ಉಪ್ಪಿನಂಗಡಿ:ಹಿಜಾಬ್ ನಿಯಮ ಉಲ್ಲಂಸಿದವರ ವಿರುದ್ಧ ಕ್ರಮ ಜರುಗಿಸದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳಿಂದ ಮುಂದುವರಿದ ಪ್ರತಿಭಟನೆ

0

  • ಪ್ರಾಚಾರ್ಯರ ವಿರುದ್ಧ ಶಾಸಕರಿಗೂ ವಿದ್ಯಾರ್ಥಿಗಳ ದೂರು ಕಾಲೇಜಿನ ಸಿಸಿ ಕ್ಯಾಮರಾದಲ್ಲಿದ್ದ ದಾಖಲೆಗಳನ್ನು ನಾಶಗೊಳಿಸಿರುವ ಶಂಕೆ

ಉಪ್ಪಿನಂಗಡಿ:ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿಚಾರವಾಗಿ ನಿಯಮವನ್ನು ಉಲ್ಲಂಸಿ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರ ವಿರುದ್ದ ಯಾವುದೇ ಕ್ರಮ ಜರುಗಿಸದೇ ಕಾನೂನು ಉಲ್ಲಂಘನೆಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಆಪಾದಿಸಿ ಕಾಲೇಜಿನ ಪ್ರಾಚಾರ್ಯರ ನಡೆಯನ್ನು ಖಂಡಿಸಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶುಕ್ರವಾರವೂ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ಬಳಿಕ, ಸರ್ಕಾರದ ಆದೇಶದ ಹೊರತಾಗಿಯೂ ಕಾಲೇಜಿವ ಪ್ರಾಚಾರ್ಯರಾದಿಯಾಗಿ ಉಪನ್ಯಾಸಕರನ್ನು ಅಣಕಿಸುವಂತೆ ಕೆಲವೊಂದು ವಿದ್ಯಾರ್ಥಿನಿಯರು ಇತ್ತೀಚಿನ ದಿನಗಳಲ್ಲಿ ಮತ್ತೆ ಹಿಜಾಬ್ ಧರಿಸಿ ಕಾಲೇಜಿಗೆ ಬರತೊಡಗಿರುವುದು ಕಾಲೇಜಿನಲ್ಲಿ ಅಸಹನೆಯನ್ನು ಮೂಡಿಸಿದೆ.ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಸಡ್ಡು ಹೊಡೆಯುವ ರೀತಿಯಲ್ಲಿ ಉದ್ಧಟತನ ಮೆರೆಯುವ ವಿದ್ಯಾರ್ಥಿಗಳ ವಿರುದ್ದ ಕಾಲೇಜು ಪ್ರಾಚಾರ್ಯರು ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ,ನ್ಯಾಯಾಲಯದ ತೀರ್ಪು ಪಾಲನೆಯಾಗುವ ತನಕ ತರಗತಿ ಬಹಿಷ್ಕರಿಸಲು ನಿರ್ಧರಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಪ್ರಾಚಾರ್ಯರ ನಡೆ ವಿರುದ್ಧ ಶಾಸಕರಿಗೆ ದೂರು: ಗುರುವಾರ ಉಪ್ಪಿನಂಗಡಿಯ ಕಾಲೇಜಿನಲ್ಲಿ ಪ್ರಾಚಾರ್ಯರನ್ನು ಖುದ್ದು ಮಾತನಾಡಿಸಲು ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಗುಂಪಿನಿಂದ ಪತ್ರಕರ್ತರ ಮೇಲೆ ಹಲ್ಲೆ ದಿಗ್ಭಂಧನದಂತಹ ಕೃತ್ಯಗಳು ನಡೆಯುತ್ತಿದ್ದರೂ,ಕಾಲೇಜು ಗೇಟಿನ ಬಳಿಯಲ್ಲಿಯೇ ಠಿಕಾಣಿ ಹೂಡಿದ್ದ ಪೊಲೀಸರನ್ನು ಕರೆಯಿಸಿ ಪತ್ರಕರ್ತರನ್ನು ರಕ್ಷಿಸಲು ಪ್ರಾಚಾರ್ಯರು ಯಾವುದೇ ಕ್ರಮವನ್ನು ಕೈಗೊಳ್ಳದಿರುವ ಬಗ್ಗೆ ಹಾಗೂ ಹಲ್ಲೆ ನಡೆಸಿ ಕಾಲೇಜಿನ ಘನತೆಗೆ ಚ್ಯುತಿ ತಂದಂತಹ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ದ ಯಾವೊಂದೂ ಶಿಸ್ತು ಕ್ರಮ ಜರುಗಿಸದ ಬಗ್ಗೆ ಮತ್ತು ಪತ್ರಕರ್ತರ ಮೇಲೆ ಹಲ್ಲೆಯಂತಹ ಕೃತ್ಯ ಸಂಭವಿಸಿದ ಬೆನ್ನಿಗೇ ಕಾಲೇಜಿನ ಸಿಸಿ ಕ್ಯಾಮರಾದಲ್ಲಿದ್ದ ದಾಖಲೆಗಳನ್ನು ನಾಶಗೊಳಿಸಲಾಗಿದೆ ಎಂಬ ವದಂತಿಗಳ ಬಗ್ಗೆ ಸತ್ಯಶೋಧನೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಸಂಜೀವ ಮಠಂದೂರು ಅವರಿಗೆ ವಿದ್ಯಾರ್ಥಿಗಳು ಲಿಖಿತ ದೂರು ಸಲ್ಲಿಸಿದ್ದಾರೆ.ಈ ಮಧ್ಯೆ, ಶುಕ್ರವಾರ ಸಾಯಂಕಾಲ ಕಾಲೇಜು ಅಭಿವೃದ್ದಿ ಸಮಿತಿ ಸಭೆ ಶಾಸಕರ ನೇತೃತ್ವದಲ್ಲಿ ನಡೆದಿದ್ದು, ಈ ಬಗೆಗಿನ ಮಾಹಿತಿ ಲಭ್ಯವಾಗಿಲ್ಲ.

