ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವಿವಾದ ವಿಚಾರ-ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಂದ ಸುದ್ದಿಗೋಷ್ಠಿ ತಂತ್ರಿ, ವಾಸ್ತು ಶಿಲ್ಪಿ ಜೊತೆ ಚರ್ಚಿಸಿಯೇ ನಾಗನಕಟ್ಟೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು ದಾಖಲೆ ಇಟ್ಟುಕೊಂಡೇ ಆರೋಪಗಳಿಗೆ ಉತ್ತರ ನೀಡುತ್ತಿದ್ದೇನೆ-ಲೋಕಪ್ಪ ಗೌಡ

0

ಪುತ್ತೂರು: ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಹಾಗೂ ನನ್ನ ವಿರುದ್ಧ ಪ್ರಸ್ತುತ ಕೇಳಿ ಬರುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದ ವಿಚಾರಗಳಾಗಿದ್ದು ಆಧಾರ ರಹಿತವಾಗಿ ಸುಖಾಸುಮ್ಮನೆ ಆರೋಪಗಳನ್ನು ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಪ್ರತೀ ತಿಂಗಳು ಕ್ರಮ ಬದ್ಧವಾಗಿ ಸಭೆಗಳನ್ನು ನಡೆಸಲಾಗುತ್ತಿದ್ದು ಯಾವುದೇ ವಿಚಾರಗಳನ್ನು ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. ಅದಾಗ್ಯೂ ನನ್ನನ್ನು ಸರ್ವಾಧಿಕಾರಿ ಎಂದು ಕೆಲವರು ಹೇಳುತ್ತಿರುವುದಕ್ಕೆ ಅರ್ಥವಿಲ್ಲ ಎಂದು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಲೋಕಪ್ಪ ಗೌಡ ಹೇಳಿದರು.

