ಉಪ್ಪಿನಂಗಡಿ: ಸ್ಮಶಾನ ಅಭಿವೃದ್ಧಿ ಕಾಮಗಾರಿ ಕಳಪೆ-ಆರೋಪ: ಪರಿಶೀಲನೆ

0

ಉಪ್ಪಿನಂಗಡಿ: ಪುತ್ತೂರು ಶಾಸಕರ ಪ್ರಯತ್ನದ ಫಲವಾಗಿ ದೊರಕಿದ 16.66 ಲಕ್ಷ ರೂಪಾಯಿ ಮೊತ್ತದ ಸ್ಮಶಾನ ಅಭಿವೃದ್ಧಿ ಕಾಮಗಾರಿಯಲ್ಲಿ ಕಳಪೆ ಮತ್ತು ಅವ್ಯವಹಾರ ನಡೆದಿದೆ ಎಂಬ ದೂರಿನನ್ವಯ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ದೇಶಿಸಲ್ಪಟ್ಟ ಇಲಾಖಾತ್ಮಕ ಪರಿಶೀಲನಾ ಕಾರ್ಯ ಬುಧವಾರದಂದು ನಡೆಯಿತು.

ಉಪ್ಪಿನಂಗಡಿಯ ದುರ್ಗಾಗಿರಿ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ಕೆಆರ್‌ಐಡಿಎಲ್‌ನಿಂದ ನಡೆದಂತಹ ಅಭಿವೃದ್ಧಿ ಕಾಮಗಾರಿಗಳು ಲೋಪಗ್ರಸ್ಥವಾಗಿ ನಡೆದಿದೆ ಎಂದು ಆರೋಪಿಸಿ ಸ್ಮಶಾನ ಸಮಿತಿಯ ಸದಸ್ಯರಿಂದ ಶಾಸಕರಿಂದ ಮೊದಲುಗೊಂಡು ಮುಖ್ಯ ಮಂತ್ರಿಗಳವರೆಗೆ, ಸಮಾಜ ಕಲ್ಯಾಣ ಅಽಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿಯವರೆಗೆ ದೂರು ಸಲ್ಲಿಕೆಯಾಗಿತ್ತು. ಎಲ್ಲಿಯೂ ಸ್ಪಂದನ ವ್ಯಕ್ತವಾಗದೇ ಹೋದಾಗ ಪ್ರಕರಣದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಲಾಗಿತ್ತು.

ಈ ಎಲ್ಲಾ ಬೆಳವಣಿಗೆಯ ಮಧ್ಯೆ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು ದೂರಿನ ಸತ್ಯಾಸತ್ಯತೆಯನ್ನು ತಿಳಿಯುವ ಸಲುವಾಗಿ ಜಿಲ್ಲಾ ಪಂಚಾಯತ್ ಎಂಜಿನಿಯರ್ ಮೂಲಕ ಕೆಆರ್‌ಐಡಿಎಲ್ ಎಂಜಿನಿಯರ್ ಸಮಕ್ಷಮ ಕಾಮಗಾರಿಯ ಪರಿಶೀಲನೆ ನಡೆಸಿ ಇಲಾಖೆಗೆ ವರದಿ ಸಲ್ಲಿಸಲು ನಿರ್ದೇಶಿಸಲಾಗಿತ್ತು. ಅಂತೆಯೇ ಜಿಲ್ಲಾ ಪಂಚಾಯತ್ ಎಂಜಿನಿಯರ್ ವಿಭಾಗದ ಎಂಜಿನಿಯರ್‌ಗಳಾದ ಭರತ್, ಸಂದೀಪ್, ಕೆಆರ್‌ಐಡಿಎಲ್ ಇಲಾಖಾ ಇಂಜಿನಿಯರ್ ದೀಕ್ಷಿತ್ ಪರಿಶೀಲನೆಗೈದು ಮಹಜರು ನಡೆಸಿದರು.

ಈ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖಾ ತಾಲೂಕು ಮಟ್ಟದ ಅಽಕಾರಿಗಳು, ಸ್ಮಶಾನ ಸಮಿತಿಯ ಅಧ್ಯಕ್ಷ ಕಂಗ್ವೆ ವಿಶ್ವನಾಥ ಶೆಟ್ಟಿ ಸಹಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here