ಈಶ್ವರಮಂಗಲ-ಸುಳ್ಯಪದವು ರಸ್ತೆಯ ಮೀನಾವುನಲ್ಲಿ ಧರೆ ಕುಸಿದು ಅಪಾಯಕಾರಿ ಸ್ಥಿತಿಯಲ್ಲಿ ಮನೆ…!

0

  • ರಸ್ತೆಯೂ ಅಪಾಯದಂಚಿನಲ್ಲಿ-ಸಂಬಂಧಪಟ್ಟವರು ಗಮನಹರಿಸುವಂತೆ ಆಗ್ರಹ

@ಯೂಸುಫ್ ರೆಂಜಲಾಡಿ

 

ಪುತ್ತೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಈಶ್ವರಮಂಗಲ-ಸುಳ್ಯಪದವು ರಸ್ತೆಯ ಮೀನಾವು ಎಂಬಲ್ಲಿ ರಸ್ತೆ ಬದಿಯ ಧರೆ ಕುಸಿದು ಮನೆಯೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು ಮನೆ ಮಂದಿ ಆತಂಕದಲ್ಲಿದ್ದಾರೆ. ರಸ್ತೆಯಲ್ಲಿ ಘನ ವಾಹನಗಳು ಸಂಚರಿಸುವ ಸಂದರ್ಭ ಅಪಾಯದಂಚಿನಲ್ಲಿರುವ ಧರೆ ಕುಸಿದರೆ ರಸ್ತೆಯೂ ಕುಸಿತಕ್ಕೊಳಗಾಗುವ ಸಾಧ್ಯತೆಯಿದ್ದು ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಾಗಿದೆ ಎನ್ನುವ ಆಗ್ರಹ ಕೇಳಿ ಬಂದಿದೆ.


ಮೀನಾವು ನಿವಾಸಿ ಸಂಶುದ್ದೀನ್ ಎಂಬವರ ಮನೆಯ ಹಿಂಭಾಗದ ಎತ್ತರದ ಧರೆಯ ಸುಮಾರು ಭಾಗ ಕುಸಿತಗೊಂಡು ಮನೆಯ ಹಿಂಭಾಗದ ಗೋಡೆಯವರೆಗೆ ಬಂದು ನಿಂತಿದೆ. ಇದೇ ಧರೆ ಕಳೆದ ವರ್ಷ ಅಲ್ಪ ಕುಸಿತಕ್ಕೊಳಗಾದ ಸಂದರ್ಭ ಸಂಶುದ್ದೀನ್ ಅವರು ರೂ.5 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿದ್ದರು. ಇದೀಗ ಮತ್ತೆ ಧರೆ ಕುಸಿದು ಬಿದ್ದ ಪರಿಣಾಮ ಕಾಂಕ್ರೀಟ್ ತಡೆಗೋಡೆ ಕೂಡಾ ನೆಲ ಸಮವಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಧರೆ ಕುಸಿದು ಕಾಂಕ್ರೀಟ್ ತಡೆಗೋಡೆ ನೆಲಸಮಗೊಂಡ ಬಗ್ಗೆ ಸಂಶುದ್ದೀನ್ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಂಶುದ್ದೀನ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದು ಧರೆ ಕುಸಿತ ವಿಚಾರದ ಬಗ್ಗೆ ಗ್ರಾಮ ಕರಣಿಕರಿಗೆ ಮನವಿ ಸಲ್ಲಿಸಿದ್ದಾರೆ.

ರಸ್ತೆಯೂ ಅಪಾಯದಂಚಿನಲ್ಲಿ…!
ಸಂಶುದ್ದೀನ್ ಅವರ ಮನೆಯ ಹಿಂಭಾಗದಿಂದ ಎತ್ತರದಲ್ಲಿ ಹಾದು ಹೋಗುವ ಈಶ್ವರಮಂಗಲ-ಸುಳ್ಯಪದವು ರಸ್ತೆಯ ಕೆಳಭಾಗ ಕುಸಿತಕ್ಕೊಳಗಾಗಿರುವುದರಿಂದ ಇನ್ನಷ್ಟು ಕುಸಿತದ ಭೀತಿ ಎದುರಿಸುತ್ತಿದೆ. ಇದೇ ರಸ್ತೆಯಲ್ಲಿ ಬಸ್, ಲಾರಿ, ಶಾಲಾ ಬಸ್ ಸೇರಿದಂತೆ ವಿವಿಧ ಘನ ವಾಹನಗಳು ಸಂಚರಿಸುತ್ತಿದ್ದು ರಸ್ತೆಯ ಕೆಳ ಭಾಗ ಕುಸಿತಗೊಂಡಿರುವ ಕಾರಣ ರಸ್ತೆಯೇ ಕುಸಿತಗೊಳ್ಳುವ ಅಪಾಯಕಾರಿ ಸನ್ನಿವೇಶದ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟವರು ಗಮನಹರಿಸಬೇಕಿದೆ:
ರಸ್ತೆ ಬದಿಯ ಧರೆಯ ಕೆಳಭಾಗ ಕುಸಿತಗೊಂಡ ಕಾರಣ ಅತ್ತ ಮನೆಯೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದರೆ ಇತ್ತ ರಸ್ತೆಯೂ ಕುಸಿತದ ಭೀತಿ ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಸಂಭಾವ್ಯ ಅಪಾಯದ ಮುನ್ಸೂಚನೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಇತ್ತ ಗಮನಹರಿಸಿ ಇಲ್ಲಿಗೆ ಬೇಕಾದ ಕ್ರಮ ವಹಿಸಬೇಕಿದೆ ಎನ್ನುವ ಆಗ್ರಹ ವ್ಯಕ್ತವಾಗಿದೆ. ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯ ಕೆಳಭಾಗ ಕುಸಿತಗೊಂಡಿರುವ ಕಾರಣ ರಸ್ತೆಯಲ್ಲಿ ವಾಹನಗಳ ಸಂಚಾರ ಅಪಾಯಕಾರಿ ಎನ್ನಲಾಗುತ್ತಿದ್ದು ಅಪಾಯದ ಭೀತಿ ಇಲ್ಲಿ ಸೃಷ್ಟಿಯಾಗಿದೆ. ಅಪಾಯ ಸಂಭವಿಸಿದ ಬಳಿಕ ಚಿಂತಿಸುವುದಕ್ಕಿಂತ ಅಪಾಯ ಸಂಭವಿಸುವುದಕ್ಕಿಂತ ಮೊದಲೇ ಎಚ್ಚೆತ್ತುಕೊಂಡರೆ ಮುಂದೆ ಸಂಭವಿಸಬಹುದಾದ ದುರಂತವನ್ನು ತಪ್ಪಿಸಬಹುದು ಎನ್ನುವ ಮಾತುಗಳು ಸ್ಥಳೀಯವಾಗಿ ಕೇಳಿ ಬಂದಿದೆ.

ವರದಿ ಸಲ್ಲಿಸಿದ್ದೇನೆ-ವಿ.ಎ
ಧರೆ ಕುಸಿತದ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ ಎಂದು ನೆ.ಮುಡ್ನೂರು ಗ್ರಾಮ ಕರಣಿಕರಾದ ಉಮೇಶ್ ಕಾವಡಿ `ಸುದ್ದಿ’ಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here