ಎಲ್ಲವೂ ನಿಯಮ ಪ್ರಕಾರವೇ ನಡೆಯುತ್ತಿದೆ:
ಜೂ.೨ರಂದು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೨೧ ಎಪ್ರಿಲ್‌ನಲ್ಲಿ ಅಧಿಕಾರ ಸ್ವೀಕರಿಸಿದ ನಮ್ಮ ಆಡಳಿತ ಕಮಿಟಿಯು ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಅಷ್ಟಮಂಗಲ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಿದೆವು. ಅದರಂತೆ ಅಷ್ಟಮಂಗಳ ನಡೆಸಲು ದೈವಜ್ಞರು ಯಾರು ಬೇಕೆಂದು ಚರ್ಚೆ ಬಂದಾಗ ದೇವರೇ ನಿರ್ಧರಿಸಲಿ ಎಂದು ತೀರ್ಮಾನಿಸಿದ ನಾವು ಚೀಟಿ ಬರೆದು ದೇವರ ಮುಂದೆ ಇಟ್ಟು ಪೂಜೆ ಮಾಡಿ ಚೀಟಿ ತೆಗೆದಾಗ ಕುತ್ತಿಗೋಳು ಶಶೀಂದ್ರನ್ ನಾಯರ್ ಅವರ ಹೆಸರು ಬಂತು. ನಂತರ ಆಡಳಿತ ಮಂಡಳಿಯವರು ಹೋಗಿ ಅವರನ್ನು ಆಹ್ವಾನಿಸಿದ್ದೆವು. ಬಳಿಕ ಅವು ನೀಡಿದ ದಿನಾಂಕದ ಅನುಸಾರ ಆಗಷ್ಟ್ ೨೩ರಂದು ದೇವಸ್ಥಾನದಲ್ಲಿ ಅಷ್ಟಮಂಗಲ ಚಿಂತನೆ ನಡೆಸಿದೆವು. ಅದರಲ್ಲಿ ಕಂಡು ಬಂದ ಪ್ರಕಾರ ಎಲ್ಲ ಅಭಿವೃದ್ಧಿ ಮಾಡಬೇಕೆಂದು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿ ಅವರ ಜೊತೆ ಚರ್ಚಿಸಿ ಮೊದಲನೆಯದಾಗಿ ನಾಗನ ಕಟ್ಟೆ ಕೂಡಲೇ ಮಾಡಿದರೆ ಎಲ್ಲ ಕೆಲಸವೂ ಸುಸೂತ್ರವಾಗಿ ಆಗುತ್ತೆ ಎಂದು ಅವರು ಹೇಳಿದ್ದರು. ಆ ಪ್ರಕಾರ ನಾವು ನಾಗನ ಕಟ್ಟೆ ಕಟ್ಟುವುದಕ್ಕೆ ವಾಸ್ತು ತಜ್ಞರಾದ ಮುನಿಯಂಗಳ ಕೃಷ್ಣಪ್ರಸಾದ್ ಅವರನ್ನು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಿ ಅವರನ್ನು ಸ್ಥಳಕ್ಕೆ ಕರೆಸಿ ಅವರು ನೀಡಿದ ನಕ್ಷೆಯಂತೆ ನಾಗನಕಟ್ಟೆ ಕಟ್ಟುವುದೆಂದು ತೀರ್ಮಾನಿಸಿದ್ದೆವು. ಜೂ.೭ ಮತ್ತು ೮ರಂದು ಪ್ರತಿಷ್ಠಾಪನೆಗೆ ದಿನ ನಿಗದಿ ಮಾಡಿದ್ದೆವು. ಇದೀಗ ಕೊನೆಯ ಕ್ಷಣದಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರುಗಳು ಮತ್ತು ಸಾರ್ವಜನಿಕರು ಸೇರಿಕೊಂಡು ಆರೋಪಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಅಲ್ಲದೇ ನಾಗಬ ಕಟ್ಟೆ ಒಳಗಡೆ ಮರದ ಕುತ್ತಿ ಇದೆ ಎನ್ನುವ ಆರೋಪವನ್ನು ಮಾಡಲಾಗುತ್ತಿದ್ದು ಅದರ ಬಗ್ಗೆಯೂ ತಂತ್ರಿಗಳ ಜೊತೆ ಕೇಳಿಕೊಂಡು ಅವರು ಹೇಳಿದ ಪ್ರಕಾರವೇ ನಾವು ಮುಂದುವರಿದಿದ್ದೇವೆ. ಎಲ್ಲಿಯೂ ಅವೈಜ್ಞಾನಿಕವಾಗಿ ಯಾವುದನ್ನೂ ಮಾಡಿಲ್ಲ ಎಂದು ಅವರು ಹೇಳಿದರು.
ನಾಗನಕಟ್ಟೆ ಬಳಿಕ ಮಾರ್ಚ್‌ನಲ್ಲಿ ಬ್ರಹ್ಮಕಲಶೋತ್ಸವ ಮಾಡುವ ಬಗ್ಗೆ ತೀರ್ಮಾನಿಸಿದ್ದೆವು ಅದನ್ನು ಮುಂದಕ್ಕೆ ಹಾಕುವ ಉದ್ದೇಶಕ್ಕೆ ಈಗ ದೇವಸ್ಥಾನದ ವಿಚಾರದಲ್ಲಿ ಗಲಾಟೆ ಶುರು ಮಾಡಲಾಗಿದೆ ಎಂದು ಅವರು ಆರೋಪಸಿದರು.
ನಾಡಿದ್ದು ೭ ಮತ್ತು ೮ಕ್ಕೆ ನಿಗದಿಪಡಿಸಿದ್ದ ಕಾರ್ಯಕ್ರಮ ರದ್ದು ಮಾಡುತ್ತೇವೆ ಎಂದು ಲೋಕಪ್ಪ ಗೌಡ ಹೇಳಿದರು.

