ಡಾ. ಎಂ.ಕೆ. ಪ್ರಸಾದ್‌ರಿಗೆ ಐಎಂಎ-ಕೆಎಸ್‌ಬಿ ಡಾಕ್ಟರ‍್ಸ್ ಡೇ ಪ್ರಶಸ್ತಿ ಪ್ರದಾನ

0

  • ಐಎಂಎ-ಕೆಎಸ್‌ಬಿ ರಾಜ್ಯ ಪದಾಧಿಕಾರಿಗಳಿಂದ ಪ್ರಶಸ್ತಿ ಪ್ರದಾನ
  • ಐಎಂಎ ಪುತ್ತೂರು ಘಟಕದಿಂದ ವೈದ್ಯರ ದಿನಾಚರಣೆ

ಪುತ್ತೂರು: ಆದರ್ಶ ಆಸ್ಪತ್ರೆಯ ಸರ್ಜನ್ ಡಾ. ಎಂ.ಕೆ. ಪ್ರಸಾದ್ ಅವರಿಗೆ ವೈದ್ಯಕೀಯ ಕ್ಷೇತ್ರದ ಸಾಧಕರಿಗೆ ನೀಡುವ ಪ್ರತಿಷ್ಠಿತ ಐಎಂಎ – ಕೆಎಸ್‌ಬಿ ಡಾಕ್ಟರ‍್ಸ್ ಡೇ ಪ್ರಶಸ್ತಿಯನ್ನು ಭಾನುವಾರ ಪುತ್ತೂರಿನಲ್ಲಿ ಪ್ರದಾನ ಮಾಡಲಾಯಿತು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪುತ್ತೂರು ಇದರ ಆಶ್ರಯದಲ್ಲಿ ಭಾನುವಾರ ಸಂಜೆ ಪುತ್ತೂರು ಮಹಾವೀರ ವೆಂರ‍್ಸ್ನಲ್ಲಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಐಎಂಎ ಕೆಎಸ್‌ಬಿಯ ರಾಜ್ಯ ಪದಾಧಿಕಾರಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಚಿಕಿತ್ಸಾ ವೆಚ್ಚ 10 ರೂ.:
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ.ಕೆ. ಪ್ರಸಾದ್, ಆಹಾರ, ಓದು, ಹಾಸ್ಟೆಲ್ ಸೇರಿದಂತೆ ಒಟ್ಟು 15 ಸಾವಿರ ರೂ.ನಲ್ಲಿ ವೈದ್ಯಕೀಯ ವ್ಯಾಸಂಗವನ್ನು ಪೂರ್ಣಗೊಳಿಸಿದ್ದೆ. ತಾನೇನು ಬುದ್ಧಿವಂತ ವಿದ್ಯಾರ್ಥಿ ಆಗಿರಲಿಲ್ಲ. ಕೊನೆ ಕ್ಷಣದಲ್ಲಿ ವೈದ್ಯಕೀಯ ಸೀಟು ಸಿಗುವಂತಾಯಿತು. ವಿದ್ಯಾಭ್ಯಾಸದ ಬಳಿಕ ತೀರಾ ಹಳ್ಳಿ ಪ್ರದೇಶವಾದ ಸಿದ್ಧಾಪುರದಲ್ಲಿ ಕೆಲಸ ಮಾಡುತ್ತಾ, ಎಂ.ಎಸ್. ಪದವಿಯನ್ನು ಪೂರೈಸಿದೆ. ಎಂ.ಎಸ್. ಪದವಿಯನ್ನು ಸರಕಾರದ ಹಣದಲ್ಲೇ ಓದುವಂತಾಯಿತು. ಇದರಿಂದಾಗಿ ೧೦ ರೂ. ಚಿಕಿತ್ಸಾ ಶುಲ್ಕ ಪಡೆಯಲು ನಿರ್ಧರಿಸಿದೆ ಎಂದು ತಿಳಿಸಿದರು.
ವೈದ್ಯಕೀಯ ರಂಗದ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ:
