“ಪೋಷಕರು – ಆಡಳಿತಮಂಡಳಿ; ಶಿಕ್ಷಕರು – ವಿದ್ಯಾರ್ಥಿಗಳೇ ಶಿಕ್ಷಣದ ಕೊಂಡಿಗಳು”

0

ಪುತ್ತೂರು: ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಾಲಾ ಸಿಬ್ಬಂದಿಯೊಂದಿಗೆ ಪೋಷಕರ ಪಾತ್ರವೂ ಪ್ರಾಮುಖ್ಯವಾದುದು ಎಂಬ ನಿಟ್ಟಿನಲ್ಲಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿ. ಬಿ. ಎಸ್. ಇ) ಯ ಆಡಳಿತ ಮಂಡಳಿಯಿಂದ, ಇದೇ ಅಕ್ಟೋಬರ್ 22 ರಂದು, ಕಾಲೇಜಿನ ಆವರಣದಲ್ಲಿರುವ ನೇತಾಜಿ ಸಭಾಭವನದಲ್ಲಿ ಶಾಲಾ ಶಿಕ್ಷಕ-ರಕ್ಷಕ ಸಂಘದ ಅರ್ಧವಾರ್ಷಿಕ ಸಭೆಯನ್ನು ಆಯೋಜಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ವಸಂತಿ .ಕೆ ಅವರು ವಹಿಸಿ, ಶಾಲೆಯಲ್ಲಿ ನಡೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಕುರಿತು ಮಾಹಿತಿ ನೀಡುತ್ತಾ, ಪೋಷಕರು, ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೇ ಶಿಕ್ಷಣದ ಕೊಂಡಿಗಳು ಎಂಬುದಾಗಿ ನುಡಿದರು.

ಮುಖ್ಯ ಅತಿಥಿಗಳಾಗಿ ವಿವೇಕಾನಂದ ಪದವಿ ಕಾಲೇಜು (ಸ್ವಾಯತ್ತೆ) ಇದರ ಪ್ರಾಂಶುಪಾಲರಾದ ಶ್ರೀ ವಿಷ್ಣು ಗಣಪತಿ ಭಟ್ ಅವರು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಾಲೆಯ ಜೊತೆಗೆ ಪೋಷಕರ ಉತ್ತಮ ಬಾಂಧವ್ಯವನ್ನು ಬೆಳೆಸುವುದು ಹೇಗೆ ಎಂಬುದನ್ನು ಪರಿಣಾಮಕಾರಿಯಾಗಿ ಅರಿವು ಮೂಡಿಸಿದರು. ಪತ್ರಿಕೆ ಓದುವಲ್ಲಿ ಮಕ್ಕಳಿಗೆ ಪ್ರೋತ್ಸಾಹವಿತ್ತು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಕರೆ ನೀಡಿದರು. ಮಾತ್ರವಲ್ಲದೆ, ಮಕ್ಕಳ ಆಂತರಿಕ ಕಲೆಯನ್ನು ಬೆಳೆಸಲು ಪೂರಕವಾದ ವಾತಾವರಣ ಹಾಗೂ ಶಿಕ್ಷಣವನ್ನು ನೀಡುವುದು ಪೋಷಕರ ಆದ್ಯ ಕರ್ತವ್ಯವೆಂದು ನುಡಿದರು.

ಸಮಾರಂಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಭರತ್ ಪೈ ಅವರು, “ಶಿಕ್ಷಣ ಸಂಸ್ಥೆಯ ಕಾರ್ಯವೈಖರಿಯಲ್ಲಿ ಪೋಷಕರೂ ಸಮಪಾಲುದಾರರಾಗಿವರು” ಎಂದರು.

ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶಂಕರಿ ಶರ್ಮ ಅವರು “ಆಧುನಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವೂ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ” ಎಂಬುದಾಗಿ ನುಡಿದರು.

ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಸಿಂದು ವಿ.ಜಿ  ಪ್ರಾಸ್ತಾವಿಕ ನುಡಿಗಳನ್ನಾಡಿ, ಶಾಲೆಯ ಎಲ್ಲ ಕಾರ್ಯಚಟುವಟಿಕೆಗಳನ್ನು ಪ್ರಸ್ತುತ ಪಡಿಸಿದರು.

ಶಿಕ್ಷಕ-ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ|ದೀಪಕ್ ಕೆ. ಬಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿ, “ಪೋಷಕರಾದ ನಾವೆಲ್ಲರೂ ವಿವೇಕಾನಂದ ಸಿ. ಬಿ. ಎಸ್. ಇ ಶಾಲೆಯ ನಿರಂತರ ಪ್ರೋತ್ಸಾಹಕರಾಗಿರುತ್ತೇವೆ.” ಎಂದು ಭರವಸೆ ನೀಡಿದರು.

ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ನಿರಂತರ ಪ್ರೋತ್ಸಾಹವನ್ನೀಯುವ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಯೋಗಶಾಲೆಯ ಬೋಧಕರಾದ ಶ್ರೀಯುತ ವೆಂಕಟೇಶ್ ಅವರನ್ನು ಗೌರವಿಸಲಾಯಿತು.

ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. 

LEAVE A REPLY

Please enter your comment!
Please enter your name here