ಪುತ್ತೂರು ಪತ್ರಕರ್ತರ ಸಂಘದ ತುರ್ತುಸಭೆಯಲ್ಲಿ ಹೈಡ್ರಾಮ; ಸಂಘದಿಂದ ಉಚ್ಚಾಟಿಸಲ್ಪಟ್ಟಿದ್ದರೂ ಸಭೆಯಲ್ಲಿ ಬಂದು ಕುಳಿತ ಅನೀಶರನ್ನು ಹೊರಗೆ ಕಳುಹಿಸಿದ ಶ್ರವಣ್: ತಬ್ಬಿಬ್ಬಾದ ಅನೀಶ್ ಬೆಂಬಲಿಗರು ಮೌನಕ್ಕೆ ಶರಣು!

0

  • ಅಧ್ಯಕ್ಷರ ಆದೇಶ ಧಿಕ್ಕರಿಸಿ ಅನೀಶ್ ಮತ್ತೆ ಪ್ರೆಸ್ ಕ್ಲಬ್‌ನಲ್ಲಿ ಅವ್ಯವಹಾರದ ದಂಧೆ ನಡೆಸುವರೇ?
  • ಹಾಗೆ ಮಾಡಿದರೆ ಏನಾಗಬಹುದು!?
  • ಅಥವಾ ಸಂಘದ ಮಹಾಸಭೆ ತನಕ ದೂರ ಉಳಿಯುವರೇ?
  • ಅನೀಶ್ ಸ್ನೇಹಿತರು ಯಾರು? ಅವರು ಬೆಂಬಲಕ್ಕೆ ನಿಲ್ಲದಿರಲು ಕಾರಣವೇನು?

    ಸಾರ್ವಜನಿಕರಲ್ಲಿ ಕುತೂಹಲ

ಪುತ್ತೂರು: ಜೂನ್ ೧೫ರಂದು ಪುತ್ತೂರು ಪತ್ರಿಕಾಭವನದಲ್ಲಿ ನಡೆದ ತಾಲೂಕು ಪತ್ರಕರ್ತರ ಸಂಘದ ತುರ್ತುಸಭೆಯಲ್ಲಿ ಹೈಡ್ರಾಮ ನಡೆದಿದೆ.
ಪತ್ರಿಕಾ ಭವನವನ್ನು ದುರ್ಬಳಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಸದಸ್ಯ ಸ್ಥಾನದಿಂದ ಉಚ್ಚಾಟಿಸಲ್ಪಟ್ಟಿದ್ದರೂ ಸಭೆಗೆ ಬಂದು ಕುಳಿತಿದ್ದ ಅನೀಶ್ ಕುಮಾರ್ ಅವರನ್ನು ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರು ಹೊರಗೆ ಕಳುಹಿಸಿದ ಮತ್ತು ಶ್ರವಣ್ ಅವರ ಖಡಕ್ ನಿರ್ಧಾರದಿಂದಾಗಿ ಅನೀಶ್ ಪರ ಧ್ವನಿ ಎತ್ತಲು ಸಿದ್ಧರಾಗಿ ಬಂದಿದ್ದ ಕೆಲ ಸದಸ್ಯರು ಅನೀಶ್ ಅವರಿಗೆ ಬೆಂಬಲ ನೀಡದೆ ಮೌನಕ್ಕೆ ಶರಣಾದ ಘಟನೆ ಸಭೆಯಲ್ಲಿ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