ತಾನು ಕಣ್ಣಿನ ಒಂದು ಕ್ಷೇತ್ರ ಬಿಟ್ಟು ಉಳಿದಂತೆ ವೈದ್ಯಕೀಯ ರಂಗದ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿದೆ. ಕೋಲಾರ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿರುವುದರಿಂದ ಉತ್ತಮ ಜ್ಞಾನ ಸಂಪಾದಿಸಿದೆ. ಇಲ್ಲಿ ಕಣ್ಣು ಹೊರತುಪಡಿಸಿ ವೈದ್ಯಕೀಯ ರಂಗದ ಎಲ್ಲಾ ಕ್ಷೇತ್ರಗಳ ಅನುಭವ ಸಿಕ್ಕಿತು. ಮೂಳೆ ಮುರಿತದ ರೋಗಿಗಳಿಗೂ ಚಿಕಿತ್ಸೆ ನೀಡಿದಿದ್ದೆ. ಇಂದು ಎಲ್ಲದಕ್ಕೂ ಆಪರೇಷನ್ ಮಾಡಿಸುತ್ತಾರೆ. ಆದರೆ ಆಗ ಹಾಗಿರಲಿಲ್ಲ. ಮೂಳೆ ಮುರಿದರೆ, ಪ್ಲಾಸ್ಟರ್ ಹಾಕಿ ಸರಿಪಡಿಸುತ್ತಿದ್ದೇವು. ನಾವು ನೀಡುತ್ತಿದ್ದ ಚಿಕಿತ್ಸೆಯಿಂದಾಗಿ, ಮುರಿತಕ್ಕೊಳಗಾದ ಕೈ ಆಪರೇಷನ್ ಬಳಿಕ ಸ್ವಲ್ಪ ಡೊಂಕಾಗಿ ಇರುತ್ತಿತ್ತು. ಆದರೆ ಆಗ ಅದು ನಡೆಯುತ್ತಿತ್ತು. ಇಂದು ವೈದ್ಯಕೀಯ ರಂಗದ ತಂತ್ರಜ್ಞಾನ ತುಂಬಾ ಮುಂದುವರಿದಿದೆ ಎಂದರು.
ರಾಜಕೀಯ ಹುಲಿಯ ಬಾಲದಂತೆ:
ತನ್ನ ಅಭ್ಯರ್ಥಿಯಾಗಿದ್ದ ಡಿ.ವಿ. ಸದಾನಂದ ಗೌಡ ಅವರನ್ನು ಪುತ್ತೂರಿನಲ್ಲಿ ಗೆಲ್ಲಿಸುವಂತೆ ಮಾಡಿದ್ದಾಯಿತು. ಬಳಿಕ ರಾಜಕೀಯದಿಂದ ದೂರ ಸರಿಯಬೇಕು ಎಂದು ನಿರ್ಧರಿಸಿದೆ. ಆದರೆ ರಾಜಕೀಯ ಎಂದರೆ ಹುಲಿಯ ಬಾಲ ಹಿಡಿದಂತೆ. ಹಿಡಿದ ಹುಲಿಯ ಬಾಲವನ್ನು ಬಿಡಲು ಆಗುವುದಿಲ್ಲ. ಅದಕ್ಕಾಗಿ ಪತ್ನಿಯನ್ನು ರಾಜಕೀಯಕ್ಕೆ ಬಿಟ್ಟು, ತಾನು ಸ್ವಲ್ಪ ವಿರಮಿಸಲು ಪ್ರಯತ್ನಿಸಿದೆ ಎಂದು ಹಾಸ್ಯ ಭರಿತ ದಾಟಿಯಲ್ಲಿ ಹೇಳಿದರು.
ಸಮಾಜದ ಬಗ್ಗೆ ಕರುಣೆಯಿರಲಿ:
