ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಪರಿಸರದಲ್ಲಿ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡದಿಂದ ಸ್ವಚ್ಛತಾ ಕಾರ‍್ಯಕ್ರಮ

0

೦ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಸಂಭ್ರಮದ ಸಲುವಾಗಿ.

೦ ಅಗತ್ಯ ಸಲಕರಣೆಯೊಂದಿಗೆ ಸನ್ನದ್ಧವಾದ ತಂಡ.

೦ 44 ಮಂದಿ ಕಾರ‍್ಯಕರ್ತರಿಂದ ಸೇವೆ.

೦ “ವಿಜ್ಞಾನ-ವಿನಯ-ಸೇವೆ” ಧ್ಯೇಯ ವಾಕ್ಯದೊಂದಿದೆ ಶ್ರಮದಾನ-ಇಸ್ಮಾಯಿಲ್ ತಂಙಳ್.

ಉಪ್ಪಿನಂಗಡಿ: ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡದಿಂದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಸಲುವಾಗಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಪರಿಸರವನ್ನು ಶುಚಿಗೊಳಿಸುವ ಸ್ವಚ್ಛತಾ ಕಾರ‍್ಯಕ್ರಮವನ್ನು ಆ. 13ರಂದು ನಡೆಸಿದರು.

ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಆರೋಗ್ಯ ಕೇಂದ್ರದ ಸುತ್ತ ಭಾರೀ ಪ್ರಮಾಣದಲ್ಲಿ ಗಿಡಗಂಡಿಗಳು ಬೆಳೆದು ನಿಂತಿದ್ದವು. ಹೀಗಾಗಿ ಅವುಗಳನ್ನು
ಉಪ್ಪಿನಂಗಡಿ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡದ ಸುಮಾರು 44 ಮಂದಿ ಸದಸ್ಯರು ಬೆಳಿಗ್ಗಿನಿಂದ ಸಂಜೆಯ ತನಕ ಶ್ರಮದಾನದ ಮೂಲಕ ತೆಗೆದು ಶುಚಿಗೊಳಿಸಿದರು.

ವಿಜ್ಞಾನ-ವಿನಯ-ಸೇವೆ ಧ್ಯೇಯ ವಾಕ್ಯದೊಂದಿದೆ ಶ್ರಮದಾನ-ಸೆಯ್ಯದ್ ಇಸ್ಮಾಯಿಲ್ ತಂಙಳ್

ಎಸ್.ಕೆ.ಎಸ್.ಎಸ್.ಎಫ್. ವಿಖಾಯ ದ.ಕ. ಜಿಲ್ಲಾ ಸಂಚಾಲಕ ಸೆಯ್ಯದ್ ಇಸ್ಮಾಯಿಲ್ ತಂಙಳ್ ಶ್ರಮದಾನದ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿ ಎಸ್.ಕೆ.ಎಸ್.ಎಸ್.ಎಫ್. ಸಂಘಟನೆಯ ವಿಖಾಯ ತಂಡ “ವಿಜ್ಞಾನ-ವಿನಯ-ಸೇವೆ” ಧ್ಯೇಯ ವಾಕ್ಯದೊಂದಿದೆ ರಾಜ್ಯದಾದ್ಯಂತ ಸಮಾಜಮುಖಿ ಕೆಲಸ ಮಾಡುತ್ತಿದೆ. ಇದರಲ್ಲಿ ಪ್ರಕೃತಿ ವಿಕೋಪ, ಅಪಘಾತ ಸಂದರ್ಭದಲ್ಲಿ ಅಸಹಾಯಕರಿಗೆ ಸಹಾಯ ಮಾಡುವುದು, ಅನಾಥ ಶವಗಳ ದಫನ ಮೊದಲಾದ ಕೆಲಸಗಳನ್ನು ಸೇವಾ ಮನೋಭಾವದಿಂದ ಮಾಡುತ್ತಿದ್ದು, ಅದರ ಜೊತೆಗೆ ಪರಿಸರ ಸ್ವಚ್ಛತೆಗೂ ಆದ್ಯತೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಸಲುವಾಗಿ ಸಮುದಾಯ ಆಸ್ಪತ್ರೆ ಪರಿಸರವನ್ನು ಸ್ವಚ್ಚ ಮಾಡುತ್ತಿರುವುದಾಗಿದೆ ಎಂದು ತಿಳಿಸಿದರು.

ಶ್ರಮದಾನದಲ್ಲಿ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಉಪ್ಪಿನಂಗಡಿ ವಲಯ ಉಪಾಧ್ಯಕ್ಷ ಯೂಸುಫ್ ಹಾಜಿ ಪೆದಮಲೆ, ಮುನೀರ್ ಆತೂರು, ಹಮೀದ್ ಹನೀಫಿ, ಕೋಶಾಧಿಕಾರಿ ಝಕರಿಯಾ ಮುಸ್ಲಿಯಾರ್ ಆತೂರು, ಸಂಚಾಲಕರಾದ ಫಯಾಜ್ ಯು.ಟಿ., ರಶೀದ್ ಕರಾಯ, ಆತೂರು ವಲಯ ಉಪಾಧ್ಯಕ್ಷ ಸಿದ್ದಿಕ್ ಎನ್., ಕಾರ‍್ಯದರ್ಶಿ ಅಝೀಜ್ ಪಾಲೆತ್ತಡಿ, ಕುದ್ಲೂರು ಶಾಖೆಯ ಖಾದರ್, ನುಹುಮಾನ್ ಸುಲೈಮಾನ್, ತಸ್ಲೀಮ್, ರಶೀದ್ ಎವರೆಸ್ಟ್, ಶಫಿದ್ ಕುದ್ಲೂರು, ಶಫ್ರಿದ್ ನಿನ್ನಿಕಲ್, ಕುಂಡಾಜೆ ಶಾಖೆಯ ಕಾರ‍್ಯದರ್ಶಿ ಅಶ್ರಫ್ ಕುಂಡಾಜೆ, ಕರಾಯ ವಲಯ ಅಧ್ಯಕ್ಷ ಕೆ.ಎಂ. ಸಿದ್ದಿಕ್ ಫೈಝಿ, ಜಿಲ್ಲಾ ರೇಪಿಡ್ ಪೋರ್ಸು ಸಂಚಾಲಕ ಖಾದರ್ ಬಂಗೇರುಕಟ್ಟೆ, ಅಬೂಬಕ್ಕರ್ ಮುಸ್ಲಿಯಾರ್ ಸೇರಿದಂತೆ 44 ಮಂದಿ ಕಾರ‍್ಯಕರ್ತರು ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದರು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕೃಷ್ಣಾನಂದ, ಡಾ. ಅನ್ನಪೂರ್ಣೇಶ್ವರಿ ಸ್ವಚ್ಛತೆ ಕಾರ‍್ಯಕ್ಕೆ ಚಾಲನೆ ನೀಡಿದರು. ಆಸ್ಪತ್ರೆ ಸಿಬ್ಬಂದಿಗಳಾದ ಚರಣ್, ಮುರಳಿ, ಕುಸುಮ, ವೈದ್ಯ ವಿದ್ಯಾರ್ಥಿಗಳಾದ ಡಾ. ತನುಶ್ರೀ, ಡಾ. ತೇಜಿಬಾ ಶೇಕ್, ಡಾ. ಅಲ್ಕಾ, ಡಾ. ಅನುಘ ಪೂರಕ ಸಹಕಾರ ನೀಡಿ ತಂಡದ ಸೇವಾ ಕಾರ‍್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here