ಜನಮನ ಗೆದ್ದ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು; ದೇವಸ್ಥಾನದಲ್ಲಿ ದೇವರ ದರ್ಶನ, ಸೇವೆಯ ಜೊತೆಗೆ ಭಕ್ತರ ಆರೋಗ್ಯದ ಸುರಕ್ಷತೆಗಾಗಿ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ಆರೋಗ್ಯ ರಕ್ಷಾ ಸಮಿತಿ ಆಶ್ರಯದಲ್ಲಿ ಭಕ್ತರಿಗಾಗಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವೀಯಾಗಿ ಮುನ್ನಡೆಯುತ್ತಿದೆ. ಪ್ರತಿ ತಿಂಗಳು ನಡೆಯುವ ಶಿಬಿರದಲ್ಲಿ ಪ್ರತಿ ಬಾರಿಯೂ ಒಂದೊಂದು ವಿಶೇಷ ಚಿಕಿತ್ಸೆಗಳನ್ನು ಅಳವಡಿಸಿಕೊಂಡು ಜನರ ಆವಶ್ಯಕತೆಗಳಿಗೆ ಪೂರಕವಾದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಮುಖಾಂತರ ಶಿಬಿರವು ಜನರ ಮನಗೆದ್ದಿದೆ.

ಖಾಯಿಲೆ ಬಂದಾಗ ಮಾತ್ರವೇ ಪರೀಕ್ಷಿಸಿಕೊಳ್ಳುವುದಲ್ಲ. ಜನತೆ ಖಾಯಿಲೆ ಬಾರದಂತೆ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬ ಮೂಲ ಧ್ಯೇಯದೊಂದಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಪುತ್ತೂರಿನ ಪ್ರಸಿದ್ಧ ವೈದ್ಯರಾದ ಡಾ.ಸುರೇಶ್ ಪುತ್ತೂರಾಯವರ ಕಲ್ಪಣೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯೋಜನೆ ಮೂಡಿಬಂದಿದೆ. ಇದಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಂಪ್ಯ ನವಚೇತನಾ ಯುವಕ ಮಂಡಲ, ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯವರು ಸಾಥ್ ನೀಡಿದ್ದು ಕಳೆದ ನಾಲ್ಕು ತಿಂಗಳುಗಳಿಂದ ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ಶಿಬಿರವು ನಡೆಯುತ್ತಾ ಬರುತ್ತಿದೆ. ಶಿಬಿರದಲ್ಲಿ ಪ್ರತಿ ಬಾರಿಯೂ ಜನರಿಗೆ ಆರೋಗ್ಯ ತಪಾಸಣೆಗೆ ಆವಶ್ಯಕವಾದ ಕೆಲವೊಂದು ಪ್ರಮುಖ ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರ ಆವಶ್ಯಕತೆಗಳನ್ನು ಉಚಿತ ಆರೋಗ್ಯ ತಪಾಸಣಾ ಶಿಬಿರವು ಪೂರೈಸುತ್ತಿದೆ. ಹೀಗಾಗಿ ಪ್ರತಿ ಶಿಬಿರದಲ್ಲಿಯೂ ಭಾಗವಹಿಸುವವರ ಸಂಖ್ಯೆ ವೃದ್ಧಿಯಾಗುತ್ತಲೇ ಸಾಗುತ್ತಿದೆ.

