪಿತಗೊಂಡ ಸಿಡಿಸಿ ಸದಸ್ಯರು ನೇರವಾಗಿ ಜಂಟಿ ನಿರ್ದೇಶಕಿಯವರನ್ನು ಪೋನಿನಲ್ಲಿ ಸಂಪರ್ಕಿಸಿದಾಗ ವಿದ್ಯಾರ್ಥಿನಿಯರ ವಿರುದ್ದ ಶಿಸ್ತು ಕ್ರಮ ಕೈಗೊಂಡ ಬಗ್ಗೆ ಶಾಸಕರು ಮತ್ತು ಜಿಲ್ಲಾಧಿಕಾರಿಯವರು ಅಸಮಾಧಾನ ವ್ಯಕ್ತಪಡಿಸಿ ಆಕ್ಷೇಪಿಸಿದ್ದಾರೆಂದೂ , ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲು ಪ್ರಾಂಶುಪಾಲರನ್ನು ತುರ್ತಾಗಿ ಕರೆಯಿಸಬೇಕಾಯಿತೆಂದು ತಿಳಿಸಿದರೆಂದು ಸಿಡಿಸಿ ಸದಸ್ಯರು ತಿಳಿಸಿದ್ದಾರೆ.
ಡಿ.ಸಿ. ನಿರಾಕರಣೆ : ಈ ಬಗ್ಗೆ ಸ್ಪಷ್ಟನೆಯನ್ನು ಬಯಸಿ ದ.ಕ. ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿದಾಗ, ಅವರು ಈ ತೆರನಾದ ಆಪಾದನೆಯನ್ನು ನಿರಾಕರಿಸಿದ್ದಾರೆ. ಮಾತ್ರವಲ್ಲದೆ ಸ್ಪಷ್ಟನೆ ಕೋರಿದ ಒಂದು ಗಂಟೆಯ ಮೊದಲಷ್ಟೇ ಉಪ್ಪಿನಂಗಡಿ ಕಾಲೇಜಿನ ವಿದ್ಯಾಮಾನ ಗಮನಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.


ಶಾಸಕ ಸಂಜೀವ ಮಠಂದೂರು ಅವರು ಕೂಡಾ ಅಸಮಾಧಾನದ ಆಪಾದನೆಯನ್ನು ನಿರಾಕರಿಸಿದ್ದು, ಒಂದಿಬ್ಬರು ವಿದ್ಯಾರ್ಥಿಗಳ ಹುಚ್ಚಾಟಕ್ಕೆ ನೂರಾರು ವಿದ್ಯಾರ್ಥಿಗಳ ಕಲಿಕಾ ವಾತಾವರಣ ಹಾಳುಗೆಡವುವಂತಾಗಬಾರದು .ಈ ಹಿನ್ನೆಲೆಯಿಂದ ಕಾಲೇಜುಗಳಲ್ಲಿ ಅಶಾಂತಿ ಸೃಷ್ಠಿಸುವ ತಪಿತಸ್ಥ ವಿದ್ಯಾರ್ಥಿಗಳ ವಿರುದ್ದ ಶಿಶ್ತು ಕ್ರಮ ಕೈಗೊಳ್ಳಬೇಕೆಂದೂ ನನ್ನ ಕ್ಷೇತ್ರದ ಎಲ್ಲಾ ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಿರುವಾಗ , ಉಪ್ಪಿನಂಗಡಿ ಕಾಲೇಜಿನಲ್ಲಿ ಕೈಗೊಂಡ ಶಿಸ್ತು ಕ್ರಮಕ್ಕೆ ಅಸಮಾಧಾನಗೊಳ್ಳುವುದಾಗಲೀ, ಆಕ್ಷೇಪಿಸುವುದಾಗಲಿ ಸತ್ಯಕ್ಕೆ ದೂರವಾದ ಮಾತೆಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.


ಈ ಎಲ್ಲಾ ಅಭಿಪ್ರಾಯಗಳನ್ನು ಗಮನಿಸಿದಾಗ ಮಂಗಳೂರು ವಿಶ್ವ ವಿದ್ಯಾನಿಲಯದ ಜಂಟಿ ನಿರ್ದೇಶಕರ ನಡೆಯು ಸಂಶಯಾಸ್ಪದವಾಗಿದ್ದು, ಗೊಂದಲಮಯವಾಗಿ ಗೋಚರಿಸಿದೆ.

LEAVE A REPLY

Please enter your comment!
Please enter your name here