`ಎಸ್ಪಿ ಕಚೇರಿ ಪುತ್ತೂರಿಗೆ ವರ್ಗಾವಣೆಗೆ ಸರಕಾರದಿಂದ ಅಗತ್ಯ ಕ್ರಮ’-ಪುತ್ತೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

0

ಪುತ್ತೂರು:ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಕಾರ್ಯವ್ಯಾಪ್ತಿ ಪ್ರದೇಶದ ಪುತ್ತೂರಿಗೆ ಸ್ಥಳಾಂತರಿಸಬೇಕು ಎನ್ನುವ ಬೇಡಿಕೆಗೆ ಸರಕಾರ ಸ್ಪಂದನೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

 

ಜೂ.27ರಂದು ಪುತ್ತೂರಿಗೆ ಭೇಟಿ ನೀಡಿದ ಅವರು ಪತ್ರಕರ್ತರ ಜತೆ ಮಾತನಾಡಿದರು.ಎಸ್ಪಿ ಕಚೇರಿ ಸ್ಥಳಾಂತರದ ವಿಚಾರದಲ್ಲಿ ಸರಕಾರ ಧನಾತ್ಮಕ ನಿಲುವು ಹೊಂದಿದೆ.ಸ್ಥಳೀಯ ಶಾಸಕರು ಸೇರಿದಂತೆ ಉಪವಿಭಾಗದ ಶಾಸಕರು ಈ ನಿಟ್ಟಿನಲ್ಲಿ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ.ಮಂಗಳೂರು ಈಗ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವ್ಯಾಪ್ತಿ ಇರುವ ಪುತ್ತೂರಿನಲ್ಲಿ ಎಸ್‌ಪಿ ಕಚೇರಿ ಸ್ಥಾಪನೆಯಾಗಬೇಕು ಎಂಬ ಆಗ್ರಹವಿರುವುದು ನಮ್ಮ ಗಮನದಲ್ಲಿ ಇದೆ.ಇದಕ್ಕೆ ಅಗತ್ಯ ಇರುವ ಜಾಗದ ವ್ಯವಸ್ಥೆಯನ್ನು ಒದಗಿಸಿಕೊಡುವ ಕುರಿತು ಶಾಸಕ ಸಂಜೀವ ಮಠಂದೂರು ಅವರು ಭರವಸೆ ನೀಡಿದ್ದಾರೆ.ಎಸ್‌ಪಿ ಕಚೇರಿ ಜತೆಗೆ ಜಿಲ್ಲಾ ಸಶಸ್ತ್ರ ಮೀಸಲು ದಳ (ಡಿಆರ್) ಕೂಡ ಸ್ಥಳಾಂತರ ಆಗಬೇಕಾಗಿರುವ ಕಾರಣ ಆ ಬಗ್ಗೆ ಪರಿಶೀಲನೆ ನಡೆಯುತ್ತಿದೆ.ಡಿಆರ್ ವರ್ಗಾವಣೆ ಅಂತಿಮಗೊಂಡ ತಕ್ಷಣ ಉಳಿದ ಪ್ರಕ್ರಿಯೆ ಸಾಧ್ಯವಾಗಲಿದೆ. ಎಸ್‌ಪಿ ಕಚೇರಿ ಸ್ಥಳಾಂತರ ವಿಚಾರದಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವರು ಹೇಳಿದರು. ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆರಂಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಆಶ್ಲೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅವರು ಗೌರವ ವಂದನೆ ಸ್ವೀಕರಿಸಿದ್ದರು.ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುವ ಹಾದಿಯಲ್ಲಿ ಪುತ್ತೂರಿಗೆ ಭೇಟಿ ನೀಡಿದ್ದರು.

ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ಮಾಡಿದ ಗೃಹ ಸಚಿವ
ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ಆಶ್ಲೇಷ ಬಲಿ ಸೇವೆ ಸಲ್ಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಲ್ಲಿಂದ ಪುತ್ತೂರಿಗೆ ಆಗಮಿಸಿ ನೆಹರೂನಗರ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಮಾತೃ ಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಕಚೇರಿಗೆ ಭೇಟಿ ನೀಡಿದರು.ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಸಚಿವರನ್ನು ಬರಮಾಡಿಕೊಂಡರು.ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಉಪಸ್ಥಿತರಿದ್ದರು. ಡಾ.ಪ್ರಭಾಕರ ಭಟ್ ಅವರು ನಮಗೆ ಮಾರ್ಗದರ್ಶಕರಾಗಿರುವವರು.ಅವರು ಅನಾರೋಗ್ಯಕ್ಕೆ ಈಡಾಗಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಆಗಿರಲಿಲ್ಲ.ಹಾಗಾಗಿ ಈ ದಿನ ಬಂದಿದ್ದೇನೆ ಎಂದು ಈ ಸಂದರ್ಭದಲ್ಲಿ ಗೃಹ ಸಚಿವರು ಹೇಳಿದರು.ಡಾ.ಕಲ್ಲಡ್ಕ ಪ್ರಭಾಕರ ಭಟ್ ಜತೆ ಮಾತುಕತೆ ನಡೆಸಿದ ಬಳಿಕ ಸಚಿವರು ಮಂಗಳೂರಿಗೆ ತೆರಳಿದರು.

LEAVE A REPLY

Please enter your comment!
Please enter your name here