ಲಂಚ, ಭ್ರಷ್ಟಾಚಾರ ರಹಿತ ಅಧಿಕಾರಿಗಳೊಂದಿಗೆ ಜನರ ಪ್ರೀತಿ, ಗೌರವವಿರುತ್ತದೆ-ಲಂಚ, ಭ್ರಷ್ಟಾಚಾರ ರಹಿತ ಜನಪ್ರತಿನಿಧಿಗಳೊಂದಿಗೆ ಜನರ ವಿಶ್ವಾಸ, ಓಟು ಇರುತ್ತದೆ

0

  • ಲಂಚ, ಭ್ರಷ್ಟಾಚಾರ ರಹಿತ ನಮ್ಮೂರಿನೊಂದಿಗೆ ಜಗತ್ತೇ ಇದ್ದು, ಅಭಿವೃದ್ಧಿಯಾಗುತ್ತದೆ
  • ಲಂಚ, ಭ್ರಷ್ಟಾಚಾರ ಮುಕ್ತವಾದರೆ ಊರಿನ ಅಭಿವೃದ್ಧಿ ಎಂದಿರುವಾಗ ಜನಪ್ರತಿನಿಧಿಗಳು, ಅದನ್ನು ಮಾಡಲೇ ಬೇಕಲ್ಲವೇ? ಅಂತವರಿಗೇ ಓಟು ದೊರಕಬೇಕಲ್ಲವೇ?

ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧದ ಆಂದೋಲನ ಸಾಮಾನ್ಯ ಜನರನ್ನು ತಲುಪಿದೆ, ಲಂಚದ ಪ್ರಭಾವ ಕಡಿಮೆಯಾಗುತ್ತಿದೆ. ಬಡಜನರ, ಮಧ್ಯಮ ವರ್ಗದವರ ಜೀವ ಉಳಿಸುವ ಸಂಜೀವಿನಿ ಆಗುತ್ತಿದೆ. ಯಾಕೆಂದರೆ ಯಾವುದೇ ಭ್ರಷ್ಟಾಚಾರ ಅತೀ ಹೆಚ್ಚು ತೊಂದರೆ ಕೊಡುವುದು ಬಡವರಿಗೆ, ದುರ್ಬಲರಿಗೆ ಮತ್ತು ಮಧ್ಯಮ ವರ್ಗದವರಿಗೆ ಎಂದು ಎಲ್ಲರಿಗೂ ಗೊತ್ತಿದೆ. ಅವರು ತಮಗೆ ಆಗುತ್ತಿರುವ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಹೆದರಿ ಸುಮ್ಮನೆ ಇರುತ್ತಾರೆ. ಹಣವಿದ್ದವರು, ಬಲಾಢ್ಯರು ಸ್ವಲ್ಪ ಹಣ ಕಳೆದುಕೊಂಡರೆ ಅವರ ಜೀವನಕ್ಕೆ ತೊಂದರೆ ಆಗುವುದಿಲ್ಲ ಎಂಬ ಕಾರಣಕ್ಕೆ ಅದನ್ನು ಸಹಿಸಿಕೊಂಡಿದ್ದಾರೆ. ಅದು ಅವರ ಸ್ವಾಭಿಮಾನಕ್ಕೆ ಧಕ್ಕೆ ಎಂದು ಅನಿಸಿದವರು ಮಾತ್ರ ಅದನ್ನು ವಿರೋಧಿಸುತ್ತಾರೆ. ಊರಿನ ಎಲ್ಲಾ ಜನರು ಒಗ್ಗಟ್ಟಾಗಿ ಲಂಚ, ಭ್ರಷ್ಟಾಚಾರವನ್ನು ಎದುರಿಸಬೇಕು. ಉತ್ತಮ ಸೇವೆ ನೀಡುವವರನ್ನು ಪುರಸ್ಕರಿಸಬೇಕು. ಹಾಗೆ ಮಾಡುವುದರಿಂದ ಲಂಚ ರಹಿತ ಉತ್ತಮ ಅಧಿಕಾರಿಗಳಿಗೆ ಜನರ ಪ್ರೀತಿ ವಿಶ್ವಾಸ ದೊರಕುತ್ತದೆ. ಜನರನ್ನು ಸುಲಿಗೆ ಮಾಡುವ, ರಕ್ತ ಹೀರುವ ಲಂಚಕೋರರಿಗೆ ಜನರ ಬಹಿಷ್ಕಾರ, ಶಾಪ ದೊರಕುತ್ತದೆ.

