ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆ ; ಅಕ್ರಮ ಗೋ ಸಾಗಾಟ ತಡೆಗೆ ಪೊಲೀಸ್ ಇಲಾಖೆಗೆ ಮನವಿಗೆ ನಿರ್ಣಯ

0

ನೆಲ್ಯಾಡಿ: ಕಾಂಚನ-ಪಂರ್ದಾಜೆ ರಸ್ತೆಯಲ್ಲಿ ರಾತ್ರಿ ವೇಳೆ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ತಡೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲು ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ.ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಚನ-ಪಂರ್ದಾಜೆ ರಸ್ತೆಯಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಗೋ ಸಾಗಾಟ ನಡೆಯುತ್ತಿರುವ ಬಗ್ಗೆ ಬಂದಿರುವ ದೂರಿನ ಕುರಿತಂತೆ ಚರ್ಚೆ ನಡೆಸಲಾಯಿತು. ಗೋ ಸಾಗಾಟ ತಡೆಯುವ ನಿಟ್ಟಿನಲ್ಲಿ ರಾತ್ರಿ ವೇಳೆ ಗಸ್ತು ತಿರುಗುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಮಸೀದಿ ನಿರ್ಮಾಣಕ್ಕೆ ಸಾರ್ವಜನಿಕರಿಂದ ಆಕ್ಷೇಪ-ಚರ್ಚೆ:

ಬಜತ್ತೂರು ಗ್ರಾಮದ ಎಂಜಿರಡ್ಕದಲ್ಲಿ ಮಸೀದಿ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈ ಪರಿಸರದಲ್ಲಿ ಹಿಂದೂ ಧರ್ಮೀಯರ ಮನೆಗಳೇ ಹೆಚ್ಚಾಗಿದ್ದು ಮಸೀದಿ ನಿರ್ಮಾಣಗೊಂಡಲ್ಲಿ ಮುಂದೆ ಶಾಂತಿ ಕದಡುವ ಸಂಭವವೂ ಇದೆ. ಆದ್ದರಿಂದ ಸದ್ರಿ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡದಂತೆ ಸಾರ್ವಜನಿಕರಿಂದ ಗ್ರಾಮ ಪಂಚಾಯತ್‌ಗೆ ಬಂದ ಅರ್ಜಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಕುರಿತು ಮುಂದಿನ ಕ್ರಮದ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಬರೆಯಲು ನಿರ್ಣಯಿಸಲಾಯಿತು.

ತೆರಿಗೆ ಪರಿಷ್ಕರಣೆ:

2022-23ನೇ ಸಾಲಿಗೆ ತೆರಿಗೆ ಪರಿಷ್ಕರಣೆ ಮಾಡಿ ನಿಗದಿತ ಅವಧಿಯೊಳಗೆ ವೈಯಕ್ತಿಕ ಆಕ್ಷೇಪಣೆಗಳಿದಲ್ಲಿ ಸಲ್ಲಿಸುವಂತೆ ಪ್ರಕಟಣೆ ನೀಡಲಾಗಿತ್ತು. ಆದರೆ ಯಾವುದೇ ಆಕ್ಷೇಪಣೆ ಬಾರದೇ ಇರುವ ಹಿನ್ನೆಲೆಯಲ್ಲಿ ಪರಿಷ್ಕೃತ ತೆರಿಗೆಯನ್ನು ಖಾಯಂ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಗ್ರಾಮ ಪಂಚಾಯತ್‌ಗೆ ಬಂದ ಸಾರ್ವಜನಿಕ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಸದಸ್ಯರುಗಳಾದ ಗಂಗಾಧರ ಕೆ.ಎಸ್., ಸಂತೋಷ್‌ಕುಮಾರ್ ಪಿ., ಮಾಧವ ಪೂಜಾರಿ, ಉಮೇಶ್ ಓಡ್ರಪಾಲು, ಮೋನಪ್ಪ ಗೌಡ, ಅರ್ಪಿತ ರೈ, ಪ್ರೆಸಿಲ್ಲಾ ಡಿ.ಸೋಜ, ಯಶೋಧಾ, ಭಾಗೀರಥಿ, ರತ್ನ, ವಿಮಲ ಉಪಸ್ಥಿತರಿದ್ದು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ಕುಮಾರ್‌ರವರು ಸರಕಾರದ ಸುತ್ತೋಲೆಗಳ ಮಾಹಿತಿ ನೀಡಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here