ಮಾಸ್ಟರ್ ಪ್ಲಾನರಿಯವರಿಗೆ ಗುತ್ತಿಗೆ ನೀಡಿಲ್ಲ:
ಇತ್ತೀಚೆಗೆ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರುಗಳು ಮತ್ತು ಊರಿನ ಕೆಲವರು ಸೇರಿಕೊಂಡು ಸಭೆ ನಡೆಸಿ ನನ್ನ ವಿರುದ್ಧ ಆರೋಪ ಹೊರಿಸಿರುವುದೆಲ್ಲವೂ ಶುದ್ದ ಸುಳ್ಳಿನಿಂದ ಕೂಡಿದ್ದು
ನಾವು ಮಾಸ್ಟರ್ ಪ್ಲಾನರಿಯವರಿಗೆ ಗುತ್ತಿಗೆ ನೀಡಿರುವ ಆರೋಪ ಕೂಡಾ ಸುಳ್ಳಿನಿಂದ ಕೂಡಿದ್ದಾಗಿದೆ. ಪುಷ್ಕರಣಿ, ದೈವಗಳ ಕಟ್ಟೆ, ನಾಗನಕಟ್ಟೆ ಸೇರಿದಂತೆ ಒಟ್ಟು ೧ ಕೋಟಿ ೧೧ ಲಕ್ಷದ ೭೪ ಸಾವಿರದ ೪೮೪.ರೂ ಎಸ್ಟಿಮೇಟ್ ಆಗಿದ್ದು ಇದನ್ನು ಪಿಡಬ್ಲ್ಯೂಡಿಗೆ ಕೊಟ್ಟಿದ್ದೇವೆ. ಯಾರಿಗೂ ಗುತ್ತಿಗೆಯನ್ನೂ ನೀಡಿಲ್ಲ ಎಂದು ಅವರು ಹೇಳಿದು.

ಸಭೆಗೆ ಕರೆದರೆ ಬಾರದೇ ಆರೋಪ ಹೊರಿಸುವುದು ಸರಿಯಲ್ಲ:
ಎಂಡೋಮೆಂಟ್ ಡಿಪಾರ್ಟ್‌ಮೆಂಟ್‌ನಿಂದ ಅನುಮತಿ ಪಡೆದುಕೊಂಡು ಅವರ ನಿರ್ದೇಶನದ ಪ್ರಕಾರ ಅಭಿವೃದ್ಧಿ ಸಮಿತಿ ರಚಿಸುವ ಬಗ್ಗೆ ಆಲೋಚಿಸಿ ಡಾ.ಎಂ.ಕೆ ಪ್ರಸಾದ್ ಅವರ ಗೌರವಾಧ್ಯಕ್ಷತೆಯಲ್ಲಿ ಸಮಿತಿ ಮಾಡುವ ನಿಟ್ಟಿನಲ್ಲಿ ಸುಮಾರು ೨೦-೨೫ ಜನರನ್ನು ಸಂಪರ್ಕಿಸಿ ಅವರನ್ನು ಮೊನ್ನೆ ೨೯ನೇ ತಾರೀಕಿಗೆ ದೇವಸ್ಥಾನಕ್ಕೆ ಮೀಟಿಂಗ್‌ಗೆ ಕರೆದಿದ್ದೆವು. ಆ ದಿನ ನನಗೆ ಸೂತಕ ಇದ್ದ ಕಾರಣ ದೇವಸ್ಥಾನಕ್ಕೆ ಹೋಗುವ ಹಾಗಿರಲಿಲ್ಲ. ಸಭಾಂಗಣದಲ್ಲಿ ಬೇರೆ ಕಾರ್ಯಕ್ರಮ ಇತ್ತು. ಹಾಗಾಗಿ ಇತರರ ಅಭಿಪ್ರಾಯದ ಪ್ರಕಾರ ಎಲ್ಲರನ್ನು ಮನೆಗೆ ಬರಲು ಹೇಳಿದ್ದೆವು. ಅದರಲ್ಲಿ ೯ ಮಂದಿ ಬರಲು ಅನಾನುಕೂಲವಾಗುತ್ತದೆ ಎಂದು ಮೊದಲೇ ತಿಳಿಸಿದ್ದರು. ೧೨ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಅವರು ತಿಳಿಸಿದರು. ಸಭೆಗೆ ಬರುವುದಾಗಿ ಒಪ್ಪಿಕೊಂಡು ಕೊನೆಯ ಕ್ಷಣದಲ್ಲಿ ಸಭೆಗೆ ಬಾರದೇ ತಪ್ಪಿಸಿಕೊಂಡು ನಂತರ ಯಾರಿಗೂ ಹೇಳದೇ ಸಭೆ ಮಾಡುತ್ತಾರೆ ಎಂಬುವುದಕ್ಕೆ ಅರ್ಥವಿಲ್ಲ ಎಂದು ಅವರು ಹೇಳಿದರು.

