ಪೆರಿಯಡ್ಕ: ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳಿಗೆ ಕೊನೆಗೂ ಮುಕ್ತಿ ; ಪತ್ರಿಕಾ ವರದಿ ಬಳಿಕ ಎಚ್ಚೆತ್ತ ಇಲಾಖೆ

0

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು – ಮರ್ಧಾಳ ರಾಜ್ಯ ಹೆದ್ದಾರಿಯ ಪೆರಿಯಡ್ಕದಲ್ಲಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ, ಅಪಘಾತಕ್ಕೆ ಕಾರಣವಾಗುತ್ತಿದ್ದ ಹೊಂಡ- ಗುಂಡಿಗಳನ್ನು ಪಿಡಬ್ಲ್ಯೂಡಿ ಇಲಾಖೆಯು ಸಿಮೆಂಟ್ ಕಾಂಕ್ರೀಟ್‌ನಿಂದ ಮುಚ್ಚಿ ಅದರ ಮೇಲೆ ಡಾಮರು ಕಾಮಗಾರಿ ಮಾಡುವ ಮೂಲಕ ಹಲವು ಸಮಯಗಳ ಸಮಸ್ಯೆಗೆ ಕೊನೆಗೂ ಪರಿಹಾರ ಕಲ್ಪಿಸಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರ ವರದಿ ಪ್ರಕಟಿಸಿ ಇಲಾಖೆಯ ಕಣ್ತೆರೆಸಿದ ‘ಸುದ್ದಿ ಬಿಡುಗಡೆ ಪತ್ರಿಕೆ’ಯು ಇದೀಗ ಸಾರ್ವಜನಿಕರ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಪ್ರಮುಖ ತೀರ್ಥ ಕ್ಷೇತ್ರವಾಗಿರುವ ಸುಬ್ರಹ್ಮಣ್ಯಕ್ಕೆ ಉಪ್ಪಿನಂಗಡಿಯಿಂದ ಸಂಪರ್ಕ ಕಲ್ಪಿಸುವ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಯ ಪೆರಿಯಡ್ಕ ಎಂಬಲ್ಲಿ ಹೆದ್ದಾರಿಯಲ್ಲೇ ಬೃಹತ್ ಖೆಡ್ಡಾಗಳು ನಿರ್ಮಾಣವಾಗಿದ್ದವು. ಮಳೆಗಾಲದಲ್ಲಿ ರಸ್ತೆಯಲ್ಲಿರುವ ಈ ಗುಂಡಿಗಳಲ್ಲಿ ನೀರು ತುಂಬಿಕೊಂಡು ಇದರ ಆಳ, ಅಗಲ ಗೊತ್ತಾಗುತ್ತಿರಲಿಲ್ಲ. ಆದ್ದರಿಂದ ರಸ್ತೆಯಲ್ಲಿ ತನ್ನ ಪಥದಲ್ಲಿ ಬರುವ ದ್ವಿಚಕ್ರ ಸವಾರರು ಈ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳುವ ಸ್ಥಿತಿ ಒಂದೆಡೆಯಾದರೆ, ಇನ್ನು ಕೆಲವು ವಾಹನ ಸವಾರರು ರಸ್ತೆಯಲ್ಲಿರುವ ಈ ಗುಂಡಿಗಳನ್ನು ನೋಡಿ ತಮ್ಮ ಪಥವನ್ನು ತಕ್ಷಣ ಬದಲಾಯಿಸಿ ರಸ್ತೆಯ ಇನ್ನೊಂದು ಪಥದತ್ತ ತಮ್ಮ ವಾಹನವನ್ನು ತೆಗೆದುಕೊಳ್ಳಲು ಮುಂದಾಗುತ್ತಿರುವಾಗ ಎದುರಿನಿಂದ ಬರುತ್ತಿದ್ದ ವಾಹನಗಳಿಗೆ ಢಿಕ್ಕಿಯಾಗಿ ಸಂಭವಿಸುವ ಅಪಘಾತಗಳು ಇನ್ನೊಂದೆಡೆ. ಇಲ್ಲಿ ದಿನಕ್ಕೆ ನಾಲ್ಕೈದು ದ್ವಿಚಕ್ರ ವಾಹನಗಳಾದರೂ ಮಗುಚಿ ಬಿದ್ದು, ಅಪಾಯಗಳು ಎದುರಾಗುವುದು ಮಾಮೂಲಿಯಾಗಿತ್ತು. ಈ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯು ಇಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರ ವರದಿ ಪ್ರಕಟಿಸಿ ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಿತ್ತು.

