ಆಮ್ ಆದ್ಮಿ ಪಾರ್ಟಿಯಿಂದ ಜಿಲ್ಲಾಧಿಕಾರಿಗೆ ಮನವಿ

0

ರಾಮಕುಂಜ: ಆಲಂಕಾರು ಗ್ರಾಮದ ವಿವಿಧ ಸಮಸ್ಯೆಗಳ ಬಗ್ಗೆ ಹಾಗೂ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ವೈದ್ಯರ ನೇಮಕ ಮಾಡುವಂತೆ ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಆಲಂಕಾರಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರಿಗೆ ಮನವಿ ಮಾಡಲಾಗಿದೆ.

ಆಲಂಕಾರು ಗ್ರಾಮದ ಸ.ನಂ.231/1ರಲ್ಲಿ 3 ಎಕ್ರೆ ಜಾಗ ಕೆಪಿಟಿಸಿಎಲ್‌ಗೆ 110 ಕೆ.ವಿ.ಉಪಕೇಂದ್ರಕ್ಕಾಗಿ 2017ರಲ್ಲಿ ಮಂಜೂರಾಗಿದೆ. ಆದರೆ ಇಲ್ಲಿ 110 ಕೆ.ವಿ. ವಿದ್ಯುತ್ ಶೇಖರಣ ಘಟಕ ಮತ್ತು ವಿದ್ಯುತ್ ಪ್ರಸರಣ ಘಟಕಕ್ಕೆ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಆಲಂಕಾರು ಗ್ರಾಮದಲ್ಲಿ ವಸತಿ ರಹಿತರಿಗೆ ಮನೆ ನಿವೇಶನಕ್ಕೆ 2 ಎಕ್ರೆ ಜಮೀನು ಮಂಜೂರಾಗಿರುತ್ತದೆ. ಆದರೆ ವಸತಿ ರಹಿತರಿಗೆ ಈವರೆಗೆ ವಸತಿಗೆ ಜಾಗ ಹಂಚಿರುವುದು ಕಂಡು ಬರುವುದಿಲ್ಲ. ಆಲಂಕಾರು ಗ್ರಾಮದಲ್ಲಿ ನಾಡ ಕಚೇರಿಗೆ ಸ.ನಂ.208/1 22 ಸೆಂಟ್ಸ್ ಜಾಗ ಮಂಜೂರಾಗಿರುತ್ತದೆ. ಇದರ ಕಾಮಗಾರಿ ಇನ್ನೂ ನಡೆದಿಲ್ಲ. ಆಲಂಕಾರು ಗ್ರಾಮದ ಸ.ನಂ.208/1ರಲ್ಲಿ 8 ಸೆಂಟ್ಸ್ ಜಾಗ ಮೆಸ್ಕಾಂಗೆ ಮಂಜೂರಾಗಿರುತ್ತದೆ. ಇನ್ನೂ ಮೆಸ್ಕಾಂ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಆಲಂಕಾರು ಗ್ರಾಮದ ಸ.ನಂ.209ರಲ್ಲಿ ಗ್ರಂಥಾಲಯಕ್ಕೂ ಜಾಗ ಮಂಜೂರಾಗಿದೆ. ಆದರೆ ಗ್ರಂಥಾಲಯ ಕಾಣುತ್ತಿಲ್ಲ. ಆಲಂಕಾರು ಗ್ರಾಮದ ಸ.ನಂ.231/1ರಲ್ಲಿ ಭೂ ಪರಿವರ್ತನ ಅಧಿಕಾರಿಗಳ ಸರಕಾರ ನಿವೇಶನಕ್ಕೆ ಜಾಗ ಮಂಜೂರಾಗಿದೆ. ನಿವೇಶನಗಳು ಕಾರ್ಯ ರೂಪದಲ್ಲಿ ಮರೆಯಾಗಿದೆ. ಆಲಂಕಾರು ಹೋಬಳಿ ಮಾಡಬೇಕೆಂದು ಈ ಹಿಂದೆ ಜಿಲ್ಲಾಧಿಕಾರಿಯವರಿಗೆ ಅರ್ಜಿ ಮೂಲಕ ಮನವಿ ಮಾಡಿದ್ದೇವೆ. ಇದೂವರೆಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಆಲಂಕಾರು ಗ್ರಾಮದ ಜನರಿಗೆ ಸದುಪಯೋಗವಾಗುವಂತೆ ಮತ್ತು ಕರ್ನಾಟಕ ರಾಜ್ಯಕ್ಕೆ ಆಲಂಕಾರು ಗ್ರಾಮ ಮಾದರಿಯಾಗುವಂತೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವೈದ್ಯರ ನೇಮಿಸಿ:

ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾತಿಯಾಗಿರುವ ಏಳು ಜನ ವೈದ್ಯರು ಇರಬೇಕಿತ್ತು. ಆದರೆ ಸದ್ಯ ಮಕ್ಕಳ ತಜ್ಞರು ಮತ್ತು ದಂತ ವೈದ್ಯರು ಮಾತ್ರ ಇದ್ದಾರೆ. ಉಳಿದಂತೆ ಐದು ಜನ ವೈದ್ಯರ ಕೊರತೆ ಇದೆ. ಬೆಳೆಯುತ್ತಿರುವ ಉಪ್ಪಿನಂಗಡಿಯಲ್ಲಿ ಆರೋಗ್ಯ ಕೇಂದ್ರ ಇದ್ದರೂ ಪರಿಣತಿ ಹೊಂದಿರುವ ಪ್ರಸೂತಿ ತಜ್ಞರು ಇರುವುದಿಲ್ಲ. ಎಕ್ಸ್‌ರೇ ಮೆಷಿನ್, ಟೆಕ್ನಿಷಿಯನ್ ಇರುವುದಿಲ್ಲ. ಒಟ್ಟಿನಲ್ಲಿ ಜನಸಾಮಾನ್ಯರಿಗೆ ಸಿಗಬೇಕಾದ ಹೆಚ್ಚಿನ ಮೂಲಭೂತ ಸೌಕರ್ಯಗಳೇ ಈ ಆರೋಗ್ಯ ಕೇಂದ್ರದಲ್ಲಿ ಇರುವುದಿಲ್ಲ. ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸುವಂತೆಯೂ ಆಮ್ ಆದ್ಮಿ ಪಾರ್ಟಿ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಆಮ್ ಆದ್ಮಿ ಪಾರ್ಟಿ ಮುಖಂಡರಾದ ಆನಂದ ರಾಮಕುಂಜ, ಜನಾರ್ದನ ಬಂಗೇರ ಶರವೂರು, ಜನಾರ್ದನ ಬಂಗೇರ ನೈಯಲ್ಗ, ಸುಂದರ ಪೂಜಾರಿ ಬೈಲಕರೆ, ಪುರುಷೋತ್ತಮ ಗೌಡ ಕೋಲ್ಪೆ, ನವೀನ್ ಕುಮಾರ್ ಕಲ್ಯಾಟೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here