ಬೆಂಗಳೂರು ಬಂಟರ ಸಂಘದ `ಸಂಕಲ್ಪ’ ಯೋಜನೆಯಡಿ ಉಚಿತ ಶಿಕ್ಷಣಕ್ಕೆ ಮೂವರು ವಿದ್ಯಾರ್ಥಿಗಳು ಆಯ್ಕೆ

0

  • ಪುತ್ತೂರು ಬಂಟರ ಸಂಘದ ನೇತೃತ್ವದಲ್ಲಿ ನಡೆದ ವಿಶೇಷ ಪ್ರವೇಶ ಪರೀಕ್ಷೆ

ಪುತ್ತೂರು: ಬಂಟರ ಸಂಘ ಬೆಂಗಳೂರು ಇದರ `ಸಂಕಲ್ಪ’ ಯೋಜನೆಯಡಿ ಬೆಂಗಳೂರಿನ ಆರ್‌ಎನ್ ಕಾಲೇಜಿನಲ್ಲಿ ಉಚಿತ ಪಿಯು ಶಿಕ್ಷಣ ಪಡೆಯುವ ಯೋಜನೆಗೆ ಪುತ್ತೂರು ತಾಲೂಕಿನ ಮೂವರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. ಇದಕ್ಕಾಗಿ ಪುತ್ತೂರು ಬಂಟರ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಯೊಂದನ್ನು ನಡೆಸಲಾಗಿತ್ತು. ಪುತ್ತೂರು ತಾಲೂಕಿನ 19 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅತ್ಯಧಿಕ ಅಂಕಗಳನ್ನು ಗಳಿಸಿದ ಮೂವರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.

 

ರಾಮಕುಂಜೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ವರ್ಷಿತಾ, ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಧನುಜಾ ಮತ್ತು ಪ್ರಿಯದರ್ಶಿನಿ ಶಾಲೆಯ ವಿದ್ಯಾರ್ಥಿ ತನ್ವಿಷ್ ಅವರು, ಬೆಂಗಳೂರು ಬಂಟರ ಸಂಘದ ಸಂಕಲ್ಪ ಯೋಜನೆಯ ಮೂಲಕ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಉಚಿತ ಶಿಕ್ಷಣ ಪಡೆಯುವ ಸೌಲಭ್ಯಕ್ಕೆ ಭಾಜನರಾದ ವಿದ್ಯಾರ್ಥಿಗಳು. ಮೇ 8ರಂದು ಪುತ್ತೂರು ಬಂಟರ ಸಂಘದಲ್ಲಿ ಪರೀಕ್ಷೆ ನಡೆದಿತ್ತು. ತಾವು ಉಚಿತ ಶಿಕ್ಷಣ ಪಡೆಯುವ ಯೋಜನೆಗೆ ಆಯ್ಕೆಯಾಗಿರುವುದಕ್ಕೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೋಷಕರು ಪುತ್ತೂರು ಬಂಟರ ಸಂಘ ಮತ್ತು ಬೆಂಗಳೂರು ಬಂಟರ ಸಂಘದ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉಚಿತ ಪಿಯು ಶಿಕ್ಷಣಕ್ಕೆ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ. ಇದು ನನ್ನ ಬದುಕಿನ ಟರ್ನಿಂಗ್ ಪಾಯಿಂಟ್ ಎನ್ನಬಹುದು. ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿಕೊಂಡು ಇಂಜಿನಿಯರ್ ಆಗಬೇಕೆನ್ನುವ ಕನಸಿದೆ. ಪುತ್ತೂರು ಬಂಟರ ಸಂಘ ಮತ್ತು ಬೆಂಗಳೂರು ಬಂಟರ ಸಂಘಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು.ವರ್ಷಿತಾ, ವಿದ್ಯಾರ್ಥಿನಿ

ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿಕೊಳ್ಳಬೇಕೆಂದಿದ್ದೇನೆ. ವಿಜ್ಞಾನ ವಿಭಾಗದಲ್ಲಿ ಮುಂದುವರೆದು ಗಣಿತ ಶಾಸ್ತ್ರಜ್ಞೆಯಾಗಬೇಕೆನ್ನುವ ಕನಸಿದೆ. ಬೆಂಗಳೂರಿನಲ್ಲಿ ಕಲಿಯುವ ಅವಕಾಶ ನೀಡಿದ್ದಕ್ಕೆ ಪುತ್ತೂರು ಮತ್ತು ಬೆಂಗಳೂರು ಬಂಟರ ಸಂಘಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಧನುಜಾ, ವಿದ್ಯಾರ್ಥಿನಿ