ವೈದ್ಯರು ಸಮಾಜದ ಬಗ್ಗೆ ಕರುಣೆ, ದಯೆಯ ಭಾವನೆಯಿಂದ ಚಿಕಿತ್ಸೆ ನೀಡಬೇಕು. ಅಂತಹ ಎಲ್ಲಾ ವೈದ್ಯರ ಮಕ್ಕಳು ಉತ್ತಮ ಸ್ಥಾನಮಾನ ಹೊಂದಲಿ ಎಂದು ಶ್ರೀ ಮಹಾಲಿಂಗೇಶ್ವರನಲ್ಲಿ ಪ್ರಾರ್ಥಿಸುತ್ತೇನೆ ಎಂದ ಡಾ. ಎಂ.ಕೆ. ಪ್ರಸಾದ್, ಐಎಂಎ ಪ್ರಶಸ್ತಿ ಪ್ರದಾನ ಮಾಡುವ ದಿನ ಜ್ವರ ಬಂದ ಕಾರಣ ಬೆಂಗಳೂರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಐಎಂಎ ರಾಜ್ಯ ಪದಾಧಿಕಾರಿಗಳು ಪುತ್ತೂರಿಗೇ ಬಂದಿರುವುದು ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪುತ್ತೂರಿನ ಮಣ್ಣಿನಲ್ಲೇ ಸನ್ಮಾನ:
ಪ್ರಶಸ್ತಿ ಪ್ರದಾನ ಮಾಡಿದ ಐಎಂಎ ಕೆಎಸ್‌ಬಿ ಅಧ್ಯಕ್ಷ ಡಾ. ಸುರೇಶ್ ಕುಡ್ವ ಮಾತನಾಡಿ, ಹತ್ತೂರಿನಲ್ಲಿ ಪುತ್ತೂರಿನ ಹೆಸರನ್ನು ಪಸರಿಸಿದ, ಪುತ್ತೂರಿನ ಮುತ್ತು ಡಾ. ಎಂ.ಕೆ. ಪ್ರಸಾದ್ ಅವರು. ತಾನು ಹಲವು ಊರು ಸುತ್ತಿದ್ದೇನೆ. ಹಲವು ವೈದ್ಯರನ್ನು ಸಂಪರ್ಕಿಸಿದ್ದೇನೆ. ಅವರಲ್ಲಿ ಗುರುತಿಸಬಹುದಾದ ವೈದ್ಯರೆಂದರೆ ಅದು ಡಾ. ಎಂ.ಕೆ. ಪ್ರಸಾದ್. ಇವರಿಗೆ ಬೆಂಗಳೂರಿನಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಪ್ರಶಸ್ತಿ ಪ್ರದಾನ ಮಾಡಬೇಕಿತ್ತು. ಆದರೆ ಪುತ್ತೂರಿನ ಮಣ್ಣಿನ ಮಗನನ್ನು ಪುತ್ತೂರಿನಲ್ಲಿಯೇ ಸನ್ಮಾನ ಮಾಡುವಂತಾಯಿತು ಎಂದರು.
ಸರ್ಜನ್ ಆಗಿದ್ದರೂ ಎಲ್ಲವನ್ನೂ ನಿಭಾಯಿಸುವ ಕಾಲ ಆಗ ಇತ್ತು. ಅಂತಹ ಕಾಲದಲ್ಲಿ ಹಾಗೂ ಈಗ ತನಗೆ ಸಹಕಾರ ನೀಡಿದ ಹಾಗೂ ಸಹೋದ್ಯೋಗಿಗಳನ್ನು ನೆನಪಿಸಿಕೊಳ್ಳುವ ಉದಾರತೆ ಡಾ. ಎಂ.ಕೆ. ಪ್ರಸಾದ್ ಅವರಲ್ಲಿದೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಫಾದರ್ ಮುಲ್ರ‍್ಸ್ ಆಸ್ಪತ್ರೆಯಲ್ಲೂ ಡಾ. ವೆಂಕಟ್ರಾವ್ ಎನ್ನುವವರಿದ್ದು, ಅವರು ಡಾ. ಎಂ.ಕೆ. ಪ್ರಸಾದ್ ಅವರಂತೆಯೇ ಬಹಳ ಉದಾರ ವ್ಯಕ್ತಿ. ರೋಗಿಗಳ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುತ್ತಾರೆ ಎಂದು ನೆನಪಿಸಿಕೊಂಡರು.