                                             ಸಭೆಯಲ್ಲಿ ಭಾಗವಹಿಸಿದವರು

ಇಷ್ಟೆಲ್ಲ ಘಟನೆ ನಡೆದ ಮೇಲೆಯೂ ಅನೀಶ್ ಕುಮಾರ್‌ರವರು ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರ ಆದೇಶವನ್ನು ಧಿಕ್ಕರಿಸಿ, ತನ್ನನ್ನು ಉಚ್ಛಾಟಿಸಲು ಅಧ್ಯಕ್ಷರಿಗೆ ಅಧಿಕಾರವಿಲ್ಲ ಎಂಬ ಹಳೆಯ ವಾದವನ್ನು ಎತ್ತಿಹಿಡಿದು ಪುನ: ಸಂಘದ ಸದಸ್ಯನೆಂದು ಹೇಳಿಕೊಳ್ಳುತ್ತಾ ಪತ್ರಿಕಾ ಭವನದಲ್ಲಿ ತನ್ನ ಹಳೆಯ ಅವ್ಯವಹಾರದ ದಂಧೆಯನ್ನು ಮುಂದುವರಿಸುತ್ತಾರೆಯೇ ಅಥವಾ ತನ್ನನ್ನು ಸಭೆಯಿಂದ ಹೊರಗೆ ಕಳುಹಿಸಿದ್ದರಿಂದ ಮತ್ತು ಅಲ್ಲಿದ್ದ ಯಾರೂ ತನ್ನ ಸಹಾಯಕ್ಕೆ ನಿಲ್ಲದ್ದರಿಂದ ಹೆದರಿ ಪತ್ರಿಕಾ ಭವನಕ್ಕೆ ಪ್ರವೇಶ ಮಾಡದೆ ಹೊರಗೆ ನಿಲ್ಲುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.ಒಂದು ವೇಳೆ ಅನೀಶ್ ಕುಮಾರ್ ಅಧ್ಯಕ್ಷರ ಆದೇಶ ಧಿಕ್ಕರಿಸಿ ತನ್ನ ಹಳೆ ಚಾಳಿ ಮುಂದುವರಿಸಿದರೆ ಏನಾಗಬಹುದು? ಅಧ್ಯಕ್ಷ ಶ್ರವಣ್ ಕುಮಾರ್ ಏನು ಕ್ರಮ ತೆಗೆದುಕೊಳ್ಳಬಹುದು ಎಂಬ ಕುತೂಹಲ ಜನರಲ್ಲಿದೆ. ಸಂಘದ ಸದಸ್ಯತನದಿಂದ ಉಚ್ಛಾಟನೆಗೊಂಡಿದ್ದರೂ ಅನೀಶ್‌ರನ್ನು ಸಭೆಗೆ ಬರುವಂತೆ ಮಾಡಿದ ಸ್ನೇಹಿತ ಸದಸ್ಯರು ಯಾರು? ಅನೀಶರನ್ನು ಸಭೆಯಿಂದ ಹೊರಗೆ ಹೋಗಲು ಅಧ್ಯಕ್ಷ ಶ್ರವಣರು ಹೇಳಿದಾಗ ಸೇರಿದ ಯಾರೂ ಅನೀಶರ ಬೆಂಬಲಕ್ಕೆ ನಿಲ್ಲಲಿಲ್ಲ ಯಾಕೆ? ಎಂಬ ಪ್ರಶ್ನೆ ಜನರಲ್ಲಿದೆ.

