ಬಡಗನ್ನೂರು ಶಾಲಾ ಶಿಕ್ಷಕ ಶ್ರೀಧರ ಬೋಳಿಲ್ಲಾಯರಿಗೆ ಸನ್ಮಾನ-ಬೀಳ್ಕೊಡುಗೆ

0

ಬಡಗನ್ನೂರು: ದ.ಕ ಜಿ.ಪಂ ಉ.ಹಿ.ಪ್ರಾಥಮಿಕ ಶಾಲೆ ಬಡಗನ್ನೂರು ಇಲ್ಲಿನ ಸಹ ಶಿಕ್ಷಕ ಶ್ರೀಧರ ಬೋಳಿಲ್ಲಾಯ ಅವರಿಗೆ ಬೀಳ್ಕೊಡುಗೆ ಹಾಗು ಸನ್ಮಾನ ಕಾರ್ಯಕ್ರಮ ಜು. 30 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ಅವರು ‘ಶಿಕ್ಷಕರು ಶಾಲೆಯ ಶಕ್ತಿ, ಶ್ರೀಯುತರು ತಮ್ಮ ಶಿಸ್ತಿನ ವ್ಯಕ್ತಿತ್ವದ ಮೂಲಕ ಮಕ್ಕಳಲ್ಲಿ ಮೌಲ್ಯವನ್ನು ತುಂಬಿದ್ದಾರೆ’ ಎಂದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ರೀಧರ ಬೋಳಿಲ್ಲಾಯ ಅವರು ‘ಶಾಲೆಯ ಮೇಲಿನ ತನ್ನ ಅಭಿಮಾನ ಎಂದಿಗೂ ಕಡಿಮೆಯಾಗುವೂದಿಲ್ಲ ಮುಂದೆಯೂ ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅವರ ಧರ್ಮಪತ್ನಿ ಅರುಣ ರವರು ಶಾಲೆ, ಪೋಷಕರು ಹಾಗು ವಿದ್ಯಾರ್ಥಿಗಳ ಪ್ರೀತಿಯ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಸನ್ಮಾನ:
ಶಿಕ್ಷಕ ವೃಂದದಿಂದ ಚಿನ್ನದುಂಗುರ, ಸನ್ಮಾನ ಪತ್ರ, ಹಾರ ಫಲಪುಷ್ಪ ಹಾಗು ಸೀರೆಯೊಂದಿಗೆ ದಂಪತಿ ಸಹಿತ ಸನ್ಮಾನಿಸಲಾಯಿತು. ಎಸ್ ಡಿ ಎಂ ಸಿ ಹಾಗು ಪೋಷಕರು ಕಾಲು ದೀಪವನ್ನಿತ್ತು ಗೌರವಿಸಿದರು. ವಿದ್ಯಾರ್ಥಿಗಳು 5,6,7,8 ನೆ ತರಗತಿ ವಾರು ಪ್ರತ್ಯೇಕ ಕೊಡುಗೆಗಳ ಮೂಲಕ ತಮ್ಮ ಶಿಕ್ಷಕರ ಮೇಲಿನ ಅಭಿಮಾನವನ್ನು ತೋರಿದರು. ಉಳಿದ ವಿದ್ಯಾರ್ಥಿಗಳು ವೈಯಕ್ತಿಕ ಕಾಣಿಕೆಗಳ ಮೂಲಕ ಶುಭ ಹಾರೈಸಿದರು. ಹಲವು ವರ್ಷಗಳ ಕಾಲ ಸಹೋದ್ಯೋಗಿಗಳಾಗಿದ್ದ ಕುದ್ಮಾರಿನ ಶ್ರೀಲತಾ ಹಾಗು ವೀಣಾ ಟೀಚರ್ ಬೆಳ್ಳಿಯ ಫಲಕದೊಂದಿಗೆ ದಂಪತಿಯನ್ನು ಸನ್ಮಾನಿಸಿದರು. ಬೋಳಿಲ್ಲಾಯರ ಪುತ್ರ ಹಾಗು ಸೊಸೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನೆರೆಯ ನಿಡ್ಪಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಇದೇ ದಿನ ನಿವೃತ್ತಿ ಹೊಂದಿದ ಉದಯ ಕುಮಾರ್ ರವರನ್ನೂ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ ರಾಜ್ಯ ಮಟ್ಟದ ಶಿಕ್ಷಣ ಸಾರಥಿ ಪ್ರಶಸ್ತಿ ವಿಜೇತ ಕುಂಬ್ರ ಕ್ಲಸ್ಟರ್ ನ ಸಿ ಆರ್ ಪಿ ಶಶಿಕಲಾರವರನ್ನು ಸನ್ಮಾನಿಸಲಾಯಿತು.

