ವಿಸ್ತರಣಾಧಿಕಾರಿ ಕೆ.ನಾಗೇಶ್ ಅವರಿಗೆ ಸಮ್ಮಾನ
ನಿವ್ವಳ ಲಾಭ : 3.10 ಲಕ್ಷ ರೂ. ; 12 ಶೇ. ಡಿವಿಡೆಂಟ್
ಪುತ್ತೂರು: ಸವಣೂರು ಸಮೀಪದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.21 ರಂದು ಮುಕ್ಕೂರು ಹಾಲು ಉತ್ಪಾದಕರ ಸಂಘದ ವಠಾರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ 2021-22 ನೇ ಸಾಲಿನಲ್ಲಿ ಹಾಲು ವ್ಯಾಪಾರದಿಂದ 4.58 ಲಕ್ಷ ರೂ., ಪಶು ಆಹಾರ ಮತ್ತಿತರ ಮಾರಾಟದಿಂದ 26,299, ಇತರೆ ಆದಾಯದಿಂದ 93,696 ರೂ.ಆದಾಯ ಬಂದಿದ್ದು, ಖರ್ಚು ವೆಚ್ಚ ಕಳೆದು 3.10 ಲಕ್ಷ ರೂ.ನಿವ್ವಳ ಲಾಭ ದೊರೆತಿದೆ ಎಂದರು.
ಲಾಭಾಂಶದಲ್ಲಿ 12 ಶೇ. ಡಿವಿಡೆಂಟ್, ಸಿಬಂದಿಗಳಿಗೆ 2 ತಿಂಗಳ ಬೋನಸ್ ನೀಡಲಾಗುವುದು ಎಂದ ಅವರು ಭವಿಷ್ಯದಲ್ಲಿ ಡಿಪೋ ಮೂಲಕ 550-600 ಲೀ.ಹಾಲು ಸಂಗ್ರಹ, ನಿವೇಶನ ಮತ್ತು ನೂತನ ಕಟ್ಟಡ ನಿರ್ಮಾಣ ಮೊದಲಾದ ಗುರಿ ಹೊಂದಲಾಗಿದೆ ಎಂದರು.
ಸದಸ್ಯ ಜೈನುದ್ದೀನ್ ತೋಟದಮೂಲೆ ವರದಿ ಮೇಲೆ ಅಭಿಪ್ರಾಯ ಮಂಡಿಸಿದರು. ಸಂಘದ ವಾಟ್ಸಪ್ ಗ್ರೂಪ್ ನಲ್ಲಿ ಸಂಘಕ್ಕೆ ಸಂಬಂಧಿಸಿದ ಚಟುವಟಿಕೆ, ಮಾಹಿತಿಗಳ ರವಾನೆಗೆ ಆದ್ಯತೆ ನೀಡಬೇಕು. ಅಡ್ಮಿನ್ ಓನ್ಲಿ ನಿಯಮ ಅನುಷ್ಠಾನಿಸಬೇಕು ಎಂದು ಸಲಹೆ ನೀಡಿದರು.
ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಕೆ.ನಾಗೇಶ್ ಕೆಎಂಎಫ್‍ನಿಂದ ದೊರೆಯುವ ಸೌಲಭ್ಯ, ಹೈನುಗಾರಿಕೆಗೆ ಕಾರ್ಯ ವಿಧಾನ ಬಗ್ಗೆ ಸಲಹೆ ಸೂಚನೆ ನೀಡಿದರು. ಕಾರ್ಯದರ್ಶಿ ಸರಿತಾ ಕೆ ವರದಿ ವಾಚಿಸಿದರು.
ಸನ್ಮಾನ ಕಾರ್ಯಕ್ರಮ
ಮುಕ್ಕೂರು ಹಾಲು ಉತ್ಪಾದಕರ ಸಂಘಕ್ಕೆ ಸಂಬಂಧಿಸಿ 2007 ಮಾರ್ಚ್‍ನಿಂದ 2009 ರ ತನಕ, 2021 ಎಪ್ರಿಲ್‍ನಲ್ಲಿ ವಿಸ್ತರಣಾಧಿಕಾರಿಯಾಗಿ, 2021 ಎಪ್ರಿಲ್‍ನಿಂದ 2022 ಮೇ ತನಕ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಸಂಘದ ಬೆಳವಣಿಗೆಗೆ ಸಲಹೆ ಸೂಚನೆಗಳನ್ನು ನೀಡಿದ ದ.ಕ.ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಕೆ.ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕರಾದ ವಿಸ್ತೃತಾ ತೋಟದಮೂಲೆ, ಪತಂಜಲಿ ಶಾಸ್ತ್ರಿ, ಫಾತಿಮತ್ ಹಪೀಪಾ, ಅರ್ಪಿತಾ ಅಡ್ಯತಕಂಡ, ಪ್ರಜ್ಞಾ ಕಜೆ, ಸೌರ್ಪಣಿಕಾ ರೈ ಅವರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಸಮ್ಮಾನ ಪತ್ರ ವಾಚಿಸಿದರು.
ಅತಿ ಹೆಚ್ಚು ಹಾಲು ಪೂರೈಸಿದ ಗಣೇಶ್ ಶೆಟ್ಟಿ ಕುಂಜಾಡಿ, ಪ್ರೇಮನಾಥ ರೈ ಕಂರ್ಬುತ್ತೋಡಿ, ಸುಮಲತಾ ರೈ, ಗುಣಮಟ್ಟದ ಹಾಲು ಪೂರೈಕೆಗಾಗಿ ಕರುಣಾಕರ ರೈ, ಜಗನ್ನಾಥ ರೈ, ಗೋಪಾಲಕೃಷ್ಣ ಗೌಡ ಅವರಿಗೆ ಬಹುಮಾನ ವಿತರಿಸಲಾಯಿತು.
ನಿರ್ದೇಶಕರಾದ ಸುಬ್ರಾಯ ಭಟ್ ನೀರ್ಕಜೆ, ಗುಡ್ಡಪ್ಪ ಗೌಡ ಅಡ್ಯತಕಂಡ, ದಯಾನಂದ ರೈ ಕನ್ನೆಜಾಲು, ಪ್ರೇಮನಾಥ ರೈ ಕಂರ್ಬುತ್ತೋಡಿ, ಕೇಶವ ಗೌಡ ಕಂಡಿಪ್ಪಾಡಿ, ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ಸಾವಿತ್ರಿ ಸಿ ಚಾಮುಂಡಿಮೂಲೆ, ಸುಮಲತಾ ಎಲ್ ರೈ ಮರಿಕೇಯಿ ಉಪಸ್ಥಿತರಿದ್ದರು. ಹಾಲು ಪರೀಕ್ಷಕಿ ಲಲಿತಾ ಪಿ.ಬಿ.ಸಹಕರಿಸಿದರು.