34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ಮತ್ತು ಕಟ್ಟಡ ತೆರಿಗೆ ಪರಿಷ್ಕರಣೆ ವಿಶೇಷ ಗ್ರಾಮ ಸಭೆ

0

೦ ಅಳತೆ ಮಾಡಿ ತೆರಿಗೆ ಹಾಕುವುದಕ್ಕೆ ಆಕ್ಷೇಪ.

೦ ಹಳೆ ಮನೆಗಳಿಗೆ 5 ಶೇಕಡಾ ಹೆಚ್ಚಳಕ್ಕೆ ಸಮ್ಮತಿ

ಉಪ್ಪಿನಂಗಡಿ: 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ಮತ್ತು ಕಟ್ಟಡ ತೆರಿಗೆ ಪರಿಷ್ಕರಣೆ ವಿಶೇಷ ಗ್ರಾಮ ಸಭೆ ಅ. 20ರಂದು ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಎನ್. ಅಧ್ಯಕ್ಷತೆಯಲ್ಲಿ ಜರಗಿತು.
ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ತೆರಿಗೆ ಪರಿಷ್ಕರಣೆ ಬಗೆಗಿನ ಸರ್ಕಾರಿ ಮಾರ್ಗಸೂಚಿ ಓದಿ ಹೇಳುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ತೆರಿಗೆ ಪರಿಷ್ಕರಣೆಗೆ ನಮ್ಮ ಆಕ್ಷೇಪ ಇದೆ, ನಾವುಗಳು ಈಗಾಗಲೇ ಬೇರೆ ಬೇರೆ ರೀತಿಯಲ್ಲಿ ತೆರಿಗೆ ಸಲ್ಲಿಕೆ ಮಾಡುತ್ತಿದ್ದು, ಇದೀಗ ತೆರಿಗೆ ಪರಿಷ್ಕರಣೆ ಮಾಡಿದರೆ ಅದು ನಮಗೆ ಹೊರೆ ಆಗಲಿದೆ ಎಂದರು.
ಆಗ ಪಿಡಿಒ ಸತೀಶ್ ಬಂಗೇರ ಪ್ರತಿಕ್ರಿಯಿಸಿ ಇಲ್ಲಿ 2014ರಲ್ಲಿ ತೆರಿಗೆ ಪರಿಷ್ಕರಣೆ ಆಗಿದ್ದು, ತದ ನಂತರ ಆಗಿರುವುದಿಲ್ಲ, ಬಹಳಷ್ಟು ಪಂಚಾಯಿತಿಯಲ್ಲಿ ಈಗಾಗಲೇ ಆಗಿರುತ್ತದೆ. ಆದ ಕಾರಣ ಸರ್ಕಾರಿ ಆದೇಶದಂತೆ ಪರಿಷ್ಕರಣೆ ಮಾಡಬೇಕಾಗುತ್ತದೆ ಎಂದರು.

ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ನಾವುಗಳು ಈಗಾಗಲೇ ನೀರಿನ ಧರ ಪರಿಷ್ಕರಣೆಗೆ, ತ್ಯಾಜ್ಯ ವಿಲೇವಾರಿಗೆ ಪಂಚಾಯಿತಿಯ ಬೇಡಿಕೆಯಂತೆ ಸ್ಪಂಧಿಸಿದ್ದೇವೆ. ಆದರೆ ಇದೀಗ ತೆರಿಗೆ ಪರಿಷ್ಕರಣೆಗೆ ನಮ್ಮ ಸಂಪೂರ್ಣ ವಿರೋಧ ಇದೆ, ಈ ಬಗ್ಗೆ ನಿರ್ಣಯ ಬರೆದು ಸರ್ಕಾರಕ್ಕೆ ಕಳುಹಿಸಿಕೊಡಿ, ಸಭೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದರು.
ಆಗ ಪಿಡಿಒ. ಮತ್ತೆ ಪ್ರತಿಕ್ರಿಯಿಸಿ ಇದು ಅಸಾಧ್ಯ, ಮನೆ ಅಳತೆ ಮಾಡಿ ತೆರಿಗೆ ನಿಗಧಿಪಡಿಸಲಾಗುವುದು. ಪರಿಷ್ಕರಿಸಿದ ತೆರಿಗೆಯ ಮಾಹಿತಿಯನ್ನು ಪಂಚಾಯಿತಿಯಲ್ಲಿ ಪ್ರಕಟಿಸಲಾಗುವುದು, ಆ ಸಂದರ್ಭದಲ್ಲಿ ಆಕ್ಷೇಪವನ್ನು ಸೂಚಿಸಬಹುದು ಎಂದರು.
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇದಕ್ಕೆ ನಮ್ಮ ಆಕ್ಷೇಪ ಇದೆ, ಅಳತೆ ಮಾಡುವುದಕ್ಕೆ ನಮ್ಮ ಸಹಕಾರ ಇಲ್ಲ ಎಂದು ಸಭೆ ಬಹಿಷ್ಕರಿಸಲು ಮುಂದಾದ ಗ್ರಾಮಸ್ಥರು ಅಧ್ಯಕ್ಷರನ್ನು ಉದ್ದೇಶಿಸಿ, “ತೆರಿಗೆ ಪರಿಷ್ಕರಣೆ ಮಾಡುವುದರಿಂದ ನಮಗೆ ಹೊರೆ ಆಗಲಿದೆ, ಈಗ ಪಾವತಿಸುತ್ತಿರುವ ತೆರಿಗೆ ಸರಿಯಾಗಿಯೇ ಇದೆ, ಯಥಾಸ್ಥಿತಿ ಕಾಯ್ದುಕೊಂಡು ನಿರ್ಣಯ ಮಾಡುವಂತೆ” ಕೋರಿದರು.


