ಆರ್ಯಾಪು ಗ್ರಾಮ ಪಂಚಾಯತ್‌ಗೆ ಗಾಂಧಿ ಗ್ರಾಮ ಪುರಸ್ಕಾರ

0

ಪುತ್ತೂರು:ಸ್ವಚ್ಚತೆ, ನೈರ್ಮಲ್ಯ, ಕಂದಾಯ ವಸೂಲಿ ಸೇರಿದಂತೆ ಪಂಚಾಯತ್‌ನ ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಗ್ರಾಮ ಪಂಚಾಯತ್‌ಗಳಿಗೆ ನೀಡುವ ೨೦೨೦-೨೧ನೇ ಸಾಲಿನ ರಾಜ್ಯ ಮಟ್ಟದ `ಗಾಂಧಿ ಗ್ರಾಮ ಪುರಸ್ಕಾರಕ್ಕೆ’ ಪುತ್ತೂರು ತಾಲೂಕಿನಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ೫ ಪಂಚಾಯತ್‌ಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಮಂಗಳೂರಿನ ಮುನ್ನೂರು, ಬಂಟ್ವಾಳದ ಇರ್ವತ್ತೂರು, ಬೆಳ್ತಂಗಡಿಯ ಮಡಂತ್ಯಾರು, ಪುತ್ತೂರಿನ ಆರ್ಯಾಪು, ಸುಳ್ಯದ ಸಂಪಾಜೆ ಗ್ರಾಮ ಪಂಚಾಯತ್‌ಗಳು ಈ ಸಾಲಿನ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಆರ್ಯಾಪು ಗ್ರಾಮ ಪಂಚಾಯತ್‌ನಲ್ಲಿ ಎಲ್ಲಾ ಮನೆಗಳಿಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಹಾಗೂ ಸೋಲಾರ್ ಬೀದಿ ದೀಪಗಳ ಅಳವಡಿಕೆ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಘನತ್ಯಾಜ್ಯ ವಿಲೇವಾರಿಯ ಸಮರ್ಪಕ ನಿರ್ವಹಣೆ, ಗ್ರಾಮ ಸಭೆ, ವಾರ್ಡ್‌ಸಭೆ, ಸಾಮಾನ್ಯ ಸಭೆ ಹಾಗೂ ಇತರ ಸಮಿತಿಗಳ ಸಭೆಗಳನ್ನು ನಿಯಮಿತವಾಗಿ ನಡೆಸಿರುತ್ತದೆ. ಯುವಜನ ಮತ್ತು ಕ್ರೀಡೆಗೆ ಅನುದಾನ ಬಳಕೆ, ವಿಶೇಷ ಚೇತನರಿಗೆ ಮೀಸಲು ಅನುದಾನದ ಸಂಪೂರ್ಣ ಬಳಕೆ, ಪ.ಜಾತಿ. ಪ. ಪಂಗಡದ ಅನುದಾನ ಸಂಪೂರ್ಣ ಬಳಕೆ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಎಲ್ಲಾ ಮನೆಗಳಿಗೆ ಶೌಚಾಲಯ ಹಾಗೂ ತ್ಯಾಜ್ಯ ನೀರು ನಿರ್ವಹಣೆಗೆ ಇಂಗುಗುಂಡಿ ಅಳವಡಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿದೆ.

ಅಲ್ಲದೆ ವಿನೂತನ ಚಟುವಟಿಕೆಗಳಾದ ಗ್ರಾ.ಪಂನ ಕುಡಿಯುವ ನೀರಿನ ಘಟಕಗಳಿಗೆ ಸೋಲಾರ್ ಅಳವಡಿಕೆ, ಬೀದಿ ದೀಪಗಳ ವಿದ್ಯುತ್ ಉಳಿತಾಯಕ್ಕೆ ಟೈಮರ್ ಅಳವಡಿಕೆ, ಕುಡಿಯುವ ನೀರಿನ ವಿದ್ಯುತ್ ಸ್ಥಾವರಗಳ ನಿಯಂತ್ರಣಕ್ಕೆ ಮೊಬೈಲ್ ತತ್ರಾಂಶ ಬಳಕೆ, ಕುಡಿಯುವ ನೀರಿನ ಶುಲ್ಕ ವಸೂಲಿಗೆ ಸರಾಗ ತಂತ್ರಾಂಶ ಬಳಕೆ ಹಾಗೂ ತೆರಿಗೆ ವಸೂಲಿಗೆ ಕ್ಯೂಆರ್ ಸ್ಕ್ಯಾನ್ ಅಳವಡಿಕೆ ಅಳವಡಿಸಿಕೊಂಡಿದೆ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಪಂಚಾಯತ್‌ಗಳಿಗೆ ರೂ.೫ಲಕ್ಷ ನಗದು ಪುರಸ್ಕಾರ ದೊರೆಯಲಿದೆ. ೨೦೦೯ರಲ್ಲಿ ನಿರ್ಮಲ ಗ್ರಾಮ ಪುರಸ್ಕಾರವನ್ನು ಆರ್ಯಾಪು ಗ್ರಾಮ ಪಂಚಾಯತ್ ಪಡೆದುಕೊಂಡಿತ್ತು.

LEAVE A REPLY

Please enter your comment!
Please enter your name here