ಚೆಕ್ ಬೌನ್ಸ್: ಅವರೇ ಮಾಡಿದ ಯಡವಟ್ಟು:
ಜನಾರ್ದನ ಮೇಸ್ತ್ರಿ ಎಂಬವರು ನನಗೆ ದುಡ್ಡು ಬಾಕಿ ಇದೆ ಎಂದು ನಮ್ಮ ಮೇಲೆ ಆರೋಪ ಮಾಡಿರುವುದು ಹಾಸ್ಯಾಸ್ಪದ. ಅವರೇ ಹೆಸರು ಚೇಂಜ್ ಮಾಡಿ ಕೊಟ್ಟ ಕಾರಣ ಸಮಸ್ಯೆ ಆಗಿದೆ. ಅವರಿಗೆ ೭೨ ಸಾವಿರ ರೂಪಾಯಿಯ ಚೆಕ್ ನೀಡಿದ್ದು ಅವರೇ ತಪ್ಪು ಹೆಸರು ಹೇಳಿದ ಕಾರಣ ಆ ರೀತಿ ಆಗಿದೆ. ಈಗ ನನಗೆ ಕೊಟ್ಟ ೫೦ ಸಾವಿರ ರೂಪಾಯಿಯ ಚೆಕ್ ಬೌನ್ಸ್ ಆಗಿದೆ ಎಂದರೆ ಅದಕ್ಕೆ ಏನು ಅರ್ಥ. ಆ ಚೆಕ್ ದೇವಸ್ಥಾನದಲ್ಲಿದೆ ಎಂದು ಅವರು ಹೇಳಿದರು.

ದೇವಸ್ಥಾನಕ್ಕೆ ಬಾರದಿದ್ದರೆ ಮಾಹಿತಿ ಸಿಗುವುದು ಹೇಗೆ:
ಮಾಹಿತಿ ಬೇಕಾದರೆ ಜನರು ದೇವಸ್ಥಾನಕ್ಕೆ ಬರಬೇಕು. ದೇವಸ್ಥಾನಕ್ಕೆ ಬಾರದೆ ಮಾಹಿತಿ ಸಿಗುವುದಿಲ್ಲ ಎನ್ನುವುದು ಸರಿಯಲ್ಲ ಎಂದು ಅವರು ಹೇಳಿದರು.

ಸಂಶಯ ಇದ್ದವರು ವಾಸ್ತು ಶಿಲ್ಪಿ, ದೈವಜ್ಞರನ್ನು ಸಂಪರ್ಕಿಸಿ:
ನಾಗನಕಟ್ಟೆ ವಿಚಾರದಲ್ಲಿ ಸಂಶಯ ಇರುವವರು ವಾಸ್ತು ಶಿಲ್ಪಿ ಅಥವಾ ದೈವಜ್ಞರನ್ನು ಸಂಪರ್ಕಿಸಿ ಕೇಳಿಕೊಳ್ಳಬಹುದು.

ವಜಾ ಆದವರಿಗೆ ನನ್ನನ್ನು ವಜಾ ಮಾಡುವಂತೆ ಆಗ್ರಹಿಸುವ ನೈತಿಕತೆಯಿಲ್ಲ:
ಅರುಣ್ ಕುಮಾರ್ ಪುತ್ತಿಲ ಅವರು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯನ್ನು ವಜಾ ಮಾಡಿ ಎಂದು ಆಗ್ರಹಿಸಿದ್ದರ ಬಗ್ಗೆ ಮಾತನಾಡಿದ ಲೋಕಪ್ಪ ಗೌಡರು ನನ್ನ ವಿರುದ್ಧ ನಡೆದ ಸಭೆಯಲ್ಲಿ ದೇವಸ್ಥಾನ ಸಮಿತಿಯನ್ನು ವಜಾ ಮಾಡಿ ಎಂದು ಆಗ್ರಹಿಸಿದವರು ಸ್ವತಃ ಸಮಿತಿಯಿಂದ ವಜಾ ಆದವರು ಎಂಬುವುದು ನೆನಪಿರಬೇಕು. ಅವರಿಗೆ ನನ್ನ ವಿರುದ್ಧ ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಕಾನೂನು ಪ್ರಕಾರ ಅವರು ದೇವಸ್ಥಾನದ ಯಾವುದೇ ವಿಚಾರಗಳನ್ನು ನಿರ್ವಹಿಸಲು ಅನರ್ಹರು ಎಂದು ಹೇಳಿದರು.