ಪಂಚಾಯಿತಿ ಸಭೆಯಲ್ಲಿಯೂ ಆಕ್ಷೇಪ ಮಾಡಿದ್ದೇವೆ
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಮಾತನಾಡಿ ತೆರಿಗೆ ಪರಿಷ್ಕರಣೆ ಮಾಡುವುದಕ್ಕೆ ಪಂಚಾಯಿತಿ ಸಭೆ ಸಮ್ಮತಿ ನೀಡಲಿಲ್ಲ, ಸಭೆಯಲ್ಲಿ ಪಿಡಿಒ. ವಿಷಯ ಪ್ರಸ್ತಾಪಿಸಿದಾಗ ನಮ್ಮ ಆಕ್ಷೇಪವನ್ನು ತಿಳಿಸಿ, ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ತೆರಿಗೆ ಪರಿಷ್ಕರಣೆ ಮಾಡುವ ಬಗ್ಗೆ ತೀರ್ಮಾನಿಸಿದ್ದೇವೆ. ಅದರಂತೆ ಗ್ರಾಮಸ್ಥರ ಸಭೆ ಕರೆಯಲಾಗಿದೆ. ಇದೀಗ ನಿಮ್ಮ ವಿರೋಧವನ್ನು ಲೆಕ್ಕಿಸದೆ ತೆರಿಗೆ ಪರಿಷ್ಕರಣೆ ಮಾಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ, ಆದರೆ ಅಭಿವೃದ್ಧಿಯ ದೃಷ್ಠಿಯಿಂದ ಕನಿಷ್ಠ ಶೇಕಡಾವಾರು ಏರಿಕೆ ಮಾಡಬೇಕಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು ಹಳ್ಳಿಯ ಮನೆಗಳನ್ನು ಅಳತೆ ಮಾಡುವಂತಿಲ್ಲ, ಈಗ ಇರುವ ಹಳೆ ಮನೆಗಳಿಗೆ ಶೇಕಡಾ 5ರಂತೆ ಏರಿಕೆ ಮಾಡಬಹುದಾಗಿದೆ ಎಂದರು. ಅದರಂತೆ ಗ್ರಾಮಸ್ಥರ ಬೇಡಿಕೆಯಂತೆ “ಅಳತೆ ಮಾಡದೆ ಹಳೆ ಮನೆಗಳಿಗೆ ಶೇಕಡಾ 5ರಂತೆ ಏರಿಕೆ ಮಾಡುವುದು, ಇದನ್ನು ಸಾಮಾನ್ಯ ಸಭೆಯಲ್ಲಿ ಇಟ್ಟು” ತೀರ್ಮಾನ ಮಾಡುವುದಾಗಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶೇಕಬ್ಬ ಹಾಜಿ, ಅಸ್ಕರ್ ಆಲಿ, ಅಮಿತಾ ಹರೀಶ್, ಮಾಜಿ ಸದಸ್ಯರಾದ ಮಾರ್ಕ್ ಮಸ್ಕರೇನಸ್, ಅನಿ ಮೆನೇಜಸ್, ಗ್ರಾಮಸ್ಥರಾದ ಖಲಂದರ್, ಸದಾನಂದ, ಸಿಪ್ರಿಯಾನ್, ಪ್ರವೀಣ್ ಸಿಕ್ವೇರಾ, ನಾಗರಾಜ, ಇಬ್ರಾಹಿಂ, ಚಂದ್ರಹಾಸ ಶೆಟ್ಟಿ ಚರ್ಚೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ  ಸ್ವಪ್ನಾ, ಸದಸ್ಯರಾದ ರಮೇಶ್ ನಾಯ್ಕ್, ವಿಜಯಕುಮಾರ್, ಹರೀಶ್ ದರ್ಬೆ, ತುಳಸಿ, ರತ್ನಾವತಿ, ಗೀತಾ, ಸುಜಾತ ರೈ ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ಸ್ವಾಗತಿಸಿ, ಲೆಕ್ಕ ಸಹಾಯಕ ದೇವಪ್ಪ ನಾಯ್ಕ್ ವಂದಿಸಿದರು.

LEAVE A REPLY

Please enter your comment!
Please enter your name here