ಓರ್ವ ವಿದ್ಯಾರ್ಥಿನಿ ಅಮಾನತು: ಶುಕ್ರವಾರ ಕೂಡಾ ವಿದ್ಯಾರ್ಥಿನಿಯೋರ್ವಳು ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಪ್ರವೇಶಿಸಿದ್ದು, ಆಕೆಯನ್ನು ಕೂಡ ತರಗತಿ ಪ್ರವೇಶಕ್ಕೆ ನಿರ್ಬಂಧವಿರಿಸಿ ಮುಂದಿನ ಆದೇಶದವರೆಗೆ ಅಮಾನತು ಮಾಡಿ ಪ್ರಾಂಶುಪಾಲರು ಆದೇಶಿಸಿದ್ದಾರೆ. ಹಿಜಾಬ್ ವಿಷಯವಾಗಿ ಅಮಾನತುಗೊಂಡವರ ಸಂಖ್ಯೆ ಈಗ 7ಕ್ಕೇರಿದೆ.

ಏಕಾಏಕಿ ರಜೆ?: ಮೊನ್ನೆಯಿಂದ ಹಿಜಾಬ್ ಪರ ಇರುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಾಠ- ಪ್ರವಚನಕ್ಕೆ ಅಡ್ಡಿ ಪಡಿಸುವುದು, ವರಾಂಡದಲ್ಲಿ ಗುಂಪು ಕೂಡಿ ಪ್ರತಿಭಟನೆ ನಡೆಸುವುದು, ವರದಿಗಾರರ ಮೇಲೆ ಆಕ್ರಮಣಕಾರಿಯಾಗಿ ವರ್ತಿಸುವುದು ಹೀಗೆ ಹಲವು ಗೊಂದಲಮಯ ವಾತಾವರಣವನ್ನು ಸೃಷ್ಟಿಸಿದ್ದರೂ, ಏನೂ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದ ಪ್ರಾಚಾರ್ಯರು ಇಂದು ಕಾಲೇಜಿನ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಲು ಅವಕಾಶ ಕೊಡಬಾರದು ಎಂದು ವಿದ್ಯಾರ್ಥಿಗಳ ಗುಂಪು ಧರಣಿ ನಡೆಸಿದಾಗ ಕಾಲೇಜಿಗೆ ಏಕಾಏಕಿ ರಜೆ ಸಾರಿದ್ದಾರೆ ಎನ್ನಲಾಗುತ್ತಿದ್ದು, ಪ್ರಾಚಾರ್ಯರ ಈ ನಡೆ ಬಗ್ಗೆ ಸಂಶಯ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here