ಕೊಡುಗೆ: ಶ್ರೀಧರ ಬೋಳಿಲ್ಲಾಯ ಅವರು ತನ್ನ ಶಾಲೆಯ ಮೇಲಿನ ಅಭಿಮಾನದ ಪ್ರತೀಕವಾಗಿ ಗ್ರೀನ್ ಬೋರ್ಡ್ ಹಾಗು ವೈಟ್ ಬೋರ್ಡ್ ಗಳನ್ನು ಕೊಡುಗೆಯಾಗಿ ನೀಡಿದರು. ಜೊತೆಗೆ ಶಿಕ್ಷಕರು ಹಾಗು ಬೋಧಕೇತರ ವರ್ಗ ಹೊಸ ಬಟ್ಟೆಯೊಂದಿಗೆ ಹಬ್ಬದ ಸಂಭ್ರಮವನ್ನು ಕಾಣುವಂತೆ ಮಾಡಿದ ಖುಷಿಯು ಅವರದಾಗಿತ್ತು.

ಕಾರ್ಯಕ್ರಮದಲ್ಲಿ ಸುಮಾರು 250 ಕ್ಕೂ ಮಿಕ್ಕಿದ ವಿದ್ಯಾಭಿಮಾನಿಗಳು ಹಾಜರಿದ್ದು ಶುಭಹಾರೈಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ರಾಮಣ್ಣ ಗೌಡ ಅತಿಥಿ ಸ್ಥಾನದಿಂದ ಶುಭ ಹಾರೈಸಿದರು. ಎಸ್ ಡಿ ಎಂ ಮಾಜಿ ಅಧ್ಯಕ್ಷರಾದ ತ್ಯಾಂಪಣ್ಣ ಸಿ. ಎಚ್., ಮಹಾಲಿಂಗ ಪಾಟಾಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಏಕತ್ತಡ್ಕ ಶಾಲೆಯ ಶಿಕ್ಷಕಿ ಚಿತ್ರಲತಾ, ಕುದ್ಮಾರು ಶಾಲೆಯ ವೀಣಾ, ಸಿ.ಅರ್. ಪಿ. ಶಶಿಕಲಾ, ನಿಡ್ಪಳ್ಳಿ ಶಾಲೆಯ ಮುಖ್ಯಗುರು ಉದಯ್ ಕುಮಾರ್ ಶ್ರೀಧರ ಬೋಳಿಲ್ಲಾಯರ ಕುರಿತು ಅಭಿಮಾನದ ನುಡಿಗಳನ್ನಾಡಿದರು. ಮುಖ್ಯಗುರು ನಾರಾಯಣ ನಾಯ್ಕ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ.ಪಿ.ಟಿ ವಿಜಯಲಕ್ಷ್ಮಿ ಅವರು ಸನ್ಮಾನ ಪತ್ರ ವಾಚಿಸಿದರು. ಜಿ.ಪಿ.ಟಿ ರಮ್ಯ ಅವರು ಧನ್ಯವಾದ ಗೈದರು. ಜಿ.ಪಿ.ಟಿ ಜನಾರ್ದನ ದುರ್ಗ ನಿರ್ವಹಿಸಿದರು.

LEAVE A REPLY

Please enter your comment!
Please enter your name here