ಐಒಬಿ ರಾಮಕುಂಜ ಶಾಖಾ ವ್ಯವಸ್ಥಾಪಕನಿಂದಲೇ ನಕಲಿ ಲೋನ್ ಖಾತೆ ಸೃಷ್ಟಿಸಿ ಹಣ ದುರುಪಯೋಗ : ಬ್ಯಾಂಕ್‌ನಿಂದ ಕಡಬ ಠಾಣೆಗೆ ದೂರು; ಕೇಸು ದಾಖಲು

0

ರಾಮಕುಂಜ: ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ರಾಮಕುಂಜ ಶಾಖೆಯಲ್ಲಿ ವ್ಯವಸ್ಥಾಪಕನಾಗಿದ್ದ ವೇಳೆ ನಕಲಿ ಲೋನ್ ಖಾತೆಗಳನ್ನು ತೆರೆದು ಯಾವುದೇ ದಾಖಲೆಯಿಲ್ಲದೆ ಆ ಖಾತೆಗಳಿಗೆ ಹಣ ಸಂದಾಯ ಮಾಡಿ ಬ್ಯಾಂಕ್‌ನ ಹಣ ದುರುಪಯೋಗ ಮಾಡಿರುವುದಾಗಿ ಆರೋಪಿಸಿ ಬ್ಯಾಂಕ್‌ನ ಸೀನಿಯರ್ ರೀಜನಲ್ ಮ್ಯಾನೇಜರ್‌ರವರು ನೀಡಿದ ದೂರಿನಂತೆ ಚೇತನ್ ಶರ್ಮಾ ಎಂಬವರ ವಿರುದ್ಧ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಚೇತನ್ ಶರ್ಮಾ ಈ ಹಿಂದೆ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ರಾಮಕುಂಜ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕನಾಗಿದ್ದ ವೇಳೆ ಮಹೇಶ್, ಸವಿತ ಶರ್ಮಾ, ರೇಣುಕ, ಅಕ್ಷಯ್ ಎಸ್, ನಿಖಿತಾ ಎಸ್, ರಾಹುಲ್ ಎಸ್, ಉಮಾ ಚತುರ್ವೇದಿ ಎಂಬವರ ಹೆಸರಿನಲ್ಲಿ ಒಟ್ಟು 21 ನಕಲಿ ಲೋನ್ ಖಾತೆಗಳನ್ನು ತೆರೆದು ಸದ್ರಿ ಖಾತೆಗಳಿಗೆ 71,29,350 ರೂಪಾಯಿಯನ್ನು ಯಾವುದೇ ಕೆವೈಸಿ ಪ್ರಕ್ರಿಯೆ ದಾಖಲೆ, ಖಾತೆ ತೆರೆಯುವ ದಾಖಲೆಗಳನ್ನು ಪಡೆಯದೇ ಸಾಲ ಮಂಜೂರು ಮಾಡಿ ಸದ್ರಿ ಖಾತೆಗಳಿಗೆ ಹಣ ಜಮಾವಣೆ ಮಾಡಿ ತದನಂತರ ಬೇರೆ ಬೇರೆ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುತ್ತಾರೆ. ಬಳಿಕ 21 ನಕಲಿ ಲೋನ್ ಖಾತೆಗಳಿಗೆ ಆರೋಪಿ ಚೇತನ್ ಶರ್ಮಾ 51,31,141 ರೂ. ಜಮೆ ಮಾಡಿರುತ್ತಾರೆ. ಬ್ಯಾಂಕ್ ಆಡಿಟ್ ಸಮಯದಲ್ಲಿ ಆರೋಪಿ ಚೇತನ್ ಶರ್ಮಾ ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ಹಣ ಸಂದಾಯ ಮಾಡಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಚೇತನ್ ಶರ್ಮಾರನ್ನು ಮೇ 19ರಂದು ಅಮಾನತು ಮಾಡಲಾಗಿದೆ. ಆರೋಪಿತನು ತೆರೆದಿದ್ದ ನಕಲಿ ಖಾತೆಗಳಿಂದ 19,98,208 ರೂ. ಲೋನ್ ಬಾಕಿ ಇದೆ. ಆದುದರಿಂದ ನಕಲಿ ಖಾತೆಗಳನ್ನು ತೆರೆದು ಯಾವುದೇ ರೀತಿಯ ಕ್ರಯ, ಆಸ್ತಿಪತ್ರ, ಮೌಲ್ಯಮಾಪನ ವರದಿ, ಕಾನೂನು ಅಭಿಪ್ರಾಯ, ಅಡಮಾನ ತೆಗೆದುಕೊಳ್ಳದೇ ವಸತಿ ಸಾಲ ಮತ್ತು ಭೂಮಿ ಲಕ್ಷ್ಮೀ ಸಾಲ ಸೇರಿದಂತೆ ಇತರೇ ಸಾಲಗಳನ್ನು ಮಂಜೂರು ಮಾಡಿ ಬ್ಯಾಂಕ್‌ನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮಂಗಳೂರು ರೀಜನಲ್ ಸೀನಿಯರ್ ಮೆನೇಜರ್ ಅಮೀತ್ ಕುಮಾರ್ ಎಂಬವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರ ದೂರಿನಂತೆ ಕಡಬ ಠಾಣೆಯಲ್ಲಿ ಕಲಂ: 409, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here