ಅ.26: ದೀಪಾವಳಿಯಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯಗಳಲ್ಲಿ ಗೋಪೂಜೆ ನಡೆಸುವಂತೆ ಆದೇಶ

0

ಪುತ್ತೂರು : ದೀಪಾವಳಿ (ಬಲಿಪಾಡ್ಯಮಿ) ಹಬ್ಬದ ದಿನದಂದು ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯಗಳಲ್ಲಿ ಗೋಪೂಜೆ ನಡೆಸುವಂತೆ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಆದೇಶಿಸಿದ್ದಾರೆ.
ಹಿಂದೂ ಧರ್ಮದಲ್ಲಿ ಗೋವು (ಹಸು)ಗಳಿಗೆ ತಾಯಿಯ ಸ್ಥಾನವನ್ನು ನೀಡಿದ್ದು, ಗೋಮಾತೆ ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದ ಪುರಾಣ ಉಪನಿಷತ್ತುಗಳಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವಿದೆ. ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುವುದರ ಜೊತೆಗೆ ವಾಸ್ತು ದೋಷವು ನಿವಾರಣೆಯಾಗುತ್ತದೆ ಎಂಬ ಬಲವಾದ ನಂಬಿಕೆ ನಮ್ಮ ಸಮಾಜದಲ್ಲಿದೆ.
ಅನಾದಿ ಕಾಲದಿಂದಲೂ ಹಿಂದೂ ಧರ್ಮದವರು ಭಾರತ ದೇಶದಲ್ಲಿ ಗೋಮಾತೆಯನ್ನು ಕಾಲಕಾಲಕ್ಕೆ ಅನುಗುಣವಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ಹಿಂದುಗಳು ದೀಪಾವಳಿಯ (ಬಲಿಪಾಡ್ಯಮಿಯ) ದಿನದಂದು ಗೋವುಗಳಿಗೆ ಸ್ನಾನ ಮಾಡಿಸಿ ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಸಿಹಿ ತಿನಿಸುಗಳನ್ನು ನೀಡಿ / ಕೊಟ್ಟು ಪೂಜಾದಿಗಳನ್ನು ನಡೆಸಿಕೊಂಡು ಬರುತ್ತಿರುವುದನ್ನು ಈಗಲೂ ಕಾಣಬಹುದಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ಸಹ ಗೋಪೂಜೆಯನ್ನು ಬಲಿಪಾಡ್ಯಮಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಮುಂದಿನ ಪೀಳಿಗೆಗೆ ಗೋವುಗಳ ಪೂಜೆಯನ್ನು ಪರಿಚಯಿಸಿ ಸತ್ಸಂಪ್ರದಾಯ ಮುಂದುವರೆಸುವ ದೃಷ್ಟಿಯಿಂದ ವರ್ಷದಲ್ಲಿ ಒಂದು ದಿನವಾದರೂ ಗೋವುಗಳ ಪೂಜೆಯನ್ನು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ದೇವಾಲಯಗಳಲ್ಲಿ, ಸಂಸ್ಥೆಗಳಲ್ಲಿ ದೀಪಾವಳಿ-ಬಲಿಪಾಡ್ಯಮಿ ದಿನದಂದು ಕಡ್ಡಾಯವಾಗಿ ನಡೆಸಿ ಸನಾತನ ಹಿಂದೂ ಧರ್ಮದ ಗೋಪೂಜಾ ವಿಧಿ-ವಿಧಾನಗಳ ಸಂಪುದಾಯವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ದೀಪಾವಳಿಯ ಬಲಿ ಪಾಡ್ಯಮಿಯ ಹಬ್ಬದ ದಿನದಂದು ಗೋಪೂಜೆ ನಡೆಸಿ ಜಾರಿಗೊಳಿಸುವುದು ಸೂಕ್ತ/ ಶಾಸ್ತ್ರಸಮ್ಮತವೂ ಆಗಿರುತ್ತದೆ. ಕಳೆದ ವರ್ಷ ಆಚರಿಸಿರುವಂತೆ ಪ್ರಸ್ತಕ ಸಾಲಿನಲ್ಲಿ ಅ.೨೬ರಂದು ದೀಪಾವಳಿ ಬಲಿಪಾಡ್ಯಮಿ ದಿನದಂದು ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು ಪೂಜಿಸುವ ವಿಚಾರವಾಗಿ ಆ ದಿನ ಗೋವುಗಳಿಗೆ ಸ್ನಾನ ಮಾಡಿಸಿ ದೇವಾಲಯಕ್ಕೆ ಕರೆತಂದು ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಬಾಳಹಣ್ಣು, ಸಿಹಿ ತಿನಿಸು ಮುಂತಾದ ಗೋಗ್ರಾಸವನ್ನು ಹಸುವಿಗೆ ನೀಡಿ ತಿನಿಸಿ ಧೂಪ, ದೀಪಗಳಿಂದ ಪೂಜಿಸಿ ನಮಸ್ಕರಿಸುವ ವ್ಯವಸ್ಥೆಯನ್ನು ಮಾಡುವ ಮೂಲಕ ಸದರಿ ದಿನದಂದು ಸಂಜೆ 5.30ರಿಂದ 6.30ರವರೆಗೆ ಗೋಧೂಳಿ+ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮ ನಡೆಸಬೇಕು. ಈ ಸಂಬಂಧ ಭಕ್ತಾಧಿಗಳ/ ಸಾರ್ವಜನಿಕರ ಮಾಹಿತಿಗಾಗಿ ದೇವಸ್ಥಾನಗಳ ಸೂಚನಾ ಫಲಕಗಳಲ್ಲಿ /ಸ್ಥಳೀಯ ಮಾಧ್ಯಮಗಳಲ್ಲಿ ಪ್ರಚುರಪಡಿಸುವುದು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಈ ವಿಶೇಷ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಅವರುಗಳ ಸಹಕಾರ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here