ದ.ಕ.ದಿದ ಡಾ. ಎಂ.ಕೆ. ಪ್ರಸಾದ್‌ರಿಗೆ ಪ್ರಶಸ್ತಿ:
ಐಎಂಎ ಕೆಎಸ್‌ಬಿಯ ಉಪಾಧ್ಯಕ್ಷ ಡಾ. ಕೆ.ಆರ್. ಕಾಮತ್ ಮಾತನಾಡಿ, ಈ ಬಾರಿ ರಾಜ್ಯದ ಹಲವು ಜಿಲ್ಲೆಯ ವೈದ್ಯರಿಗೆ ರಾಜ್ಯದಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿದ್ದೇವು. ಅದರಲ್ಲಿ ದಕ್ಷಿಣ ಕನ್ನಡದಿಂದ ಡಾ. ಎಂ.ಕೆ. ಪ್ರಸಾದ್ ಅವರನ್ನು ಗುರುತಿಸಿದ್ದು, ಇಂದು ಸನ್ಮಾನ ಪ್ರದಾನ ಮಾಡಲಾಗಿದೆ ಎಂದರು.

ಸನ್ಮಾನ ಖುಷಿ ನೀಡಿದೆ:
ಐಎಂಎ ಕೆಎಸ್‌ಬಿಯ ಪಿಆರ್‌ಓ ಡಾ. ಜಿ.ಕೆ. ಭಟ್ ಸಂಕಬಿತ್ತಿಲು ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರನ್ನು ಉದ್ದಕ್ಕೆ ಕುಳ್ಳಿರಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಂದು ರೀತಿಯಲ್ಲಿ ಹೇಳುವುದಾದರೆ, ಅದು ಟೊಪ್ಪಿ ಹಾಕಿದ್ದು ಅಷ್ಟೇ. ಆದರೆ ಡಾ. ಎಂ.ಕೆ. ಪ್ರಸಾದ್ ಅವರಿಗೆ ನೀಡಿದ ಸನ್ಮಾನ ಖುಷಿ ನೀಡಿದೆ. ಸನ್ಮಾನ ಸ್ವೀಕರಿಸಿದ ಬಳಿಕ ಅವರಾಡಿದ ಮಾತು ಕೂಡ ಆಪ್ತವಾಗಿತ್ತು. ಸಹಕರಿಸಿದ ವೈದ್ಯರನ್ನು ಅವರು ನೆನಪಿಸಿಕೊಂಡದ್ದು ಶ್ಲಾಘನೀಯ. ಬಡವರ ಬಂಧುವಾಗಿರುವ ಡಾ. ಎಂ.ಕೆ. ಪ್ರಸಾದ್ ಅವರು, ೧೦ ರೂ.ಗೆ ಚಿಕಿತ್ಸಾ ಶುಲ್ಕ ಪಡೆಯುತ್ತಿರುವಂತಹ ಉದಾಹರಣೆ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಹಣವನ್ನು ಉಳಿತಾಯ ಮಾಡಿ, ಹೆಚ್ಚು ಹಣವನ್ನು ಕೂಡಿಡಬಹುದಿತ್ತು. ಆದರೆ ಡಾ. ಎಂ.ಕೆ. ಪ್ರಸಾದ್ ಹಾಗೇ ಮಾಡಲಿಲ್ಲ ಎಂದು ಶ್ಲಾಘಿಸಿದರು.
ದ.ಕ.ದವರೇ ಸೂಕ್ತ:
ಯಾರೂ ಸಾಯದೇ ಸುರಕ್ಷಿತವಾಗಿ ಆಸ್ಪತ್ರೆಯಿಂದ ಹಿಂದೆ ಕಳುಹಿಸುವಂತಾದರೇ ಅವರೇ ಉತ್ತಮ ವೈದ್ಯರು. ಅಂದು ವೈದ್ಯರೇ ನಾರಾಯಣ ಎಂದು ಹೇಳುತ್ತಿದ್ದರು. ಆದರೆ ಇಂದು ರೋಗಿಗಳೇ ದೇವರಾಗಿದ್ದಾರೆ. ಇಂದು ಸವಾಲು ಹೆಚ್ಚಿದೆ ನಿಜ. ಇದಕ್ಕೆ ಪೂರಕವಾಗಿ, ಐಎಂಎ ಕೆಎಸ್‌ಬಿ ಸೂಕ್ತ ಹೆಜ್ಜೆಗಳನ್ನು ಮುಂದಿಟ್ಟಿದ್ದು, ವೈದ್ಯರ ಸಹಕಾರ ಅಗತ್ಯ. ಐಎಂಎನಲ್ಲೂ ಹಲವು ಸಮಸ್ಯೆಗಳಿದ್ದು, ಅದರ ಪರಿಹಾರಕ್ಕೆ ದಕ್ಷಿಣ ಕನ್ನಡದವರೇ ಸೂಕ್ತ ಎಂದು ತಿಳಿಸಿದರು.