ಸರ್ವಾಧಿಕಾರ ನಡೆಸಿದವರು ನನ್ನನ್ನು ಸರ್ವಾಧಿಕಾರಿ ಎನ್ನುತ್ತಿದ್ದಾರೆ:
ಜಯಂತ್ ನಡುಬೈಲು ಅವರು ನನ್ನನ್ನು ಸರ್ವಾಧಿಕಾರ ಬಿಡಬೇಕು ಎನ್ನುತ್ತಿದ್ದಾರೆ. ಜಯಂತ್ ನಡುಬೈಲು ಅವರು ನಿರ್ಮಿಸಿದ ಹಾಲ್ ಜಾಗ ದೇವಸ್ಥಾನಕ್ಕೆ ಬರೆಸಿಕೊಳ್ಳುವ ಬದಲು ಅವರ ಹೆಸರಿಗೆ ಬರೆಸಿಕೊಂಡಿದ್ದಾರೆ. ಆಗದ ಲೆಕ್ಕ ಪತ್ರ ಕೊಟ್ಟಿಲ್ಲ. ಮಹೇಶ್ಚಂದರ ಸಾಲ್ಯಾನ್ ಅಧ್ಯಕ್ಷ ಆಗಿದ್ದಾಗಲೂ ೨ ಬಾರಿ ಪರ್ಸನಲ್ ಆಗಿ ಲೆಟರ್ ಬರೆದಿದ್ದಾರೆ. ಇಂತಹ ಸರ್ವಾಧಿಕಾರಿಗಳೆಲ್ಲ ಸೇರಿಕೊಂಡು ನನ್ನ ವಿರುದ್ಧ ಆರೋಪ ಮಾಡುವುದು ಎಷ್ಟು ಸಮಂಜಸ ಎಂದು ಅವರೇ ಆತ್ಮಾವಲೋಕನ ಮಾಡಲಿ ಎಂದು ಹೇಳಿದರು.

ದಾಖಲೆ ಪ್ರದರ್ಶನ:
ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರಿಸಿದ ಲೋಕಪ್ಪ ಗೌಡರವರು ಅನೇಕ ದಾಖಲೆಗಳನ್ನು ಪ್ರದರ್ಶಿಸಿದರು.

ಅಕ್ರಮ ಪ್ರವೇಶ ಮಾಡಿ ಸಭೆ: ಗ್ರಾ.ಪಂ ಅಧ್ಯಕ್ಷರಿಗೆ ಜ್ಞಾನವಿಲ್ಲವೇ..?
ಗ್ರಾಮದ ಪ್ರಥಮ ಪ್ರಜೆ ಆಗಿರುವ ಮುಂಡೂರು ಗ್ರಾ.ಪಂ ಅಧ್ಯಕ್ಷರು ನನ್ನ ವಿರುದ್ಧ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದು ಅವರಿಗೆ ಅಷ್ಟೂ ಜ್ಞಾನವಿಲ್ಲವೇ ಎಂದು ಲೋಕಪ್ಪ ಗೌಡ ಪ್ರಶ್ನಿಸಿದರು. ಒಂದು ದೇವಸ್ಥಾನದ ಸಭಾಂಗಣವನ್ನು ದೇವಸ್ಥಾನದ ಒಪ್ಪಿಗೆ ಇಲ್ಲದೇ ಬಾಗಿಲು ತೆಗೆಸಿ ಸಭೆ ನಡೆಸಿ ಅಧ್ಯಕ್ಷತೆ ವಹಿಸಿರುವುದ ಎಷ್ಟು ಸರಿ ಎಂದು ಅವರೇ ಆತ್ಮಾವಲೋಕನ ಮಾಡಲಿ. ದೇವಸ್ಥಾನ ಸಮಿತಿಯ ಒಪ್ಪಿಗೆ ಇಲ್ಲದೇ ಅಕ್ರಮವಾಗಿ ಸಭಾಂಗಣದಲ್ಲಿ ಸಭೆ ನಡೆಸಿರುವುದು ಖಂಡನೀಯ ಎಂದು ಅವರು ಹೇಳಿದರು.