ಈ ಬಾರಿಯ ಶಿಬಿರದಲ್ಲಿ ವಿಶೇಷವಾಗಿ ಕಲ್ಲಾರೆಯ ಪ್ರಸಾದ್ ದಂತ ಚಿಕಿತ್ಸಾಲಯದ ಡಾ. ಕೃಷ್ಣಪ್ರಸಾದ್ ನೇತೃತ್ವದಲ್ಲಿ ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯದ ದಂತ ವೈದ್ಯರ ತಂಡವು ದಂತ ವೈದ್ಯಕೀಯ ತಪಾಸಣೆಯಲ್ಲಿ ದಂತ ಸ್ವಚ್ಛತೆ, ದಂತ ಕುಳಿ ತುಂಬುವಿಕೆ (ಮಕ್ಕಳಿಗೆ ಮತ್ತು ವಯಸ್ಕರಿಗೆ), ಹಲ್ಲು ಕೀಳುವಿಕೆ ಮೊದಲಾದ ಚಿಕಿತ್ಸೆಗಳು, ಚರ್ಮರೋಗ ತಜ್ಞ ಬೊಳುವಾರು ಸ್ಕಿನ್ ಕ್ಲಿನಿಕ್‌ನ ಡಾ. ಸಚಿನ್ ಶೆಟ್ಟಿಯವರಿಂದ ಚರ್ಮರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಳು, ಮೂಳೆ ಸಾಂದ್ರತೆ ಪರೀಕ್ಷೆ, ದರ್ಬೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿಯ ಚೇತನ್ ಪ್ರಕಾಶ್ ನೇತೃತ್ವದಲ್ಲಿ ರಕ್ತಪರೀಕ್ಷೆ ಹಾಗೂ ಇಸಿಜಿ, ಅಧಿಕ ರಕ್ತದೊತ್ತಡ, ಡಯಾಬಿಟೀಸ್, ಇತರ ಸಾಮಾನ್ಯ ಪರೀಕ್ಷೆಗಳ ಜೊತೆಗೆ ಶಿಬಿರಾರ್ಥಿಗಳಿಗೆ ಸ್ಥಳದಲ್ಲಿಯೇ ಸಂಬಂಧಿಸಿದ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಜೊತೆಗೆ ವೈದ್ಯಕೀಯ ತಜ್ಞ ಡಾ ಸುರೇಶ್ ಪುತ್ತೂರಾಯ, ಆಯುರ್ವೇದ ತಜ್ಞರಾದ ಡಾ.ಸಾಯಿಪ್ರಕಾಶ್ ಹಾಗೂ ಡಾ.ದೀಕ್ಷಾ, ತಜ್ಷ ವೈದ್ಯರುಗಳಾಗಿ ಶಿಬಿರವನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ೮೫ ಮಂದಿ ರಕ್ತ ಪರೀಕ್ಷೆ, 125 ಮಂದಿ ದಂತ ಚಿಕಿತ್ಸೆ, 56 ಮಂದಿ ಚರ್ಮರೋಗ ಚಿಕಿತ್ಸೆ, 106 ಮಂದಿ ವೈದ್ಯಕೀಯ ಚಿಕಿತ್ಸೆ, 60ಮಂದಿ ಮೂಳೆ ಸಾಂದ್ರತೆ ಪರೀಕ್ಷೆ, 35 ಮಂದಿ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಂಡು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ಉಚಿತ ಆಯುಷ್ಮಾನ್ ನೋಂದಣಿ:

ಉಚಿತ ವೈದ್ಯಕೀಯ ಶಿಬಿರದಲ್ಲಿ ಈ ಬಾರಿ ವಿಶೇಷವಾಗಿ ಸಂಪ್ಯ ಸುದಾಂಶ್ ಸಾಮಾನ್ಯ ಸೇವಾ ಕೇಂದ್ರದ ಮುಖಾಂತರ ನಡೆದ ಆಯುಷ್ಮಾನ್ ಕಾರ್ಡ್ ನೋಂದಣಿಯಲ್ಲಿ 82 ಮಂದಿ ಆಯುಷ್ಮಾನ್ ಕಾರ್ಡ್ ನೋಂದಾಯಿಸಿಕೊಂಡರು.