ಸಭೆಯಲ್ಲಿ ಹೈಡ್ರಾಮ; ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯರ ತುರ್ತುಸಭೆಯನ್ನು ಜೂನ್ ೧೫ರಂದು ನಿಗದಿಪಡಿಸಲಾಗಿತ್ತು. ಪತ್ರಕರ್ತರ ಸಂಘದ ವಿಚಾರದ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಪತ್ರಿಕಾ ಭವನದಲ್ಲಿ ಅವ್ಯವಹಾರ, ಅನೈತಿಕ ಚಟುವಟಿಕೆ ನಡೆಸಿದ ಕಾರಣಕ್ಕಾಗಿ ಸಂಘದಿಂದ ಅನೀಶ್ ಕುಮಾರ್ ಅವರನ್ನು ಉಚ್ಚಾಟಿಸಲ್ಪಟ್ಟಿರುವ ವಿಚಾರ ಈ ಸಭೆಯಲ್ಲಿ ಪ್ರಸ್ತಾಪ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆಯೇ ಸಭೆ ಪ್ರಾರಂಭ ಆಗುವ ಮೊದಲು ಕೆಲವು ಸದಸ್ಯರು ಅನೌಪಚಾರಿಕವಾಗಿ ಅನೀಶ್ ವಿಚಾರ ಪ್ರಸ್ತಾಪಿಸಿದ್ದರು. ಆದರೆ, ಅಧ್ಯಕ್ಷ ಶ್ರವಣ್ ಕುಮಾರ್ ಅವರು ಇವತ್ತಿನ ಸಭೆಯ ಅಜೆಂಡಾ ಬಿಟ್ಟು ಬೇರೆ ವಿಚಾರ ಚರ್ಚೆ ನಡೆಸಲು ಇಲ್ಲ. ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸುವಾಗ ಅನೀಶ್ ಅವರ ವಿಚಾರ ಚರ್ಚೆ ಮಾಡಲು ಸಾಧ್ಯವಿಲ್ಲ. ಅದೊಂದು ಗಂಭೀರ ವಿಚಾರ. ಅದನ್ನು ಮುಂದೆ ಚರ್ಚಿಸುವ ಎಂದರು. ಬಳಿಕ ಸಭೆ ಆರಂಭಗೊಂಡಿದ್ದು ಅನೀಶ್ ಕುಮಾರ್ ಸಭೆಗೆ ಬಂದು ಎದುರಿನ ಸಾಲಿನಲ್ಲಿ ಕುಳಿತಿದ್ದರು. ಪತ್ರಕರ್ತರ ಸಂಘಕ್ಕೂ ಅನೀಶರಿಗೂ ಸದ್ಯ ಯಾವುದೇ ಸಂಬಂಧ ಇಲ್ಲ. ಅವರನ್ನು ಸಂಘದ ಸದಸ್ಯತ್ವದಿಂದ ವಜಾ ಮಾಡಲಾಗಿದೆ. ಆದ್ದರಿಂದ ಅನೀಶ್ ಸಭೆಯಿಂದ ಕೂಡಲೇ ಹೊರ ಹೋಗಬೇಕು ಎಂದು ಶ್ರವಣ್ ಹೇಳಿದರು. ತನಗೆ ಬೆಂಬಲ ನೀಡುತ್ತಾರೆ ಎಂದು ನಿರೀಕ್ಷೆಯಲ್ಲಿದ್ದ ಇತರ ಪ್ರಮುಖ ಈರ್ವರು ಸದಸ್ಯರತ್ತ ನೋಡಿದ ಅನೀಶ್ ಮತ್ತೆಯೂ ಸಭೆಯಲ್ಲಿ ಕುಳಿತಾಗ ಶ್ರವಣ್ ಜೋರುಧ್ವನಿಯಲ್ಲಿ ಸಭೆಯಿಂದ ಹೊರ ಹೋಗುವಂತೆ ಸೂಚಿಸಿದರು. ಈ ವೇಳೆ ತನಗೆ ಬೆಂಬಲ ಸೂಚಿಸಿ ಮಾತನಾಡಬಹುದು ಎಂದು ನಿರೀಕ್ಷೆಯಲ್ಲಿದ್ದ ಇತರ ಸದಸ್ಯರತ್ತ ಎರಡ್ಮೂರು ಸಲ ನೋಡಿದ ಅನೀಶ್ ಅವರು ಯಾರೂ ತನ್ನ ಬೆಂಬಲಕ್ಕೆ ನಿಲ್ಲದೆ ಮೊಬೈಲ್ ಫೋನಿನಲ್ಲಿ ಮಗ್ನರಾಗಿ ಮೌನಕ್ಕೆ ಶರಣಾಗಿರುವುದನ್ನು ಕಂಡು ಸಭೆಯಿಂದ ಹೊರ ಹೋದರಲ್ಲದೆ ಪತ್ರಿಕಾ ಭವನದಿಂದಲೇ ನಿರ್ಗಮಿಸಿದರು. ಬಳಿಕ ಕೆಲ ಸದಸ್ಯರು ನಮ್ಮ ಸಂಘದ ಒಳಗಿನ ವಿಚಾರ ಹೊರಗೆ ಪ್ರಚಾರ ಆಗುವಂತಾಗಿದೆ ಎಂದರು. ಪ್ರತಿಕ್ರಿಯಿಸಿದ ಅಧ್ಯಕ್ಷರು ಅದು ಆಗಬೇಕಾದ್ದೇ. ಅದು ಗಂಭೀರ ವಿಚಾರ ಎಂದರು. ಕಾರ್ಯದರ್ಶಿ ಸಂದೀಪ್ ಕುಮಾರ್ ಅವರು ಅನೀಶ್ ಉಚ್ಚಾಟನೆ ಪ್ರಕರಣ ಸುದ್ದಿ ಬಿಡುಗಡೆಯಲ್ಲಿ ಪ್ರಕಟಗೊಂಡಿರುವುದನ್ನು ಉಲ್ಲೇಖಿಸಿ ಮಾತನಾಡಿ ಸುದ್ದಿಯವರು ಪತ್ರಿಕಾ ಭವನದ ಒಳಗೆ ಬಂದು ಸ್ಟೇಟ್ ಮೆಂಟ್ ತೆಗೆದುಕೊಂಡಿದ್ದಾರೆ. ಇದೆಲ್ಲಾ ಸರಿಯಾ ಎಂದರು. ಅಧ್ಯಕ್ಷ ಶ್ರವಣ್ ಕುಮಾರ್ ಮಾತನಾಡಿ, ಸುದ್ದಿಯವರು ಪತ್ರಿಕಾ ಭವನದ ಒಳಗೆ ಬರಬಾರದು ಎಂದೇನಿಲ್ಲ. ಪತ್ರಿಕಾ ಭವನಕ್ಕೆ ಪತ್ರಿಕೆಯವರು ಬಾರದೇ ಮತ್ತೆ ಯಾರು ಬರುವುದು ಎಂದು ಪ್ರಶ್ನಿಸಿದರಲ್ಲದೆ ಅಭಿಪ್ರಾಯ ಪಡೆದುಕೊಳ್ಳಲು ಬರಬೇಡಿ ಎಂದು ಹೇಳಲು ಸಾಧ್ಯವೇ ಇಲ್ಲ ಎಂದರು. ಅನೀಶ್ ಅವರನ್ನು ಸಂಘದಿಂದ ಉಚ್ಚಾಟಿಸಿರುವ ಕುರಿತು ಸುದ್ದಿ ಬಿಡುಗಡೆಯಲ್ಲಿ ವರದಿ ಪ್ರಕಟ ಆಗಿರುವ ಬಗ್ಗೆ ಸಭೆಯಲ್ಲಿ ಕೆಲವು ಸದಸ್ಯರು ಗೊಣಗಿದಾಗ ಶ್ರವಣ್ ಕುಮಾರ್ ಅವರು ವರದಿ ಪ್ರಕಟಿಸಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಅಂತಹ ಕಾನೂನು ಕೂಡ ಇಲ್ಲ. ಸುದ್ದಿ ಬಿಡುಗಡೆ ಎನ್ನುವುದು ಸ್ವತಂತ್ರ ಸಂಸ್ಥೆ. ಅವರು ಪತ್ರಿಕಾ ಭವನ ಅಥವಾ ಪತ್ರಕರ್ತರ ಸಂಘದ ಅಧೀನದಲ್ಲಿ ಇಲ್ಲ. ವರದಿ ಹಾಕುವುದು, ಬಿಡುವುದು ಸುದ್ದಿಯವರಿಗೆ ಬಿಟ್ಟದ್ದು. ಅದನ್ನು ನಾವು ಕೇಳಲು ಆಗುವುದಿಲ್ಲ. ಇಲ್ಲಿ ಚರ್ಚೆ ಮಾಡುವುದೂ ಇಲ್ಲ. ವರದಿ ಸರಿ ಇಲ್ಲದಿದ್ದರೆ ಕೋರ್ಟುಗೆ ಹೋಗುವವರು ಹೋಗಬಹುದು ಎಂದರು. ಇವತ್ತು ಸಭೆ ಮುಗಿದ ಕೂಡಲೇ ಸುದ್ದಿಯವರು ಕರೆ ಮಾಡಿ ಮಾಹಿತಿ ಸಂಗ್ರಹಿಸುತ್ತಾರೆ. ಅವರಿಗೆ ನಮ್ಮೊಳಗಿನ ಮಾಹಿತಿ ಕೊಡುವುದು ಬೇಡ ಎಂದು ಕೆಲ ಸದಸ್ಯರು ಅಭಿಪ್ರಾಯ ತಿಳಿಸಿದರು. ನಂತರ ಪತ್ರಕರ್ತರ ಸಂಘದ ಮಹಾಸಭೆ ನಡೆಸುವ ಬಗ್ಗೆ, ಮಹಾಸಭೆಯ ರೂಪುರೇಷೆ ಕುರಿತು ಚರ್ಚೆ ನಡೆಸಲಾಯಿತು. ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ಪತ್ರಕರ್ತರ ಮೇಲಾಗಿರುವ ದೌರ್ಜನ್ಯ ಮತ್ತು ಪತ್ರಕರ್ತರ ಮೇಲಾಗಿರುವ ಕೇಸಿನ ಬಗ್ಗೆ ಚರ್ಚೆ ನಡೆದ ಬಳಿಕ ವಿವಿಧ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಲಾಯಿತು ಎಂದು ತಿಳಿದು ಬಂದಿದೆ. ಸದಸ್ಯರಾದ ಮೇಘ ಪಾಲೆತ್ತಡಿ, ಶಶಿಧರ ರೈ ಕುತ್ಯಾಳ, ಪ್ರವೀಣ್ ಕುಮಾರ್ ಬೊಳುವಾರು, ರಾಜೇಶ್ ಪಟ್ಟೆ, ಕೃಷ್ಣಪ್ರಸಾದ್ ಬಲ್ನಾಡು, ಅಜಿತ್ ಕುಮಾರ್ ಮತ್ತಿತರರು ಸಭೆಯಲ್ಲಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here