ಜನಪ್ರತಿನಿಧಿಗಳು, ಪಕ್ಷಗಳು ಜನರ ಸೇವೆಗಾಗಿ ಇರುವುದಾಗಿದೆ. ಅಧಿಕಾರಿಗಳು ಜನರ ಸೇವೆಗಾಗಿ ಇರುವವರೆಂದು ಅವರಿಗೆ ಗೊತ್ತಿದೆ. ಹಾಗಿದ್ದರೂ ಲಂಚ, ಭ್ರಷ್ಟಾಚಾರ ಮಾಡುವ ಅಧಿಕಾರಿಗಳನ್ನು ನೋಡಿ ಜನಪ್ರತಿನಿಧಿಗಳು ಯಾಕೆ ಸುಮ್ಮನೆ ಇದ್ದಾರೆ ಎಂದು ಅರ್ಥವಾಗುವುದಿಲ್ಲ. ಒಂದೋ ಅವರು ಅಧಿಕಾರಿಗಳೊಂದಿಗೆ ಲಂಚ, ಭ್ರಷ್ಟಾಚಾರದಲ್ಲಿ ಶಾಮೀಲಾಗಿರಬೇಕು ಅಥವಾ ಅವರಿಂದ ಲಾಭ ಪಡೆದುಕೊಂಡಿರಬೇಕು ಅಥವಾ ಅವರಿಗೆ ಹೆದರುತ್ತಿರಬೇಕು. ಕೆಲವು ಅಧಿಕಾರಿಗಳು ಜನರನ್ನು ಸುಲಿಗೆ ಮಾಡುತ್ತಿದ್ದರೂ ಅಂತಹ ಅಧಿಕಾರಿಗಳನ್ನು ವಿರೋಧಿಸದೆ ಕೈ ಕಟ್ಟಿ ಸುಮ್ಮನೆ ಇದ್ದರೆ ಜನಪ್ರತಿನಿಧಿಗಳು, ಪಕ್ಷಗಳು ಜನರ ಪ್ರೀತಿ ವಿಶ್ವಾಸಕ್ಕೆ, ತಮ್ಮ ಸ್ಥಾನಮಾನಕ್ಕೆ ಅರ್ಹರಲ್ಲ ಎಂದು ಜನರು ಪರಿಗಣಿಸಬೇಕು. ಲಂಚ, ಭ್ರಷ್ಟಾಚಾರದ ಅಧಿಕಾರಿಯನ್ನು ಶಿಕ್ಷಿಸಿ, ಜನರನ್ನು ರಕ್ಷಿಸುವ, ಜನರಿಗೆ ಲಂಚದ ಹಣವನ್ನು ವಾಪಸ್ ತೆಗೆಸಿಕೊಡುವ ಜನಪ್ರತಿನಿಧಿಗಳು, ಪಕ್ಷಗಳು ತಮಗೆ ಬೇಕು ಎಂದು ಜನರು ಬಯಸಬೇಕು. ಅಂತವರ ಮೇಲೆ ವಿಶ್ವಾಸವಿರಿಸಿ ಓಟು ನೀಡಿ ಗೆಲ್ಲಿಸುವಂತಾಗಬೇಕು. ತಾವು ಓಟು ನೀಡುವ ಮತ್ತು ಓಟು ನೀಡಿ ಗೆಲ್ಲಿಸಿದ ಜನಪ್ರತಿನಿಧಿಗಳ ಮುಂದೆ ನಮ್ಮ ಊರು ಅಭಿವೃದ್ಧಿಯಾಗಲು ಲಂಚ, ಭ್ರಷ್ಟಾಚಾರ ಮುಕ್ತವಾಗಬೇಕೇ ಬೇಡವೇ? ಅದಕ್ಕಾಗಿ ಏನು ಮಾಡುತ್ತೀರಿ? ಎಂಬ ಪ್ರಶ್ನೆಯನ್ನು ಇರಿಸಬೇಕಾಗಿದೆ.

