ಭೂಗತ ಪಾತಕಿಗಳಿಂದ ಹತ್ಯೆಗೆ ಸಂಚು ಪ್ರಕರಣ:ಪೊಲೀಸ್ ಕಮೀಷನರ್ ಕಛೇರಿಗೆ ಹಾಜರಾದ ಗುಣರಂಜನ್ ಶೆಟ್ಟಿ

0

ಪುತ್ತೂರು: ಭೂಗತ ಪಾತಕಿಗಳು ಹತ್ಯೆಗೆ ಸಂಚು ರೂಪಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಜೂ.29ರಂದು ಮಂಗಳೂರು ಪೊಲೀಸ್ ಕಮೀಷನರ್ ಕಛೇರಿಗೆ ಹಾಜರಾಗಿದ್ದಾರೆ.

 

ಪ್ರತಿಷ್ಠಿತ ಬೆಳ್ಳಿಪ್ಪಾಡಿ ಮನೆತನದವರಾಗಿದ್ದು ಚಿಕ್ಕಮುಡ್ನೂರು ಗ್ರಾಮದ ಉರಮಾಲು ನಿವಾಸಿಯಾಗಿರುವ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಗುಣರಂಜನ್ ಶೆಟ್ಟಿಯವರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿರುವ ಘಟನೆಗೆ ಸಂಬಂಧಿಸಿ ಪೊಲೀಸ್‌ ಕಮೀಷನರ್ ಎನ್.ಶಶಿಕುಮಾರ್ ಮಾಹಿತಿ ಸಂಗ್ರಹಿಸಿದ್ದಾರೆ.

ಖ್ಯಾತ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿಯವರ ಸಹೋದರನೂ ಆಗಿರುವ ಯುವ ಉದ್ಯಮಿ ಗುಣರಂಜನ್ ಶೆಟ್ಟಿಯವರನ್ನು ಕೊಲೆ ಮಾಡಲು ಸಂಚು ರೂಪಿಸಿರುವ ಕುರಿತು ಬೆಂಗಳೂರು ಮತ್ತು ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದರು.

ಭೂಗತ ಲೋಕದ ಮಾಜಿ ಡಾನ್, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಕೆಯ್ಯೂರಿನ ಎನ್. ಮುತ್ತಪ್ಪ ರೈಯವರ ಆಪ್ತರೂ, ಮುತ್ತಪ್ಪ ರೈಯವರ ಜೀವಿತದ ಕೊನೆಯ ಕಾಲದವರೆಗೂ ಅವರೊಂದಿಗೆ ಇದ್ದ ಗುಣರಂಜನ್ ಶೆಟ್ಟಿಯವರನ್ನು ಮುಗಿಸಲೇ ಬೇಕು ಎಂದು ಪಣ ತೊಟ್ಟಿರುವ ಗ್ಯಾಂಗ್ ಸ್ಟರ್ ಗಳು ಗುಣರಂಜನ್ ಅವರ ಕೊಲೆಗೆ ಸಂಚು ರೂಪಿಸಿರುವ ಕುರಿತು ಪೊಲೀಸ್ ಅಧಿಕಾರಿಗಳು ಗುಣರಂಜನ್ ಶೆಟ್ಟಿಗೆ ಮಾಹಿತಿ ನೀಡಿದ್ದರು. ಬೆಂಗಳೂರಿನಲ್ಲಿ ಉದ್ಯಮಿಯಾಗಿ, ಸಮಾಜ ಸೇವಕನಾಗಿ, ಪರಿಸರವಾದಿಯಾಗಿ ಗುರುತಿಸಿಕೊಂಡಿರುವ ಗುಣರಂಜನ್ ಶೆಟ್ಟಿಯವರು ತನ್ನ ಹತ್ಯಾ ಸಂಚಿನ‌ ಕುರಿತು ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಮಧ್ಯೆ ಜಯಕರ್ನಾಟಕ ಜನಪರ ವೇದಿಕೆ ಮೂಲಕ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ‌ ಮನವಿ ಸಲ್ಲಿಸಲಾಗಿತ್ತಲ್ಲದೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಗುಣರಂಜನ್ ಶೆಟ್ಟಿಯವರಿಗೆ ಭದ್ರತೆ ಒದಗಿಸಬೇಕು ಎಂದು‌ ಒತ್ತಾಯಿಸಲಾಗಿತ್ತು. ಬೆಂಗಳೂರಿನಲ್ಲಿ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿದ್ದ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಂಗಳೂರು‌ ಪೊಲೀಸ್ ಕಮೀಷನರ್ ಅವರಿಗೆ ಮಾಹಿತಿ ರವಾನೆ ಮಾಡಿದ್ದರು. ಗುಣರಂಜನ್ ಶೆಟ್ಟಿ ಹತ್ಯಾ ಸಂಚಿನಲ್ಲಿ‌ ಮಂಗಳೂರು ಭಾಗದವರೂ ಇದ್ದಾರೆ ಎಂಬ‌ ಕಾರಣಕ್ಕಾಗಿ ಮಂಗಳೂರು ಪೊಲೀಸ್‌ ಕಮೀಷನರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.‌ ಈ ನಡುವೆ ವಿಚಾರಣೆಗೆ ಹಾಜರಾಗುವಂತೆ‌ ನೊಟೀಸ್ ಜಾರಿಯಾಗಿದ್ದರಿಂದ ಗುಣರಂಜನ್ ಶೆಟ್ಟಿ‌ ಪೊಲೀಸ್‌ ಕಮೀಷನರ್ ಕಛೇರಿಗೆ ಹಾಜರಾಗಿದ್ದಾರೆ.‌ ಹತ್ಯಾ ಸಂಚಿನ‌ ಕುರಿತು ಪೊಲೀಸರು ಮತ್ತು ಗುಣರಂಜನ್ ಶೆಟ್ಟಿ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here