ಪುತ್ತೂರು ಬಂಟರ ಸಂಘದ ಮಾರ್ಗದರ್ಶನದಲ್ಲಿ ಪರೀಕ್ಷೆ ಬರೆದು ತೇರ್ಗಡೆಯಾಗಿ, ಉಚಿತ ಶಿಕ್ಷಣಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಮುಂದಕ್ಕೆ ಕಾಮರ್ಸ್ ವಿಭಾಗವನ್ನು ಆರಿಸಿಕೊಂಡು ಸಿಎ ಆಗಬೇಕೆನ್ನುವ ಆಸೆಯಿದೆ. ಪುತ್ತೂರು ಮತ್ತು ಬೆಂಗಳೂರು ಬಂಟರ ಸಂಘಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ತನ್ವಿಶ್, ವಿದ್ಯಾರ್ಥಿ


ಬೆಂಗಳೂರು ಬಂಟರ ಸಂಘದ ವತಿಯಿಂದ ಸಂಕಲ್ಪ ಯೋಜನೆಯ ಮೂಲಕ ಪುತ್ತೂರು ತಾಲೂಕಿನ ೧೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಮೂವರು ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಗಳಿಸಿ ಬೆಂಗಳೂರು ಬಂಟರ ಸಂಘದ ಸಂಕಲ್ಪ ಯೋಜನೆಯ ಮೂಲಕ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಉಚಿತ ಶಿಕ್ಷಣ ಪಡೆಯುವ ಸೌಲಭ್ಯಕ್ಕೆ ಭಾಜನರಾಗಿದ್ದಾರೆ. ಮುಂದಿನ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬಂಟರ ಸಂಘದ ವತಿಯಿಂದ ಬಡ್ಡಿರಹಿತ ಸಾಲವನ್ನು ನೀಡಿ ವಿದ್ಯಾಭ್ಯಾಸಕ್ಕೆ ನೆರವಾಗುವ ಕೆಲಸವನ್ನು ಬೆಂಗಳೂರು ಬಂಟರ ಸಂಘ ಮಾಡಿದೆ. ಬೆಂಗಳೂರು ಬಂಟರ ಸಂಘ ಮೂವರು ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣದ ಅವಕಾಶ ಮಾಡಿಕೊಟ್ಟಿದೆ. ಇದಕ್ಕಾಗಿ ಬೆಂಗಳೂರು ಬಂಟರ ಸಂಘದ ಸಮಸ್ತ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷರು, ಬಂಟರ ಸಂಘ, ಪುತ್ತೂರು

ಆರ್‌ಎನ್ ಶೆಟ್ಟಿ ಕಾಲೇಜು ಬೆಂಗಳೂರು ಇಲ್ಲಿ ಅಡ್ಮಿಷನ್‌ಗೆ ಬೆಂಗಳೂರು ಬಂಟರ ಸಂಘ ಅವಕಾಶ ಒದಗಿಸಿಕೊಟ್ಟಿದೆ. ೧೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮೂವರು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಎಸೆಸೆಲ್ಸಿ ಪರೀಕ್ಷೆ ಮತ್ತು ಈ ಪ್ರವೇಶ ಪರೀಕ್ಷೆಯ ಅಂಕಗಳು, ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಆಯ್ಕೆ ಮಾಡಲಾಗಿದೆ. ಪಿಯುಸಿ ಅಲ್ಲದೆ ಮುಂದಿನ ಉನ್ನತ ವಿದ್ಯಾಭ್ಯಾಸವನ್ನು ಕೂಡ ಅದೇ ಕಾಲೇಜಿನಲ್ಲಿ ಪಡೆಯುವ ಅವಕಾಶವನ್ನು ನೀಡಲಾಗಿದೆ. ದಯಾನಂದ ರೈ ಕೋರ್ಮಂಡ,
ಗೌರವ ಸಲಹೆಗಾರರು, ಬಂಟರ ಸಂಘ, ಪುತ್ತೂರು

LEAVE A REPLY

Please enter your comment!
Please enter your name here