ವಿಶ್ವಸಂಸ್ಥೆ ಡಿಸೆಂಬರ್ ೯ನ್ನು ಕರಪ್ಷನ್ ಫ್ರೀ ಡೇ ಅಂದರೆ ಲಂಚ, ಭ್ರಷ್ಟಾಚಾರ ರಹಿತ ದಿನ ಆಗಬೇಕೆಂದು ಘೋಷಿಸಿದೆ. ವಿಶ್ವಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕೋಫಿಅನ್ನಾನ್‌ರವರು ಲಂಚ, ಭ್ರಷ್ಟಾಚಾರವೇ ಬಡತನಕ್ಕೆ ಮುಖ್ಯ ಕಾರಣ. ಬಡ ರಾಷ್ಟ್ರಗಳಲ್ಲಿ ಅದು ಜಾಸ್ತಿ ಇರುವುದರಿಂದ ಅಲ್ಲಿ ಬಡತನ ಜಾಸ್ತಿಯಾಗಿದೆ ಎಂದು ಹೇಳಿದ್ದಾರೆ. ಎಲ್ಲಿ ಲಂಚ, ಭ್ರಷ್ಟಾಚಾರ ಮುಕ್ತವಾಗುತ್ತದೋ ಅಲ್ಲಿ ಅಭಿವೃದ್ದಿಯಾಗುತ್ತದೆ ಎಂಬ ಅರ್ಥದಲ್ಲಿ ಅವರು ಹೇಳಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ದೆಹಲಿ ಮಿತ್ರದ ವತಿಯಿಂದ ನಡೆದ ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಇರುವ ದ.ಕ., ಉಡುಪಿ ಜಿಲ್ಲೆಯವರು ಸುದ್ದಿ ಜನಾಂದೋಲನದ ಲಂಚ, ಭ್ರಷ್ಟಾಚಾರ ವಿರೋಧದ ಆಂದೋಲನಕ್ಕೆ ಬೆಂಬಲ ನೀಡಿದ್ದಾರೆ. ಮಾತ್ರವಲ್ಲ ಲಂಚ, ಭ್ರಷ್ಟಾಚಾರ ಮುಕ್ತವಾಗುವ ತಮ್ಮ ತಮ್ಮ ಊರಿನ ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಕಳೆದ ಶನಿವಾರ ಬೆಂಗಳೂರಿನಲ್ಲಿ ನಡೆದ ದ.ಕ, ಉಡುಪಿ ಜಿಲ್ಲೆಯವರ ಕಾರ್ಯಕ್ರಮದಲ್ಲಿ ಸುದ್ದಿಯ ಜನಾಂದೋಲನಕ್ಕೆ ಬೆಂಬಲ ನೀಡಿದ್ದಲ್ಲದೆ ಲಂಚ, ಭ್ರಷ್ಟಾಚಾರ ಮುಕ್ತವಾಗುವ ತಮ್ಮ ತಮ್ಮ ಊರುಗಳಿಗೆ ಸಹಾಯ ಒದಗಿಸುವುದಾಗಿ ಆ ಊರುಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.