ಶಿಬಿರಾರ್ಥಿಗಳಿಗೆ ಊಟ, ಉಪಾಹಾರ:

ಶಿಬಿರದಲ್ಲಿ ಬಾಗವಹಿಸುವವರಿಗೆ ಉಚಿತ ಚಿಕಿತ್ಸೆ, ಔಷಧಿಗಳ ಜೊತೆಗೆ ಶಿಬಿರಾರ್ಥಿಗಳಿಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಊಟ ಹಾಗೂ ಸಂಜೆ ಉಪಾಹಾರಗಳನ್ನು ನೀಡಲಾಯಿತು. ಈ ಬಾರಿಯ ಶಿಬಿರದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಕುಮಾರ್ ನಾಯರ್‌ರವರ ಪ್ರಾಯೋಜಕತ್ವದಲ್ಲಿ ಊಟ, ಉಪಾಹಾರಗಳು ಹಾಗೂ ಪ್ರಕಾಶ್ ನಾಯಕ್ ಬೆಂಗಳೂರುರವರು ಅನ್ನದಾನ ಸೇವೆ ನೀಡಿದ್ದರು. ಸುಮಾರು 500 ಮಂದಿಗೆ ಊಟ, ಉಪಾಹಾರವನ್ನು ಒದಗಿಸಲಾಗಿತ್ತು.

ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಶಿಬಿರ ಆಯೋಜನೆ ಮಾಡಿರುವುದನ್ನು ಶ್ಲಾಘಿಸಿದರು. ದಂತ ವೈದ್ಯ ಡಾ.ಕೃಷ್ಣಪ್ರಸಾದ್, ಚರ್ಮರೋಗ ತಜ್ಞ ಡಾ. ಸಚಿನ್ ಶೆಟ್ಟಿ ಮಾತನಾಡಿ ಶುಭಹಾರೈಸಿದರು. ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್., ಮುಕ್ರಂಪಾಡಿ ಶ್ರೀ ಸತ್ಯನಾಯಣ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ ಇಳಂತಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರೋಗ್ಯ ರಕ್ಷಾ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ ಸ್ವಾಗತಿಸಿದರು. ಗೌರವ ಸಲಹೆಗಾರ ಅರುಣ್ ಕುಮಾರ್ ಪುತ್ತಿಲ ವಂದಿಸಿದರು. ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.

ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ನರಸಿಂಹ ಪೈಯವರು ರೂ.60ಸಾವಿರ ಮೌಲ್ಯದ ಇಸಿಜಿ ಯಂತ್ರವನ್ನು ಕೊಡುಗೆ ನೀಡಿರುತ್ತಾರೆ. ಹಲವು ಔಷಧಿ ಕಂಪನಿಗಳು ಉಚಿತವಾಗಿ ಔಷಧಿಗಳನ್ನು ನೀಡಿರುತ್ತಾರೆ. ಬಹುಜನರ ಅಪೇಕ್ಷೆಯಂತೆ ಮಂದಿನ ದಿನಗಳಲ್ಲಿ ಶಿಬಿರದಲ್ಲಿ ವಿಶೇಷ ವೈದ್ಯರನ್ನು ಆಹ್ವಾನಿಸಲಾಗುವುದು. ಆರೋಗ್ಯ ನಿಧಿಗೆ ನಿರೀಕ್ಷೆಗೂ ಮೀರಿದ ಧನ ಸಂಗ್ರಹವಾಗಿದ್ದು ಅದನ್ನು ಆರೋಗ್ಯ ಶಿಬಿರಕ್ಕೆ ಮಾತ್ರ ಬಳಸಿಕೊಳ್ಳಲಾಗುವುದು. ಪ್ರತಿಯೊಬ್ಬರ ಸಹಕಾರದಿಂದ ಶಿಬಿರದ ಯಶಸ್ವಿಯಾಗಿ ಸಾಗುತ್ತಿದೆ ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಂಪ್ಯ ನವಚೇತನ ಯುವಕ ಮಂಡಲ ಮತ್ತು ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಊರ ಭಕ್ತಾದಿಗಳು ಶಿಬಿರದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here