ಐಎಂಎ ಪುತ್ತೂರು ಘಟಕದ ಅಧ್ಯಕ್ಷ ಡಾ. ನರಸಿಂಹ ಶರ್ಮ ಕಾನಾವು ಅಧ್ಯಕ್ಷತೆ ವಹಿಸಿದ್ದರು. ಡಾ. ಭಾಸ್ಕರ್ ಎಸ್. ಅವರು ಡಾ. ಎಂ.ಕೆ. ಪ್ರಸಾದ್ ಅವರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಡಾ. ಭಾಸ್ಕರ್, ಡಾ. ರವೀಂದ್ರ, ಡಾ. ಜೆ.ಸಿ. ಅಡಿಗ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಐಎಂಎ ಪುತ್ತೂರು ಘಟಕದ ಕಾರ್ಯದರ್ಶಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಸ್ವಾಗತಿಸಿ, ಕೋಶಾಧಿಕಾರಿ ಡಾ. ಅಶೋಕ್ ಜಿ.ಕೆ. ವಂದಿಸಿದರು. ಡಾ. ಅನಿಲ್ ಹಾಗೂ ಡಾ. ಸುಲೇಖಾ ವರದರಾಜ್ ಕಾರ್ಯಕ್ರಮ ನಿರೂಪಿಸಿದರು.
ಐಎಂಎ ಸದಸ್ಯರ ಸಾಧಕ ಮನೆಯವರನ್ನು ಗೌರವಿಸಲಾಯಿತು. ಇದೇ ಸಂದರ್ಭ ಡಾಕ್ಟರ‍್ಸ್ ಡೇ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಹಲವು ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು.

ಅರಸಿ ಬಂದ ಪ್ರಶಸ್ತಿ:
ಡಾ. ಎಂ.ಕೆ. ಪ್ರಸಾದ್ ಅವರಿಗೆ ಭಾನುವಾರ ಪುತ್ತೂರಿನಲ್ಲಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಐಎಂಎ – ಕೆಎಸ್‌ಬಿ ಡಾಕ್ಟರ‍್ಸ್ ಡೇ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, ಫಲವಸ್ತು, ಪೇಟ, ಹೂ, ಹಾರ, ಶಾಲು, ಪ್ರಮಾಣಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬೆಂಗಳೂರಿನಲ್ಲಿ ವೈದ್ಯರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಬೇಕಾಗಿತ್ತು. ಆದರೆ ಡಾ. ಎಂ.ಕೆ. ಪ್ರಸಾದ್ ಅವರಿಗೆ ತೆರಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ, ಐಎಂಎ ಕೆಎಸ್‌ಬಿಯ ರಾಜ್ಯ ಪದಾಧಿಕಾರಿಗಳು ಭಾನುವಾರ ಪುತ್ತೂರಿಗೆ ಆಗಮಿಸಿ ಡಾ. ಎಂ.ಕೆ. ಪ್ರಸಾದ್ ಹಾಗೂ ಮಲ್ಲಿಕಾ ಪ್ರಸಾದ್ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯನ್ನು ಎಂದೂ ಬಯಸದ ಡಾ. ಎಂ.ಕೆ. ಪ್ರಸಾದ್ ಅವರನ್ನು ಪ್ರಶಸ್ತಿಯೇ ಅರಸಿಕೊಂಡು ಬಂದಂತಾಗಿದೆ ಎಂಬ ಶ್ಲಾಘನೆ ವೇದಿಕೆಯಿಂದ ಕೇಳಿಬಂತು.

ಹಣ ಮಾಡಿ; ನಂತರ ರಾಜಕೀಯ ಬನ್ನಿ:
ಡಾ. ಸುರೇಶ್ ಪುತ್ತೂರಾಯ ಅವರು ಒಂದಿನ ಬೆಳಿಗ್ಗೆ ತನ್ನ ಬಳಿಗೆ ಬಂದಿದ್ದರು. ತಾನು ರಾಜಕೀಯ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅದಕ್ಕೆ – ಮೊದಲು ಹಣ ಮಾಡಿ. ನಂತರ ರಾಜಕೀಯ ಬನ್ನಿ. ಹಣ ಇಲ್ಲದೇ ಇದ್ದರೆ, ರಾಜಕೀಯದಲ್ಲೂ ದೂರ ತಳ್ಳುತ್ತಾರೆ ಎಂದಿದ್ದೆ. ಇಂದು ಡಾ. ಸುರೇಶ್ ಪುತ್ತೂರಾಯ, ಡಾ. ನರಸಿಂಹ ಕಾನಾವು, ಡಾ. ಗಣೇಶ್ ಮುದ್ರಾಜೆ ಅಂತಹವರು ರಾಜಕೀಯಕ್ಕೆ ಬರುವ ಅಗತ್ಯವಿದೆ ಎಂದು ಡಾ. ಎಂ.ಕೆ. ಪ್ರಸಾದ್ ಹೇಳಿದರು.

\

LEAVE A REPLY

Please enter your comment!
Please enter your name here