ಬಿಳಿಯೂರು: ಭತ್ತದ ಗದ್ದೆ, ಶಾಲಾ ಸಂಪರ್ಕದ ರಸ್ತೆಗೆ ಬೇಲಿ ಹಾಕಿ ತಡೆ ಆರೋಪ-ಗ್ರಾಮಸ್ಥರಿಂದ ಸಹಾಯಕ ಕಮಿಷನರ್‌ಗೆ ದೂರು

0

ಉಪ್ಪಿನಂಗಡಿ: ಬಿಳಿಯೂರು ಗ್ರಾಮದ ಕೋಡ್ಲೆ ಎಂಬಲ್ಲಿ ರೈತರ ಭತ್ತದ ಗದ್ದೆಗಳಿಗೆ ಹಾದು ಹೋಗುವ ಗ್ರಾಮದ ಏಕೈಕ ಸಂಪರ್ಕ ರಸ್ತೆಯನ್ನು ಸ್ಥಳೀಯ ನಿವಾಸಿಯೋರ್ವರು ತಡೆ ಉಂಟು ಮಾಡಿ ಕೃಷಿ ಕಾರ‍್ಯ ನಡೆಯದಂತೆ ಮತ್ತು ಗ್ರಾಮಸ್ಥರು ಸಂಚಾರ ಮಾಡುವುದಕ್ಕೂ ಅಡಚಣೆ ಉಂಟು ಮಾಡಿದ್ದಾರೆ ಎಂದು ಫಲಾನುಭವಿ ಗ್ರಾಮಸ್ಥರು ಪುತ್ತೂರು ಸಹಾಯಕ ಕಮೀಷನರ್‌ರಿಗೆ ದೂರು ಸಲ್ಲಿಸಿದ್ದಾರೆ.

ಬಿಳಿಯೂರು ಗ್ರಾಮದ ಸರ್ಕಾರಿ ಶಾಲೆಯಿಂದ ಕೋಡ್ಲೆ ಮುಖಾಂತರ ಬೈಲು ಗದ್ದೆಗಳಿಗೆ ಸಂಪರ್ಕ ಕಲ್ಪಿಸುವ ಮಾಮೂಲಿ ಮಾರ್ಗದ ಒಂದು ಮಗ್ಗುಲಲ್ಲಿ ವ್ಯಕ್ತಿಯೋರ್ವರು ಜಾಗ ಖರೀದಿ ಮಾಡಿದ್ದು, ಆ ವ್ಯಕ್ತಿ ಇದೀಗ ರಸ್ತೆಗೆ ತಡೆ ಉಂಟು ಮಾಡಿ ಬೇಲಿ ಹಾಕಿದ್ದು, ಇದರಿಂದಾಗಿ ಬಹು ಕಾಲದಿಂದ ಊರ್ಜಿತದಲ್ಲಿದ್ದ ರಸ್ತೆ ಬಂದ್ ಆಗಿರುವುದಾಗಿ ದೂರಿನಲ್ಲಿ
ಆಪಾದಿಸಿದ್ದಾರೆ.

ಈ ರಸ್ತೆ ಮೂಲಕ ಸುಮಾರು ೨೫ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಇದ್ದು, ಶಾಲಾ ಮಕ್ಕಳು, ಹಾಲು ಉತ್ಪಾದಕರು, ರೈತರು ಕೃಷಿ ಯಂತ್ರೋಪಕರಣ ಸಾಗಾಣಿಕೆಗೆ ಬಳಕೆ ಮಾಡಿಕೊಂಡಿದ್ದರು. ಇದೀಗ ಈ ರಸ್ತೆ ಬಂದ್ ಮಾಡಿರುವುದರಿಂದಾಗಿ ಬಹಳಷ್ಟು ಸಮಸ್ಯೆ ಎದುರಾಗಿದೆ. ಈ ಬಗ್ಗೆ ಪೆರ್ನೆ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದು, ಅದರಂತೆ ಪಿಡಿಒ. ಆಗಮಿಸಿ ಸ್ಥಳ ಪರಿಶೀಲನೆ ನಡೆಸಿರುತ್ತಾರೆ. ಆದರೆ ಯಾವುದೇ ಕ್ರಮ ಜರಗಿಸಿರುವುದಿಲ್ಲ.

ಈ ಕಾರಣದಿಂದಾಗಿ ರೈತರ ಸುಮಾರು 30 ಎಕ್ರೆಯಷ್ಟು ಹೊಲ ಗದ್ದೆ, ಕೃಷಿ ಕಾರ‍್ಯ ಸಂಪೂರ್ಣ ಸ್ಥಗಿತಗೊಂಡಿದೆ. ಕೃಷಿಯನ್ನೇ ಅವಲಂಭಿಸಿಕೊಂಡಿರುವವರ ಬದುಕು ಸಾಗಿಸಲು ಅನಾನುಕೂಲವಾಗಿರುತ್ತದೆ. ಆದ ಕಾರಣ ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ದೂರು ಪತ್ರದಲ್ಲಿ ವಿನಂತಿಸಿದ್ದಾರೆ. ಸಹಾಯಕ ಕಮೀಷನರ್ ಅವರಿಗೆ ನೀಡಿರುವ ದೂರು ಪತ್ರದಲ್ಲಿ ಫಲಾನುಭವಿ ಗಣೇಶ್ ರಾಜ್ ಸೇರಿದಂತೆ ಸುಮಾರು 25ಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ.

LEAVE A REPLY

Please enter your comment!
Please enter your name here