ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರದ ಸಮಾರೋಪ

0

ಪುತ್ತೂರು: ನಗರದ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ `ಕಾನೂನು ಶಿಕ್ಷಣದಲ್ಲಿ ಪರಿಣಾಮಕಾರಿ ಶಿಕ್ಷಣಶಾಸ್ತ್ರದ ಉಪಕರಣ’ (ಎಫೆಕ್ಟಿವ್ ಪೆಡಗೋಜಿಕಲ್ ಟೂಲ್ಸ್ ಇನ್ ಲೀಗಲ್ ಎಜುಕೇಶನ್) ಎಂಬ ವಿಷಯದ ಕುರಿತು ಏರ್ಪಡಿಸಲಾಗಿರುವ ಮೂರು ದಿನಗಳ ‘ಕಾನೂನು ಉಪನ್ಯಾಸಕರ ಪುನಶ್ಚೇತನ ಕಾರ್ಯಕ್ರಮ’ದ ಸಮಾರೋಪ ಸಮಾರಂಭ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೆ ಎಂ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮಾರೋಪ ಭಾಷಣ ಮಾಡಿದರು. ವಿದ್ಯಾರ್ಥಿಗಳ ಬಾಳ ಹೊಂಬೆಳಕು ಅಧ್ಯಾಪಕರು ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯ ಹಿಂದೆ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. “ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡುತ್ತಾರೆ” ಎಂಬ ಮಾತು ಅಕ್ಷರಶಃ ಸತ್ಯ. ಅಂತಹ ಮಹತ್ವದ ಸ್ಥಾನದಲ್ಲಿರುವ ಶಿಕ್ಷಕ ಮೌಲ್ಯಗಳನ್ನು ಉಳಿಸಿಕೊಂಡು, ಪ್ರತಿದಿನ ತಾನು ಕಲಿಯುತ್ತ, ವಿದ್ಯಾರ್ಥಿಗಳಿಗೆ ಸದಾ ಹೊಸತನ್ನು ಕಲಿಸುವ ಜವಾಬ್ದಾರಿಯಿದೆ ಎಂದು ಹೇಳಿದರು. ಉಪನ್ಯಾಸಕರು ಕೇವಲ ಪಾಠ- ನೋಟ್ಸ್ ಬರೆಸುವ ಕೆಲಸಕ್ಕೆ ಸೀಮಿತವಾಗದೇ ಪ್ರತಿಕ್ಷಣ ಜ್ಞಾನಾರ್ಜನೆ ಮಾಡುವ ಮೂಲಕ ಜ್ಞಾನ ಪ್ರಸಾರ ಹಾಗೂ ಜ್ಞಾನ ಸೃಷ್ಟಿಸುವ ಕೆಲಸ ಮಾಡಬೇಕು ಎಂದರು. ಡಿಜಿಟಲ್ ಕಾಲದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬದಲಾಗಿರುವ ಕಾಲಮಾನ ಹಾಗೂ ವಿದ್ಯಾರ್ಥಿ ನಿರೀಕ್ಷೆಗಳನ್ನು ಪ್ರಾಧ್ಯಾಪಕರು ಸಮರ್ಥವಾಗಿ ಪೂರೈಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ರೈ ಪಡ್ಡಂಬೈಲು ಮಾತನಾಡಿ, ಇಂದಿನ ಪ್ರಾಧ್ಯಾಪಕವರ್ಗದ ಮೇಲೆ ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ಬೆಳೆಸುವ ದೊಡ್ಡದಾದ ಜವಾಬ್ದಾರಿಯಿದೆ. ಸಮಾಜ ಅಧ್ಯಾಪಕರನ್ನು ನೋಡುವ ದೃಷ್ಠಿ ಬೇರೆಯಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ, ಆತ್ಮಸ್ಥೈರ್ಯ ಸಾಮರ್ಥ್ಯಗಳನ್ನು ತುಂಬಿ ಅಧ್ಯಾಪಕ ವೃತ್ತಿಗೆ ನ್ಯಾಯ ಒದಗಿಸಬೇಕು ಎಂದರು.

ಇದೇ ವೇಳೆ ಮೂರು ದಿನಗಳ ಕಾಲ ನಡೆದ ಕಾರ್ಯಾಗಾರದ ಕುರಿತು ಕಾನೂನು ಪ್ರಾಧ್ಯಾಪಕರಾದ ಡಾ. ರೇಖಾ, ಸಂಗೀತಾ ಎಸ್ ಎಂ, ಸುಭಾಸಿಣಿ ಜೆ ಹಾಗೂ ಕು. ಶ್ರೀರಕ್ಷಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಮುಖ್ಯ ಅತಿಥಿಗಳು ಭಾಗವಹಿಸಿದ ಎಲ್ಲಾ ಉಪನ್ಯಾಸಕರಿಗೆ ಪ್ರಮಾಣಪತ್ರ ವಿತರಿಸಿದರು. ವೇದಿಕೆಯಲ್ಲಿ ಕಾಲೇಜಿನ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ ರವೀಂದ್ರ ಉಪಸ್ಥಿತರಿದ್ದರು. ಕಾನೂನು ಸಹಾಯಕ ಪ್ರಾಧ್ಯಾಪಕ ಕೌಶಿಕ್ ಜೆ ಸ್ವಾಗತಿಸಿ, ಪ್ರಾಂಶುಪಾಲರಾದ ಅಕ್ಷತಾ ಎ ಪಿ ವಂದಿಸಿದರು. ಸಂಧ್ಯಾ ಪಿ.ಎಂ. ಕಾರ್ಯಕ್ರಮ ನಿರ್ವಹಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಕಾಲೇಜುಗಳ ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

3 ದಿನಗಳಲ್ಲಿ 10 ವಿಶೇಷ ಗೋಷ್ಠಿಗಳು:

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ ರವೀಂದ್ರ ಹಾಗೂ ಪ್ರಾಂಶುಪಾಲರಾದ ಅಕ್ಷತಾ ಎ. ಪಿ. ಯವರ ಮಾರ್ಗದರ್ಶನದಲ್ಲಿ ಮೂರು ದಿನಗಳ ಕಾಲ ನಡೆದ ‘ಕಾನೂನು ಅಧ್ಯಾಪಕರ ಪುನಶ್ಚೇತನ ಕಾರ್ಯಕ್ರಮ’ದಲ್ಲಿ ಒಟ್ಟು 10 ವಿಶೇಷ ವಿಚಾರಗೋಷ್ಠಿಗಳನ್ನು ವಿಷಯ ಪರಿಣಿತರು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here