ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ `ಶತ ಕಲ್ಪವೃಕ್ಷ ನಾಟಿ ಅಭಿಯಾನ’ಕ್ಕೆ ಚಾಲನೆ

0

ಪುತ್ತೂರು:ಧಾರ್ಮಿಕ, ಶ್ರದ್ಧಾ ಕೇಂದ್ರಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿರದೇ ಕೃಷಿ, ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು, ಕೃಷಿ ಕಾರ್ಯದಲ್ಲಿ ಮುಂದಿನ ಪೀಳಿಗೆಗೂ ಉತ್ತೇಜನ ನೀಡಬೇಕು ಎಂಬ ಮಹಾನ್ ಉದ್ದೇಶದಿಂದ ಇತಿಹಾಸ ಪ್ರಸಿದ್ದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವತಿಯಿಂದ ದೈವಸ್ಥಾನದ ಆವರಣದಲ್ಲಿ ನಡೆಯಲಿರುವ `ಶತ ಕಲ್ಪವೃಕ್ಷ ನಾಟಿ’ ಮಾಡುವ ವಿಭಿನ್ನ ಅಭಿಯಾನಕ್ಕೆ ಆ.೨೦ರಂದು ಚಾಲನೆ ನೀಡಲಾಯಿತು.

ಅಭಿಯಾನಕ್ಕೆ ಶಾಸಕ ಸಂಜೀವ ಮಠಂದೂರು ಸಸಿ ನಾಟಿ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ, ಧಾರ್ಮಿಕತೆ, ಆಧ್ಯಾತ್ಮಿಕತೆಯ ಜೊತೆಗೆ ಸಾಗಿದಾಗ ನಮ್ಮ ಬದುಕು ಸಾರ್ಥಕವಾಗಲಿದೆ. ಅಂತಹ ಕಾರ್ಯಕ್ಕೆ ಬಲ್ನಾಡು ದೈವಸ್ಥಾನವು ಸಾಕ್ಷಿಯಾಗಿದೆ. ತೆಂಗಿನ ಸಸಿ ನಾಟಿಯು ದೈವಸ್ಥಾನದ ಆದಾಯ ವೃದ್ಧಿಗೆ ಸಹಕಾರಿಯಾಗುವುದಲ್ಲದೆ ಭಕ್ತರಿಗೆ ಗಿಡ ನೆಟ್ಟು ಸೇವೆ ಮಾಡುವ ಅವಕಾಶ ನೀಡಿದೆ. ಇದು ಪರಿಶುದ್ಧ ವಾತಾವಣ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಭಕ್ತರಿಗೆ ತೆಂಗಿನ ಸಸಿ ನಾಟಿ ಮಾಡಿ ಸೇವೆ ಸಲ್ಲಿಸುವ ಅವಕಾಶ ದೊರೆಯುತ್ತಿದೆ. ದೇವಸ್ಥಾನವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಭಕ್ತರು ಸಹಕರಿಸುವಂತೆ ಮನವಿ ಮಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಮಾತನಾಡಿ, ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಕೃಷಿ ಕಾರ್ಯಗಳಿಗೂ ಯುವ ಪೀಳಿಗೆಗೆ ಪ್ರೇರಣೆ ನೀಡುವುದು, ಕೋವಿಡ್‌ನಂತಹ ಆರ್ಥಿಕ ಸಂಕಷ್ಟ ಉಂಟಾದಾಗ ಆರ್ಥಿಕ ಕುಸಿತವನ್ನು ಸಮದೂಗಿಸಲು ವ್ಯವಸ್ಥೆಗಳು ದೈವಸ್ಥಾನದಲ್ಲಿರಬೇಕು ಹಾಗೂ ಮುಂದಿನ ಅವಧಿಯಲ್ಲಿಯೂ ದೇವಸ್ಥಾನದಲ್ಲಿ ಆದಾಯಕ್ಕೆ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ತೆಂಗಿನ ಸಸಿ ನಾಟಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಗಿಡ ನಾಟಿಗೆ ಬೇಕಾದ ಗುಂಡಿ, ಸಸಿ, ನಾಟಿ ಮಾಡುವುದು ಹಾಗೂ ಅದರ ಮುಂದಿನ ಪೋಷಣೆ ಸೇರಿದಂತೆ ಎಲ್ಲಾ ವೆಚ್ಚಗಳು ಸೇರಿ ಒಟ್ಟು ಒಂದು ಗಿಡಕ್ಕೆ ರೂ.೧೦೦೦ ದರ ನಿಗದಿಪಡಿಸಲಾಗಿದ್ದು ಭಕ್ತಾದಿಗಳು ಸಹಕರಿಸುವಂತೆ ವಿನಂತಿಸಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿರಣ್ ಕುಮಾರ್ ರೈ, ನಾರಾಯಣ ಪೂಜಾರಿ, ಬೋಜರಾಜ ಗೌಡ, ಶ್ಯಾಮಣ್ಣ ನಾಯಕ್ ಅಂಬಟೆಮೂಲೆ, ಹರಿಣಿ, ಸ್ವರ್ಣಲತಾ ಭಟ್, ಪ್ರಧಾನ ಅರ್ಚಕರಾದ ರವಿಚಂದ್ರ ನೆಲ್ಲಿತ್ತಾಯ, ಮೋಹನ್ ನೆಲ್ಲಿತ್ತಾಯ, ಕಚೇರಿ ವ್ಯವಸ್ಥಾಪಕ ಚಂದ್ರಶೇಖರ ಭಟ್, ಬಲ್ನಾಡು ಗ್ರಾ.ಪಂ ಉಪಾಧ್ಯಕ್ಷೆ ಪರಮೇಶ್ವರಿ ಭಟ್ ಬಬ್ಬಿಲಿ, ಸದಸ್ಯರಾದ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಗಣೇಶ ಗೌಡ, ನಗರ ಸಭಾ ಸದಸ್ಯೆ ಪೂರ್ಣಿಮಾ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ನ್ಯಾಯವಾದಿ ಚಿದಾನಂದ ಬೈಲಾಡಿ, ಆನಂದ ಸುವರ್ಣ, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ, ಕುಶಾಲಪ್ಪ ಗೌಡ ಓಟೆ, ಸದಾನಂದ ಗೌಡ, ದಿವಾಕರ ರಾವ್ ಪಲ್ಲತ್ತಾರು, ಯಶವಂತ ಗೌಡ ಕೋಡಿಯಡ್ಕ, ವಸಂತ ಗೌಡ ಪದವು, ಮಂಜಪ್ಪ ಗೌಡ ಕುಕ್ಕುತ್ತಡಿ, ಶೃತಿ ಪದವು, ಚಂದ್ರಹಾಸ ಕುಲಾಲ್, ಮಧುಕರ, ವಾಸಪ್ಪ ಗೌಡ, ಶ್ರೀ ಧರ ಗೌಡ ಬಾಯಾರ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಸ್ವಾಗತಿಸಿ, ಸದಸ್ಯ ಅಶೋಕ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here