ಈ ಮೇಲಿನ ವಿಷಯಗಳ ಹಿನ್ನೆಲೆಯಲ್ಲಿ ನಮ್ಮ ಊರಿನ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಪ್ರಮುಖರು, ಜನರ ಕೆಲವು ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡಬೇಕಾಗಿದೆ.

1. ನಮ್ಮ ಊರನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯವಿಲ್ಲವೇ?
2. ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾಗಬೇಕೇ? ಬೇಡವೇ?
3. ನಮ್ಮ ಊರಿನ ಅಧಿಕಾರಿಗಳು ಲಂಚ, ಭ್ರಷ್ಟಾಚಾರ ಮಾಡುತ್ತಿದ್ದರೆ ಅದನ್ನು ನೋಡಿ ಸುಮ್ಮನೆ ಇರುವುದೇಕೆ? ಅವರನ್ನು ಎದುರಿಸಲು ಹೆದರಿಕೆಯೇ? ಅಥವಾ ಅವರೊಂದಿಗೆ ಶಾಮೀಲಾಗಿ ಅವರ ಕೆಲಸಕ್ಕೆ ಬೆಂಬಲವೇ?
4. ನಾವು ಆರಿಸಿದ ಜನಪ್ರತಿನಿಧಿಗಳಿಗೆ ಲಂಚ, ಭ್ರಷ್ಟಾಚಾರ ಮಾಡುವ ಯಾವುದೇ ಅಧಿಕಾರಿಗಳಿಂದ ತೊಂದರೆಯಾಗುವುದಿಲ್ಲ. ಯಾಕೆಂದರೆ ಅವರಿಗೆ ಅಧಿಕಾರಿಗಳು ಹೆದರುತ್ತಾರೆ. ಒಂದೋ ವರ್ಗಾವಣೆ ಮಾಡುತ್ತಾರೆ, ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತಾರೆ ಎಂಬ ಕಾರಣಕ್ಕೆ ಅವರುಗಳು ಜನಪ್ರತಿನಿಧಿಗಳೊಂದಿಗೆ ಚೆನ್ನಾಗಿರುತ್ತಾರೆ, ಅವರ ರಕ್ಷಣೆ ಪಡೆಯುತ್ತಾರೆ ಎಂಬ ಅಭಿಪ್ರಾಯವಿದೆ. ಅದಕ್ಕೆ ಏನನ್ನುತ್ತೀರಿ.
5. ಜನಪ್ರತಿನಿಧಿಗಳು ತಮ್ಮ ಮತದಾರರಿಗೆ ಲಂಚ, ಭ್ರಷ್ಟಾಚಾರ ಮುಕ್ತ ಊರಿನ ಭರವಸೆ ನೀಡಬಲ್ಲಿರಾ?, ಜನರಿಂದ ಲಂಚವಾಗಿ ಕೊಟ್ಟ ಹಣವನ್ನು ವಾಪಸ್ ತೆಗೆಸಿಕೊಡಬಲ್ಲಿರಾ?
6. ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾದರೆ ಅಭಿವೃದ್ಧಿಯಾಗುತ್ತದೆ ಎಂಬುವುದು ಹೌದಾದರೆ ಯಾಕೆ ಸುಮ್ಮನಿದ್ದೀರಿ?
7. ಊರನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡಲು ಪ್ರಯತ್ನ ಮಾಡುತ್ತೀರಾ? ಹೇಗೆ ಮಾಡುತ್ತೀರಿ?

ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಜನರು ಪಕ್ಷ, ಜಾತಿ, ಧರ್ಮ ಭೇಧ ಭಾವ ಬಿಟ್ಟು ಕೇಳಬೇಕು. ಇಲ್ಲದಿದ್ದರೆ ಯಾರೇ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರದ ಕೂಪದಿಂದ, ಜಾಲದಿಂದ ನಾವು ಹೊರಗೆ ಬರಲಾರೆವು ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇನೆ.

LEAVE A REPLY

Please enter your comment!
Please enter your name here