ಕೆಯ್ಯೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ; ಬೂತ್‌ಮಟ್ಟದಲ್ಲಿ ಪಕ್ಷದ ಸಮಾವೇಶ ನಡೆಸಲು ತೀರ್ಮಾನ

0

ಪುತ್ತೂರು; ಕೆಯ್ಯೂರು ವಲಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ವಲಯ ಕಾಂಗ್ರೆಸ್ ಅಧ್ಯಕ್ಷ ಎ ಕೆ ಜಯರಾಮ ರೈ ಯವರ ಮನೆಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಎಲ್ಲಾ ವಲಯಗಳಲ್ಲಿಯೂ ಬೂತ್ ಮಟ್ಟದ ಸಮಾವೇಶವನ್ನು ನಡೆಸಿ ಪಕ್ಷಕ್ಕೆ ಕಾರ್ಯಕರ್ತರನ್ನು ಸೇರ್ಪಡೆ ಮಾಡುವುದು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸುವ ಕಾರ್ಯವನ್ನು ನಡೆಸಬೇಕು ಎಂದು ಹೇಳಿದರು.

ಕೆಯ್ಯೂರು ವಲಯದಲ್ಲಿ ಆಗಸ್ಟ್ ತಿಂಗಳಲ್ಲಿ ಬೂತ್ ಮಟ್ಟದ ಸಮಾವೇಶ ನಡೆಯಲಿದೆ. ಆ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ವಲಯಗಳಲ್ಲಿ ಬೂತ್ ಮಟ್ಟದ ಸಮಾವೇಶ ನಡೆಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರಕಾರದ ಬೆಲೆ ಏರಿಕೆ ನೀತಿಯಿಂದ ಗ್ರಾಮೀಣ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಜನಪರ ಆಡಳಿತ ಕಾಂಗ್ರೆಸ್‌ನಿಂದ ಮಾತ್ರ ನಡೆಸಲು ಸಾಧ್ಯ ಎಂಬುದನ್ನು ಜನತೆಗೆ ನಾವು ತಿಳಿಸಬೇಕಿದೆ. ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿರುವುದು ಬಡವನ ಹೊಟ್ಟೆಗೆ ಬಿಜೆಪಿ ಸರಕಾರ ತುಳಿಯುತ್ತಿದೆ. ನಿರುದ್ಯೋಗ ಸಮಸ್ಯೆ, ಕೋವಿಡ್ ಬಳಿಕ ಜನರಲ್ಲಿ ಆರ್ಥಿಕ ಚೈತನ್ಯ ತುಂಬುವ ಕೆಲಸವನ್ನು ಸರಕಾರ ಮಾಡುವ ಬದಲಿಗೆ ಬೆಲೆ ಏರಿಕೆ ಮಾಡಿ ಜನರನ್ನು ಇನ್ನಷ್ಟು ಬಡತನಕ್ಕೆ ತಳ್ಳಿದೆ. ಈ ಎಲ್ಲಾ ವಿಚಾರಗಳನ್ನು ನಾವು ಜನರಿಗೆ ತಿಳಿಸಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವತ್ತ ಕಾರ್ಯಕರ್ತರು ಪಣ ತೊಡಬೇಕು ಎಂದು ಅವರು ಹೇಳಿದರು. ವಲಯ ಅಧ್ಯಕ್ಷ ಎ ಕೆ ಜಯರಾಮ ರೈ ಮಾತನಾಡಿ ಕೆಯ್ಯೂರು ವಲಯದಲ್ಲಿ ಕಾಂಗ್ರೆಸ್ ಬಲಿಷ್ಟವಾಗಬೇಕಿದೆ. ಬಿಜೆಪಿ ಕೇವಲ ಪ್ರಚಾರದ ರಾಜಕೀಯ ಮಾಡುತ್ತಿದೆ. ಅಭಿವೃದ್ದಿ ಕೆಲಸಗಳು ಎಲ್ಲಿಯೂ ನಡೆಯುತ್ತಿಲ್ಲ. ರಸ್ತೆ ಕಾಮಗಾರಿಗಳು ಅರ್ಧದಲ್ಲೇ ಮೊಟಕುಗೊಳ್ಳುತ್ತಿದೆ. ಬಿಜೆಪಿಗೆ ಅಭಿವೃದ್ದಿ ಬೇಕಾಗಿಲ್ಲ ಎಂದು ಹೇಳಿದರು. ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ ಮಾತನಾಡಿ ಬಿಜೆಪಿಗೆ ಅಭಿವೃದ್ದಿ ಮಾಡದೇ ಇರುವ ಬಗ್ಗೆ ಚಿಂತೆಯಿಲ್ಲ, ಇವಿಎಂ ಮೆಷಿನ್ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡ ಬಿಜೆಪಿ ೪೦ % ಕಮಿಷನ್ ಪಡೆದು ಕಳಪೆ ಕಾಮಗಾರಿ ನಡೆಸುತ್ತಿದ್ದು ಚುನಾವಣೆ ಸಂದರ್ಭದಲ್ಲಿ ಇವಿಎಂ ಯಂತ್ರ ಬಳಸದೆ ಮತಪತ್ರವನ್ನು ಬಳಸುವಂತೆ ದೇಶಾದ್ಯಂತ ಆಂದೋಲನ ನಡೆಸಬೇಕು ಎಂದು ಹೇಳಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಅಮಲರಾಚಂದ್ರ ಸೇರಿದಂತೆ ವಲಯ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here