ಕೊಣಾಜೆ: ಜಮೀನು ವಿವಾದ-ಪರಸ್ಪರ ಹಲ್ಲೆ ಆರೋಪ ಇತ್ತಂಡದವರಿಂದ ಪೊಲೀಸರಿಗೆ ದೂರು; ಪ್ರಕರಣ ದಾಖಲು

0

ನೆಲ್ಯಾಡಿ: ಜಮೀನು ವಿವಾದಕ್ಕೆ ಸಂಬಂಧಿಸಿ ಪರಸ್ಪರ ಹಲ್ಲೆ ಆರೋಪ ಹೊರಿಸಿ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಪುಂಡಿಕಲ್‌ನ ಎರಡು ಕುಟುಂಬಗಳು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಣಾಜೆ ಗ್ರಾಮದ ಪುಂಡಿಕಲ್ ನಿವಾಸಿ ಚಿನ್ನಪ್ಪ ಪೂಜಾರಿಯವರ ಪುತ್ರ ಗೋಪಾಲಕೃಷ್ಣ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿ, `ಆ.17ರಂದು ಮಧ್ಯಾಹ್ನ 2.45ಕ್ಕೆ ನಾನು ಹಾಗೂ ಕೂಲಿ ಕೆಲಸದವರು ಊಟಕ್ಕೆಂದು ಮನೆಗೆ ಹೋಗಿ ಮರಳಿ ಜಮೀನಿಗೆ ಬರುತ್ತಿರುವಾಗ ನಮ್ಮ ಜಮೀನಿಗೆ ಸಾರಿಕ ಎಂಬವರು ಅಕ್ರಮ ಪ್ರವೇಶ ಮಾಡಿ ರಬ್ಬರ್ ಮರಗಳನ್ನು ಕಡಿದು ನಷ್ಟ ಉಂಟು ಮಾಡಿರುತ್ತಾರೆ. ನಾವು ಸ್ಥಳಕ್ಕೆ ಹೋಗುವಾಗ ಸಾರಿಕ ತಪ್ಪಿಸಿಕೊಂಡು ಓಡುವ ಸಂದರ್ಭದಲ್ಲಿ ತನ್ನಲ್ಲಿದ್ದ ಕತ್ತಿಯೊಂದಿಗೆ ನೆಲಕ್ಕೆ ಬಿದ್ದು ಗಾಯಮಾಡಿಕೊಂಡಿದ್ದಾರೆ. ಬಳಿಕ ಆಕೆ ಬಿದ್ದಲ್ಲಿಂದ ಎದ್ದು ಈ ಜಮೀನಿಗೆ ನೀವು ಬಂದರೆ ನಿಮ್ಮನ್ನೆಲ್ಲಾ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ’ ಎಂದು ಆರೋಪಿಸಿದ್ದಾರೆ. ಈ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 447,427,504,506 ರಂತೆ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಗ್ರಾಮದ ಪುಂಡಿಕಲ್ ನಿವಾಸಿ ಗಣೇಶ ಪೂಜಾರಿಯವರ ಪತ್ನಿ ಸಾರಿಕರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿ, `ಆ.17ರಂದು ಮಧ್ಯಾಹ್ನ 2-30ಕ್ಕೆ ನಾನು ಮನೆಯ ಹೊರಗಡೆ ಇರುವ ಸಮಯ ಸಂಬಂಧಿಕರಾದ ಬಾಲಕೃಷ್ಣ ಹಾಗೂ ಗೋಪಾಲಕೃಷ್ಣ ಎಂಬವರು ಏಕಾ ಏಕಿಯಾಗಿ ಕತ್ತಿ ಮತ್ತು ದೊಣ್ಣೆಯನ್ನು ಹಿಡಿದುಕೊಂಡು ನಮ್ಮ ಜಮೀನಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಈ ಪೈಕಿ ಬಾಲಕೃಷ್ಣರವರು ಕತ್ತಿಯಿಂದ ಕಡಿಯಲು ಬಂದಾಗ ನಾನು ತಪ್ಪಿಸಿಕೊಂಡ ಕಾರಣ ಎಡಬದಿ ತಲೆಗೆ ಕತ್ತಿ ತಾಗಿ ರಕ್ತ ಗಾಯವಾಗಿರುತ್ತದೆ. ಈ ವೇಳೆ ನಾನು ನೆಲಕ್ಕೆ ಬಿದ್ದಾಗ ಗೋಪಾಲಕೃಷ್ಣರವರು ಕಾಲಿನಿಂದ ತುಳಿದು ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆ. ಆ ಸಮಯ ನಾನು ಬೊಬ್ಬೆ ಹಾಕಿದಾಗ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ತಂದಿದ್ದ ಕತ್ತಿ ಹಾಗೂ ದೊಣ್ಣೆಯನ್ನು ತೆಗೆದುಕೊಂಡು ಹೋಗಿರುತ್ತಾರೆ. ಗಾಯಗೊಂಡಿದ್ದ ನನ್ನನ್ನು ನನ್ನ ತಮ್ಮ ಸುರೇಶ, ಚಂದ್ರಶೇಖರ, ಕೇಶವ ಮತ್ತು ಕೀರ್ತನ್ ಎಂಬವರು ಚಿಕಿತ್ಸೆಗಾಗಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ’ ಎಂದು ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 447, 504,324, 506 ರಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here