ಕಡಬ ತಾ| 3ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗಣರಾಜ ಕುಂಬ್ಳೆ ಆಯ್ಕೆ

0


ರಾಮಕುಂಜ: ನ.20ರಂದು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಲಿರುವ ಕಡಬ ತಾಲೂಕು ೩ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗಣರಾಜ ಕುಂಬ್ಳೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಂ.ಪಿ ಶ್ರೀನಾಥ್‌ರವರು ಘೋಷಿಸಿದ್ದಾರೆ. ಕಡಬದ ಹಿರಿಯ ಸಾಹಿತಿಗಳು, ಸಂಘಟಕರು, ಕನ್ನಡ ಸಾಹಿತ್ಯ ಪರಿಷತ್ತು ಕಡಬ ಘಟಕದ ಸದಸ್ಯರು ಸೇರಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಗಣರಾಜ್ ಕುಂಬ್ಳೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ತಿಳಿಸಿದ್ದಾರೆ.

ಗಣರಾಜ್ ಕುಂಬ್ಳೆಯವರು ಸುಮಾರು ೩೭ ವರ್ಷಗಳ ಕಾಲ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಎ.೩೦,೨೦೨೧ರಲ್ಲಿ ನಿವೃತ್ತಿಯಾಗಿದ್ದರು. ಇವರು ಪ್ರಸ್ತುತ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಣರಾಜ್ ಕುಂಬ್ಳೆಯವರು ಲೇಖಕರು, ಕವಿಗಳು, ಯಕ್ಷಗಾನ ಅರ್ಥಧಾರಿಗಳು, ಯಕ್ಷಗಾನ ವೇಷಧಾರಿಗಳು, ಆಕಾಶವಾಣಿಯ ಯಕ್ಷಗಾನ ಕಲಾವಿದರು, ಚಿಂತನ ಹಾಗೂ ಭಾಷಣಕಾರರು ಆಗಿದ್ದಾರೆ. ನಾಡಿನ ಹಲವೆಡೆ ಧಾರ್ಮಿಕ ಉಪನ್ಯಾಸವನ್ನೂ ನೀಡಿದ್ದಾರೆ. ಅನೇಕ ರೀತಿಯ ಸಾಹಿತ್ಯ ಪ್ರಕಾರಗಳಲ್ಲಿ ಇವರು ತಮ್ಮ ಛಾಪು ಮೂಡಿಸಿದ್ದಾರೆ. ಬಿರಿವ ಮೊಗ್ಗು, ಅರಳು(ಕವನ ಸಂಕಲನಗಳು), ಪುಣ್ಯಕೋಟಿ(ಸಾಮಾಜಿಕ ನಾಟಕ), ಚಂದ್ರಹಾಸ (ಪೌರಾಣಿಕ ನಾಟಕ), ಹಾಡುಗಳ ಮಣಿಸರ(ಜಾನಪದ ಹಾಡುಗಳ ಸಂಗ್ರಹ), ಕಗ್ಗದೊಳಗಿನ ಸಗ್ಗ(ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಪರಿಚಯ), ಮಿಂಚು ಮಾತಿನ ಯಕ್ಷ-ಕುಂಬ್ಳೆ ಸುಂದರ ರಾವ್ (ಜೀವನ ಚರಿತ್ರೆ), ಕೀರಿಕ್ಕಾಡು ವಿಷ್ಣು ಮಾಸ್ತರ್ (ಜೀವನ ಚರಿತ್ರೆ), ಯಕ್ಷಗಾನ ವಿಮರ್ಶಾ ಪರಂಪರೆ (ಯಕ್ಷಗಾನ ಸಂಬಂಧಿತ ಲೇಖನಗಳು), ಕೋಟೆ ಕ್ಷತ್ರಿಯ ಮಹಿಳೆ(ಜಾನಾಂಗಿಕ ಅಧ್ಯಯನ), ಶ್ರೀ ರಾಮಕುಂಜೇಶ್ವರ ಕ್ಷೇತ್ರ (ಕ್ಷೇತ್ರ ಪುರಾಣ, ಇತಿಹಾಸ), ವಜ್ರಜ್ವಾಲಾ ಪರಿಣಯ, ಶ್ರೀ ರಾಮಕುಂಜೇಶ್ವರ ಕ್ಷೇತ್ರ ಮಹಾತ್ಮೆ (ಯಕ್ಷಗಾನ ಪ್ರಸಂಗಗಳು) ಇವು ಪ್ರಕಟಿತ ಕೃತಿಗಳು. ಇತರ ೮ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಅನೇಕ ಅಂಕಣ ಬರಹಗಳು ಹಾಗೂ ಲೇಖನಗಳನ್ನು ಇವರು ಬರೆದಿದ್ದಾರೆ. ಸಾಕ್ಷರತಾ ಆಂದೋಲನದಲ್ಲಿ ಸುಮಾರು ೧೦ ವರ್ಷಗಳ ಕಾಲ ಸಂಪನ್ಮೂಲ ವ್ಯಕ್ತಿಯಾಗಿ ದುಡಿದಿದ್ದಾರೆ. ಯಕ್ಷ ಶಿಕ್ಷಣದ ನಿಟ್ಟಿನಲ್ಲಿ ಕೊಯಿಲದಲ್ಲಿ ಯಕ್ಷನಂದನ ಕಲಾ ಸಂಘವನ್ನು ತಮ್ಮ ಗೆಳೆಯರೊಂದಿಗೆ ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಇವರಿಗೆ ವಿವೇಕ ಜಾಗೃತಿ ಪ್ರಶಸ್ತಿ, ಮಲ್ಪೆ ಶಂಕರನಾರಾಯಣ ಸಾಮಗ ಸ್ಮಾರಕ ಪ್ರಶಸ್ತಿ, ಶೇಣಿ ಗೋಪಾಲಕೃಷ್ಣ ಭಟ್ಟ ಶತಮಾನೋತ್ಸವ ಪ್ರಶಸ್ತಿ ಲಭಿಸಿದೆ. ಇವರು ಕರ್ನಾಟಕ ಯಕ್ಷಗಾನ ಪಠ್ಯಪುಸ್ತಕ ಸಮಿತಿಯ ಸದಸ್ಯರು ಕೂಡ ಆಗಿದ್ದಾರೆ.

ಮೂಲತ: ಕಾಸರಗೋಡು ಜಿಲ್ಲೆಯ ಕುಂಬ್ಳೆ ನಿವಾಸಿ ವಿದ್ವಾನ್ ಕೆ.ತಿರುಮಲೇಶ್ವರ ಭಟ್ ಹಾಗೂ ಕೆ.ಟಿ.ಶಾರದಾ ದಂಪತಿ ಪುತ್ರರಾಗಿರುವ ಗಣರಾಜ್ ಕುಂಬ್ಳೆಯವರು ಪ್ರಸ್ತುತ ಹಿರೇಬಂಡಾಡಿ ಗ್ರಾಮದ ಬೊಲುಂಬುಡದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here