ಲೋಕಾಯುಕ್ತ ತನಿಖೆಗೆ ಸ್ವಾಗತ:
ನಮ್ಮ ವಿರುದ್ಧ ಲೋಕಾಯುಕ್ತ ತನಿಖೆಗೆ ಒತ್ತಾಯಿಸಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ೨೦೦೬-೦೭ರಿಂದ ಇದುವರೆಗೂ ನಡೆದಿರುವ ಎಲ್ಲವನ್ನೂ ಲೋಕಾಯುಕ ತನಿಖೆಗೆ ಒಪ್ಪಿಸಬೇಕು. ಇದಕ್ಕೆ ನಮ್ಮ ಬೆಂಬಲವಿದೆ ಎಂದು ಲೋಕಪ್ಪ ಗೌಡ ಹೇಳಿದರು.

ಅಕ್ರಮವಾಗಿ ಪ್ರವೇಶ ಮಾಡಿ ಸಭೆ: ದೇವಸ್ಥಾನಕ್ಕೆ ಧಕ್ಕೆ-ರಮೇಶ್ ಬೈಪಡಿತ್ತಾಯ
ಮೃತ್ಯುಂಜಯೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ರಮೇಶ್ ಬೈಪಡಿತ್ತಾಯ ಮಾತನಾಡಿ ದೇವಸ್ಥಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಘಟನೆಗಳು ಬೇಸರ ತರಿಸಿದ್ದು ಗಲಾಟೆ ಗದ್ದಲ ನಡೆಯುತ್ತಿರುವುದು ವಿಷಾಧನೀಯ. ಈಗ ದೇವಸ್ಥಾನಕ್ಕೆ ಹೋಗಲು ಮನಸ್ಸಾಗುತ್ತಿಲ್ಲ. ದೇವಸ್ಥಾನದ ವಿಚಾರದಲ್ಲಿ ಗಲಾಟೆ, ವಿವಾದ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು. ಅಕ್ರಮವಾಗಿ ಪ್ರವೇಶ ಮಾಡಿ ದೇವಸ್ಥಾನದಲ್ಲಿ ಸಭೆ ಮಾಡುವ ಮೂಲಕ ದೇವಸ್ಥಾನಕ್ಕೆ ಧಕ್ಕೆಯಾಗಿದೆ. ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುವುದು ಯಾರಿಗೂ ಭೂಷಣವಲ್ಲ ಎಂದು ಅವರು ಹೇಳಿದ

ಅಭಿವೃದ್ಧಿಯನ್ನು ಸಹಿಸದ ಅಸೂಯೆಯೇ ಇದಕ್ಕೆಲ್ಲಾ ಕಾರಣ-ಜನಾರ್ಧನ ಜೋಯಿಸ
ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪ್ರ.ಕಾರ್ಯದರ್ಶಿ ಜನಾರ್ಧನ ಜೋಯಿಸ ಮಾತನಾಡಿ ಅಭಿವೃದ್ಧಿಯನ್ನು ಸಹಿಸದದವರು ಅಸೂಯೆಯೇ ಸದ್ಯ ನಡೆಯುತ್ತಿರುವ ಬೆಳವಣಿಗೆಗೆ ಕಾರಣ ಎಂದು ಹೇಳಿದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯೆ ವೇದಾವತಿ ಹಾಗೂ ಗ್ರಾಮಸ್ಥ ಗಣೇಶ್ ಸಾಲಿಯಾನ್ ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here