ಜೂ.29: ಬೆಟ್ಟಂಪಾಡಿಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್

0

ಬೆಟ್ಟಂಪಾಡಿ: ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್ ರವರು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಸ್ತೃತ ಕಟ್ಟಡವನ್ನು ಜೂ. 29 ರಂದು ಉದ್ಘಾಟಿಸಲಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಡಾ. ಅಶ್ವಥ್ ನಾರಾಯಣ್ ರವರು ಜೂ. 29 ರಂದು ಅಪರಾಹ್ನ ಬೆಟ್ಟಂಪಾಡಿ ಗೆ ಭೇಟಿ ನೀಡಿ ಕಾಲೇಜಿನ ನೂತನ ವಿಸ್ತೃತ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಇವರೊಂದಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಸಂಜೀವ ಮಠಂದೂರು ಉಪಸ್ಥಿತರಿರಲಿದ್ದಾರೆ.


ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ಶಿಕ್ಷಣ ಇಲಾಖೆಯಿಂದ ಕರ್ನಾಟಕ ಗೃಹ ಮಂಡಳಿ ಮೂಲಕ ನಿರ್ಮಾಣಗೊಂಡಿರುವ ವಿಸ್ತೃತ ಕಟ್ಟಡಕ್ಕೆ 2 ವರ್ಷಗಳ ಹಿಂದೆ ಶಿಲಾನ್ಯಾಸ ನಡೆದಿತ್ತು. 390 ಚ.ಮೀ. ವಿಸ್ತೀರ್ಣದಲ್ಲಿ 4 ತರಗತಿ ಕೋಣೆಗಳು ಮತ್ತು 1 ಮಹಿಳಾ ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಈ ಕಟ್ಟಡ ಒಳಗೊಂಡಿದೆ. ಭವಿಷ್ಯದಲ್ಲಿ ಬೆಟ್ಟಂಪಾಡಿ ಕಾಲೇಜಿಗೆ ಸ್ನಾತಕೋತ್ತರ ವಿಭಾಗ ಮಂಜೂರಾತಿಗೊಂಡಲ್ಲಿ ಈ ಕಟ್ಟಡ ಸಮರ್ಪಕವಾಗಿ ಬಳಕೆಯಾಗಲಿದೆ.

30 ವರ್ಷಗಳ ಕಾಲೇಜಿಗೆ ನೂತನ ಕಟ್ಟಡ ಸೇರ್ಪಡೆ
ಬೆಟ್ಟಂಪಾಡಿಯಂತಹ ಹಳ್ಳಿ ಪ್ರದೇಶದಲ್ಲಿ 30 ವರ್ಷಗಳ ಹಿಂದೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಗೊಂಡಿತ್ತು. ಆರಂಭದಲ್ಲಿ ಕೇವಲ ಬಿ.ಎ. ಶಿಕ್ಷಣ ಮಾತ್ರ ನಡೆಯುತ್ತಿದ್ದ‌ ಕಾಲೇಜಿನಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲಾ ವಿಭಾಗಗಳ ಪದವಿ ಶಿಕ್ಷಣ ನೀಡಲಾಗುತ್ತಿದೆ. ಯುಜಿಸಿ ನ್ಯಾಕ್ (NAAC) ನಿಂದ ‘ಬಿ’ ಗ್ರೇಡ್ ಪಡೆದಿರುವ ಈ ಕಾಲೇಜಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳು, ಶಿಕ್ಷಣದ ಗುಣಮಟ್ಟ,‌ ಸಾಮಾಜಿಕ ಕಳಕಳಿಯ ಪಠ್ಯೇತರ ಚಟುವಟಿಕೆಗಳು ಹೀಗೆ ಮಕ್ಕಳ ಬೌದ್ದಿಕ ವಿಕಸನಕ್ಕೆ ಬೇಕಾದ ಸೈದ್ದಾಂತಿಕ ಮತ್ತು ಪ್ರಾಯೋಗಿಕ ಕಲಿಕಾ ಚಟುವಟಿಕೆಗಳು ನಿರಂತರ ನಡೆಯುತ್ತಿದ್ದು, ರಾಜ್ಯದಲ್ಲಿಯೇ ಸರಕಾರಿ ಕಾಲೇಜುಗಳ ಪೈಕಿ ಗುರುತಿಸಲ್ಪಟ್ಟ ಕಾಲೇಜು ಇದಾಗಿದೆ. 30 ವರ್ಷಗಳ ಸುದೀರ್ಘ ಕಾಲದ ಶಿಕ್ಷಣ ಕೇಂದ್ರಕ್ಕೆ ಹೊಸದಾದ ಕಟ್ಟಡವೊಂದು ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟದ ಶಿಕ್ಷಣ ವ್ಯವಸ್ಥೆಯ ಕ್ಯಾಂಪಸ್ ಆಗಿ ಮೂಡಿಬರುವ ಎಲ್ಲಾ ಲಕ್ಷಣಗಳು ಈ ಕಾಲೇಜಿನಲ್ಲಿವೆ.

LEAVE A REPLY

Please enter your comment!
Please enter your name here