ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಫಲಕ ಅಭಿಯಾನ ಆರಂಭಿಸಲಿರುವ ರಾಜ್ಯ ಸರಕಾರ

0

ಅ.2ರಿಂದ 20ರ ತನಕ ಅಭಿಯಾನ

ಭ್ರಷ್ಟ ಅಧಿಕಾರಿಯಾಗಲಾರೆ, ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ- ನಾಮಫಲಕ ಅಳವಡಿಸಲು ಸರಕಾರ ಆದೇಶ

ಸರಕಾರಿ ಕಚೇರಿಗಳಲ್ಲಿರುವ ಲಂಚ ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ 2021ರ ಜುಲೈ ತಿಂಗಳಿನಿಂದ ಸುದ್ದಿ ಬಿಡುಗಡೆ ಪತ್ರಿಕೆಯು “ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ… ಉತ್ತಮ ಸೇವೆಗೆ ಪುರಸ್ಕಾರ” ಆಂದೋಲನ ಆರಂಭಿಸಿತ್ತು. ಸರಕಾರಿ ಕಚೇರಿಗಳಲ್ಲಿ, ಅಂಗಡಿ ಮುಂಗಟ್ಟು, ಖಾಸಗಿ ಕಚೇರಿಗಳಲ್ಲಿ ಫಲಕ ಅಳವಡಿಸಲಾಗಿತ್ತು. ಶಾಲಾ ಕಾಲೇಜುಗಳಲ್ಲಿ, ಸಭೆ ಸಮಾರಂಭಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಸಲಾಗಿತ್ತು. ಲಂಚ ಪಡೆಯದೆ ಉತ್ತಮ ಸೇವೆ ನೀಡುವ ಸರಕಾರಿ ಉದ್ಯೋಗಿಗಳನ್ನು ಗುರುತಿಸಿ, ಪತ್ರಿಕೆಯಲ್ಲಿ ನಿರಂತರ ಪ್ರಕಟಿಸಲಾಗಿತ್ತು. ಬೆಂಗಳೂರು, ದೆಹಲಿಗಳಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸಲಾಗಿತ್ತು. ಒಟ್ಟಿನಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧದ ವಾತಾವರಣ ಜಿಲ್ಲೆಯಾದ್ಯಂತ ಮೂಡಲು ಆಂದೋಲನ ಕಾರಣವಾಗಿತ್ತು. ಇದು ರಾಜ್ಯದ ಗಮನ ಸೆಳೆದಿತ್ತು.

ಈಗ ರಾಜ್ಯ ಸರಕಾರವೇ ಸರಕಾರಿ ಅಧಿಕಾರಿಗಳು ಫಲಕ ಅಳವಡಿಸಬೇಕೆಂಬ ಆದೇಶ ನೀಡಿದೆ. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್‌ರವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ಸೂಚನೆ ನೀಡಿದ್ದಾರೆ.

ಸಿಟಿಜನ್ ಎನ್‌ಕ್ವಯರಿ ಕೌನ್ಸಿಲ್ ಮತ್ತು ಸಿಇಒ ಟ್ರಸ್ಟ್ ವತಿಯಿಂದ ಸ್ವೀಕೃತ ವಾಗಿರುವ ದಿನಾಂಕ 12.8.2022ರ ಪತ್ರದಲ್ಲಿ ಸದರಿ ಸಂಸ್ಥೆಯು ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನ 2.10.2022 ರಿಂದ 20.10.2022ರ ವರೆಗೆ ಹಮ್ಮಿಕೊಂಡಿದ್ದು, ಸದರಿ ಸಂಸ್ಥೆಯು ತಯಾರು ಮಾಡಿಸಿರುವ ‘ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ. ನಾನು ಭ್ರಷ್ಟ ಅಧಿಕಾರಿಯಾಗಲಾರೆ‘ ಎಂಬ ಶೀರ್ಷಿಕೆಯ ನಾಮಫಲಕವನ್ನು ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅಳವಡಿಸಲು ಆದೇಶ ಮತ್ತು ಸುತ್ತೋಲೆಯನ್ನು ಹೊರಡಿಸುವಂತೆ ಮನವಿ ಮಾಡಿಕೊಂಡಿರುತ್ತಾರೆ. ಸದರಿ ಮನವಿ ಸ್ವಯಂ ವೇದ್ಯವಾಗಿದ್ದು, ಈ ಟಿಪ್ಪಣಿಯೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿದೆ” ಎಂದು ಮಂಜುನಾಥ ಪ್ರಸಾದರು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಈ ರೀತಿ ಫಲಕ ಅಳವಡಿಕೆಯೂ ಪರಿಣಾಮಕಾರಿಯಾಗಿದೆ. ಆದರೆ ಸುದ್ದಿಯ ಆಂದೋಲನ ಇದಕ್ಕಿಂತಲೂ ಒಂದು ಹೆಜ್ಜೆ ಮುಂದಿದೆ. ‘ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರದ ಜತೆಗೆ ಉತ್ತಮ ಸೇವೆಗೆ ಪುರಸ್ಕಾರ’ ಯೋಜನೆ ಸುದ್ದಿಯದಾಗಿದೆ. ಲಂಚ ಪಡೆಯದಿರುವುದು ಎಷ್ಟು ಮುಖ್ಯವೋ- ಜನರಿಗೆ ಉತ್ತಮ ರೀತಿಯಲ್ಲಿ ಸೇವೆಗೆ ನೀಡುವುದೂ ಅಷ್ಟೇ ಮುಖ್ಯವಾಗಿರುವುದರಿಂದ ಉತ್ತಮ ಸೇವೆಗೆ ಪುರಸ್ಕಾರ ಹೆಜ್ಜೆ ಪರಿಣಾಮಕಾರಿಯಾಗುತ್ತದೆ ಎಂದು ‘ಸುದ್ದಿ’ ಭಾವಿಸುತ್ತದೆ. ಈ ವಿಷಯ ಚುನಾವಣಾ ವಿಷಯವಾಗಿ, ಜನ ಸ್ವಾಂತಂತ್ರ್ಯದ ಜನಾಂದೋಲನವಾಗಿ ಪರಿಣಮಿಸಬೇಕೆಂಬ ಉದ್ದೇಶದಿಂದ ಇದೇ ಅ.2ರಂದು ಗಾಂಧಿಜಯಂತಿಯಿಂದ ಮುಂದಿನ ಗಣರಾಜ್ಯೋತ್ಸವದ ದಿನವಾದ ಜ.26ರ ವರೆಗೆ ಇದನ್ನು ತಾಲೂಕು, ಜಿಲ್ಲೆ, ರಾಜ್ಯಾದ್ಯಾಂತ ಜನಾಂದೋಲನವಾಗಿ ವಿಸ್ತರಿಸಲು ಸುದ್ದಿ ಜನಾಂದೋಲನ ವೇದಿಕೆ ನಿರ್ಧರಿಸಿದೆ. ಅದಕ್ಕೆ ಜನರ ಬೆಂಬಲವನ್ನು ಯಾಚಿಸುತ್ತಿದೆ.

LEAVE A REPLY

Please enter your comment!
Please enter your name here