ಮೆದುಳು ಜ್ವರ ಲಸಿಕಾ ಅಭಿಯಾನಕ್ಕೆ ಇಲಾಖೆಗಳ ಪೂರ್ಣ ಸಹಕಾರ ಇರಬೇಕು

0

ಪುತ್ತೂರು, ಕಡಬ ಲಸಿಕಾ ಕಾರ್ಯಪಡೆಯ ಚಾಲನಾ ಸಮಿತಿ ಸಭೆಯಲ್ಲಿ ಎಸಿ ಗಿರೀಶ್ ನಂದನ್

ಪುತ್ತೂರು: ಮೆದುಳು ಜ್ವರ ವೈರಾಣುವಿನಿಂದ ಬರುವ ರೋಗವಾಗಿದ್ದು, ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ. ಇದನ್ನು ತಡೆಗಟ್ಟಲು  1- 15 ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಅಭಿಯಾನ ಆಯೋಜಿಸಲಾಗಿದ್ದು ದ.ಕ. ಜಿಲ್ಲೆಯಲ್ಲಿ ಡಿ.5 ಕ್ಕೆ ಅಭಿಯಾನ ನಡೆಯಲಿದೆ. ಈ ಸಂದರ್ಭ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಲಾಖೆಗಳು ಪೂರ್ಣ ಸಹಕಾರ ನೀಡಬೇಕೆಂದು ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಹೇಳಿದರು.
ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ಎಸಿ ನ್ಯಾಯಾಲಯದಲ್ಲಿ ನ.7 ರಂದು ನಡೆದ ಪುತ್ತೂರು ಮತ್ತು ಕಡಬ ತಾಲೂಕಿನ ಲಸಿಕಾ ಕಾರ್ಯಪಡೆಯ ಚಾಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಕ್ಷಣ ಇಲಾಖೆ, ಗ್ರಾ.ಪಂಗಳು ಆಯಾ ಪ್ರದೇಶದ ಮಕ್ಕಳಿಗೆ ಲಸಿಕೆ ಸಿಗುವಂತೆ ವ್ಯವಸ್ಥೆ ಮಾಡುವುದು. ಈ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಯರು ಮತ್ತು ಇತರ ಇಲಾಖೆಗಳು ಹೊಂದಾಣಿಕೆಯಿಂದ ಗುರಿ ಸಾಧಿಸುವ ಕೆಲಸ ಮಾಡಬೇಕೆಂದರು.

ಯಾವುದೇ ಮಗು ಲಸಿಕೆಯಿಂದ ವಂಚಿತರಾಗಬಾರದು:
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ವೈರಸ್ ಹರಡುವ ಲಕ್ಷಣ ಮತ್ತು ಅಭಿಯಾನದ ಹೇಗೆ ಆಯೋಜಿಸಲಾಗಿದೆ ಎಂಬ ಕುರಿತು ಮಾಹಿತಿ ನೀಡಿದರು. ಮೆದುಳಿಗೆ ಸೋಂಕು ತಗುಲಿದಾಗ ಕೆಲವರಿಗೆ ನರದೌರ್ಬಲ್ಯ, ಬುದ್ಧಿ ಮಾಂದ್ಯತೆ ಉಂಟಾಗುವ ಸಾಧ್ಯತೆ ಇರುತ್ತದೆ. ಮೆದುಳು ಜ್ವರದಿಂದ ಆಗುವ ತೊಂದರೆ ತಪ್ಪಿಸಲು 1 ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ನೀಡಿ ಗುರಿ ಸಾಧಿಸಬೇಕು. ಮೊದಲ ವಾರದಲ್ಲಿ ಎರಡು ತಾಲೂಕಿನ ಎಲ್ಲಾ ಶಾಲೆಗಳ ಮಕ್ಕಳಿಗೆ ಲಸಿಕೆ ನೀಡಬೇಕು. 2 ಮತ್ತು 3 ನೇ ವಾರಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ, ಅಂಗನವಾಡಿ, ಹೊರ ಜಿಲ್ಲೆಯಿಂದ ಬಂದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಬೇಕು. ಆದ್ದರಿಂದ ಶಾಲೆಗಳಲ್ಲಿ ಒಬ್ಬ ವ್ಯಾಕ್ಸಿನೇಟರ್-200 ಮಕ್ಕಳಿಗೆ, ಸಮುದಾಯದಲ್ಲಿ ಒಬ್ಬ ವ್ಯಾಕ್ಸಿನೇಟರ್-150 ಮಕ್ಕಳಿಗೆ ಲಸಿಕೆ ನೀಡುವಂತೆ ಕ್ರಿಯಾ ಯೋಜನೆ ಸಿದ್ದಪಡಿಸಿ. ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಆಯಾ ವೈದ್ಯಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಸಲಹೆ ನೀಡಿದರು.

ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ:
ಮೆದುಳು ಜ್ವರದ ವೈರಾಣುಗಳನ್ನು ಹೊಂದಿದ ಹಂದಿ, ಕೊಕ್ಕರೆಗೆ ಕಚ್ಚಿದ ಕ್ಯೂಲೇಕ್ಸ್ ಜಾತಿಯ ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗವು ಹರಡುತ್ತದೆ. ಈ ರೋಗದ ಲಕ್ಷಣಗಳೆಂದರೆ ಪ್ರಾರಂಭದಲ್ಲಿ ವಿಪರೀತ ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆಸುತ್ತುವಿಕೆ, ಮೈನಡುಕ, ಮತ್ತು ಜ್ಞಾನ ತಪ್ಪುವುದು ಇಂತಹ ಸಂದರ್ಭಗಳಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಆದರೆ ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಹಾಗಾಗಿ ಲಸಿಕೆ ಅಗತ್ಯವಾಗಿ ತೆಗೆದು ಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಹೇಳಿದರು. ತಹಸೀಲ್ದಾರ್ ನಿಸರ್ಗಪ್ರಿಯ, ಕಡಬ ತಹಶೀಲ್ದಾರ್ ರಮೇಶ್ ಬಾಬು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕುಸುಮಾಧರ್, ಪ್ರಭಾರ ಶಿಶು ಅಭಿವೃದ್ಧಿಯೋಜನಾಧಿಕಾರಿ ಭಾರತಿ ಜೆ, ಸಮಜ ಕಲ್ಯಾಣ ಇಲಾಖೆಯ ಕೃಷ್ಣ, ಸರಕಾರಿ ಆಸ್ಪ್ರೆಯ ಆರೋಗ್ಯಾ ರಕ್ಷಾ ಸಮಿತಿ ಸದಸ್ಯ ಡಾ. ಕೃಷ್ಣಪ್ರಸನ್ನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಪರವಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರತ್ನಕುಮಾರಿ, ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ, ಹಿರಿಯ ಆರೋಗ್ಯ ಮೇಲ್ವಿಚಾರಕಿ ಸುಲೇಖಾ, ಕಡಬ ಆಸ್ಪತ್ರೆಯ ಡಾ. ಸುಚಿತ್ರಾ ರಾವ್, ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಶ್ಮಿತಾ ಪ್ರಭು, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಶಿಶಿರಾ, ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಚಂದ್ರಶೇಖರ್, ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಕೃಷ್ಣಾನಂದ, ಈಶ್ವರಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನಿಖಿಲ್, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಭವ್ಯ, ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ ಸಾಜಿದ, ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನಮಿತಾ, ಪಾಲ್ತಾಡಿಯ ಡಾ. ಮಧುಶ್ರೀ, ಪುತ್ತೂರು ಸರಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಪ್ರತ್ಯುಶ, ಕೊಳ್ತಿಗೆಯ ಡಾ. ಅಮಿತ್, ತಾಲೂಕು ಆಶಾ ಮೆಲ್ವಿಚಾರಕಿ ಹರಿಣಿ, ಕಾರ್ಯಕ್ರಮ ಮೆನೇಜರ್ ಉಲ್ಲಾಸ್, ರವಿಶಂಕರ್, ಪುತ್ತೂರು ಸಿರತ್ ಪ್ರಧಾನ ಕಾರ್ಯದರ್ಶಿ ಬಿ ಎ ಶಕೂರ್ ಹಾಜಿ ಕಲ್ಲೇಗ, ಮುಸ್ಲಿಂ ಯುವಜನ ಪರಿಷತ್‌ನ ಅಶ್ರಫ್ ಕಲ್ಲೇಗ, ಆರ್‌ಟಿಒ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here