ವರದಿ ಪ್ರಕಟವಾದ ಮರುದಿನವೇ ಪಿಡಬ್ಲ್ಯೂಡಿ ಇಲಾಖೆಯ ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದು, ಅಂದೇ ಜೆಸಿಬಿ ಮೂಲಕ ರಸ್ತೆ ಬದಿ ಚರಂಡಿಯನ್ನು ತೆಗೆಸಿ ನೀರು ಚರಂಡಿಯಲ್ಲಿ ಹರಿಯುವಂತೆ ಮಾಡಿದ್ದರಲ್ಲದೆ, ಹೊಂಡ- ಗುಂಡಿಗಳಿಗೆ ಕಾಂಕ್ರೀಟ್ ಮಿಶ್ರಣ ಹಾಕಿಸಿದ್ದರು. ಮತ್ತೆ ಜೂ.27ರಂದು ಅದರ ಮೇಲೆ ಡಾಮರೀಕರಣ ಮಾಡುವ ಮೂಲಕ ಶಾಶ್ವತವಾಗಿ ಗುಂಡಿಯನ್ನು ಮುಚ್ಚುವಲ್ಲಿ ಕ್ರಮ ಕೈಗೊಂಡಿದ್ದಾರೆ. ಸುದ್ದಿ ಬಿಡುಗಡೆಯ ವರದಿಗೆ ಹಾಗೂ ಇಲಾಖಾಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ನೇರ ಸಂಪರ್ಕ ಇರುವಂತಹ ರಾಜ್ಯ ಹೆದ್ದಾರಿ ಇದು. ದಿನ ನಿತ್ಯ ನೂರಾರು ಪ್ರವಾಸಿಗರ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿರುತ್ತವೆ. ಇದೇ ರಸ್ತೆಯಲ್ಲಿ ಪೆರಿಯಡ್ಕದಲ್ಲಿ ಹೊಂಡ- ಗುಂಡಿಗಳು ಉಂಟಾಗಿತ್ತು. ಮಳೆಗಾಲದಲ್ಲಿ ಇದರಲ್ಲಿ ನೀರು ತುಂಬಿ ಹಳ್ಳದಂತಾಗಿತ್ತು. ಇಲ್ಲಿನ ಗುಂಡಿಗಳ ಅರಿವಿಲ್ಲದೆ ಅದೆಷ್ಟೋ ವಾಹನಗಳು ಇದರೊಳಗೆ ಬಿದ್ದು, ವಾಹನಗಳಿಗೆ ಹಾನಿಯಾಗಿವೆ. ಹಲವು ದ್ವಿಚಕ್ರ ವಾಹನಗಳು ಬಿದ್ದು, ಸವಾರರು ಗಾಯ ಮಾಡಿಕೊಳ್ಳುತ್ತಿರುವುದು ಇಲ್ಲಿ ಮಾಮೂಲಿಯಾಗಿತ್ತು. ಸ್ಥಳೀಯರಾದ ನಾವು ಅಲ್ಲಿ ಇರುತ್ತಿದ್ದಾಗ ಅಪಘಾತಕ್ಕೊಳಗಾದ ಹಲವು ಮಂದಿ ದ್ವಿಚಕ್ರ ಸವಾರರನ್ನು ಉಪಚರಿಸಿ ಕಳುಹಿಸಿದ್ದೇವೆ. ವಾಹನ ಸವಾರರಿಗೆ ಇಷ್ಟೆಲ್ಲಾ ಇಲ್ಲಿ ತೊಂದರೆಯಾಗುತ್ತಿದ್ದರೂ, ಹಲವು ಬಾರಿ ಸಂಬಂಧಿಸಿದವರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದ್ದರೂ, ಇಲ್ಲಿನ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಈ ಬಗ್ಗೆ ಜೂ.25ರಂದು ‘ಸುದ್ದಿ ಬಿಡುಗಡೆ’ ಪತ್ರಿಕೆಯು ಇಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರ ವರದಿ ಪ್ರಕಟಿಸಿ, ಇಲಾಖೆಗಳನ್ನು ಎಚ್ಚರಿಸುವ ಕಾರ್ಯ ಮಾಡಿದೆ. ವರದಿ ಪ್ರಕಟವಾದ ದಿನವೇ ಪಿಡಬ್ಲ್ಯೂಡಿ ಇಲಾಖೆಯು ಸ್ಪಂದನೆ ನೀಡಿದ್ದು, ಈಗ ಹೊಂಡ- ಗುಂಡಿಗಳನ್ನು ಮುಚ್ಚಿ ಡಾಮರು ಕಾಮಗಾರಿ, ಚರಂಡಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಜನರ ಸಮಸ್ಯೆಗೆ ಧ್ವನಿಯಾದ ‘ಸುದ್ದಿ ಬಿಡುಗಡೆ’ ಪತ್ರಿಕೆಗೆ ಹಾಗೂ ಸ್ಪಂದಿಸಿದ ಅಧಿಕಾರಿಗಳಿಗೆ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ.

– ಚಿದಾನಂದ ಪಂಚೇರು, ಸ್ಥಳೀಯರು

ಇಲ್ಲಿ ರಸ್ತೆಯಲ್ಲಿ ಹೊಂಡ- ಗುಂಡಿಗಳಿಂದಾಗಿ ವಾಹನ ಸವಾರರಿಗೆ ಸಮಸ್ಯೆ ಎದುರಾಗುತ್ತಿದ್ದದ್ದು ಒಂದೆರಡಲ್ಲ. ಈ ಮೊದಲೊಮ್ಮೆ ಪಿಡಬ್ಲ್ಯೂಡಿ ಇಲಾಖೆಯು ಕಾಟಾಚಾರಕ್ಕೆಂಬಂತೆ ಇಲ್ಲಿನ ಹೊಂಡ- ಗುಂಡಿಗಳಿಗೆ ಜಲ್ಲಿ ಮತ್ತು ಸಿಮೆಂಟ್ ಮಿಶ್ರಣ ಮಾಡಿ ಹೋಗಿತ್ತು. ವಾರದೊಳಗೆ ಅದು ಎದ್ದು ಹೋಗಿತ್ತಲ್ಲದೇ, ಗುಂಡಿಗಳ ಆಳ- ಅಗಲಗಳೂ ದೊಡ್ಡದಾದವು. ಮಳೆ ಆರಂಭವಾದ ಬಳಿಕವಂತೂ ಇದರಲ್ಲಿ ನೀರು ತುಂಬಿಕೊಳ್ಳುತ್ತಿದ್ದರಿಂದ ದಿನಕ್ಕೆ ನಾಲ್ಕೈದು ದ್ವಿಚಕ್ರ ವಾಹನಗಳು ಇಲ್ಲಿ ಸ್ಕಿಡ್ ಆಗುತ್ತಿದ್ದವು. ಹಲವು ಸಣ್ಣ ವಾಹನಗಳು ಗುಂಡಿಗೆ ಬಿದ್ದು ಹಾನಿಗೊಳಗಾಗುತ್ತಿದ್ದವು. ಆದರೂ ಸಂಬಂಧಿಸಿದವರು ಜಾಣ ಕುರುಡುತನ ಪ್ರದರ್ಶಿಸಿದ್ದರೆ ಹೊರತು ಪರಿಹಾರಕ್ಕೆ ಮುಂದಾಗಿರಲಿಲ್ಲ. ‘ಸುದ್ದಿ ಬಿಡುಗಡೆ’ ಪತ್ರಿಕೆಯು ಇಲ್ಲಿನ ಸಮಸ್ಯೆಗಳ ಬಗ್ಗೆ ಸಚಿತ್ರ ವರದಿ ಮಾಡಿ ಇಲಾಖೆಯ ಕಣ್ತೆರೆಸುವ ಕೆಲಸ ಮಾಡಿತ್ತು. ಆದ್ದರಿಂದ ಈಗ ಇಲ್ಲಿ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಅದಕ್ಕಾಗಿ ‘ಸುದ್ದಿ ಬಿಡುಗಡೆ’ ಪತ್ರಿಕೆ ಹಾಗೂ ಅಧಿಕಾರಿಗಳಿಗೆ ಅಭಿನಂದನೆಗಳು.

– ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಸ್ಥಳೀಯರು

LEAVE A REPLY

Please enter your comment!
Please enter your name here