ಸವಣೂರು : ವಿದ್ಯಾರಶ್ಮಿಯಲ್ಲಿ ಡ್ರೋನ್ ಕಾರ್ಯಾಗಾರ

0

ಸವಣೂರು :ಇಲ್ಲಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸವಣೂರು ಮತ್ತು ಆಸುಪಾಸಿನ ಶಾಲೆಗಳ ವಿದ್ಯಾರ್ಥಿಗಳಿಗಾಗಿ ನಡೆದ ಒಂದು ದಿನದ ಡ್ರೋನ್ ತಯಾರಿ ಮತ್ತು ಹಾರಾಟ ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಅವರು ಮಾತನಾಡಿ, ಡ್ರೋನ್ ನಮ್ಮ ಭವಿಷ್ಯದ ಅವಿಭಾಜ್ಯ ಅಂಗವಾಗಲಿದೆ. ಇಂದು ರಕ್ಷಣಾ ಕಾರ್ಯವೂ ಸೇರಿದಂತೆ ಅನೇಕ ಉದ್ದೇಶಗಳಿಗಾಗಿ ಡ್ರೋನ್ ಬಳಕೆ ಆಗುತ್ತಿದ್ದು ಇದರ ಜ್ಞಾನ ಅತಿ ಅಗತ್ಯ ಎಂದರು.

ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಅವರು ಮಾತನಾಡಿ ನಿತ್ಯ ಜೀವನದ ಆಗುಹೋಗುಗಳನ್ನು ಅಭ್ಯಾಸ ಮಾಡಿದರೆ ಅದು ನಮಗೆ ಸಾಕಷ್ಟು ವಿಜ್ಞಾನವನ್ನು ತಿಳಿಸಿಕೊಡುತ್ತದೆ ಎಂದು ಅನೇಕ ಉದಾಹರಣೆಗಳ ಮೂಲಕ ಶಿಬಿರಾರ್ಥಿಗಳ ವಿವರಿಸಿದರು. ವಿದ್ಯಾರಶ್ಮಿಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಸೇರಿದಂತೆ ಎಲ್ಲಾ ಆಧುನಿಕ ವ್ಯವಸ್ಥೆಗಳೂ ಇದ್ದು ಭವಿಷ್ಯದ ಶಿಕ್ಷಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ಇವೆ ಎಂದರು.

ಕಾರ್ಯಾಗಾರಕ್ಕೆ ಭೇಟಿ ನೀಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅವರು ಮಾತನಾಡಿ ಸರ್. ಎಂ. ವಿಶ್ವೇಶ್ವರಯ್ಯನಂತವರು ಸುಮ್ಮನೆ ವಿಜ್ಞಾನಿಗಳಾಗಲಿಲ್ಲ ಬದಲಾಗಿ ಅದು ಸಾಧ್ಯವಾದುದು ಅವರ ಸತತ ಪರಿಶ್ರಮದಿಂದ ಎಂದ ಅವರು, ವಿದ್ಯಾರ್ಥಿಗಳಿಗೆ ಡ್ರೋನ್ ತರಬೇತಿ ಕಾರ್ಯಾಗಾರ ನಡೆಸಿದ ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ಮತ್ತು ಅವರ ತಂಡದ ನಡೆ ಶ್ಲಾಘನಾರ್ಹ ಎಂದರು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ ಅಶ್ರಫ್ ಅವರು ಭೇಟಿ ನೀಡಿದರು.
ವಿಟ್ವಾರ ಟೆಕ್ನೋಲಾಜೀಸ್‌ನ ಸಿದ್ದಾರ್ಥ್ ಶೆಟ್ಟಿ ಮತ್ತು ಧನುಷ್ ಕಜೆಗದ್ದೆ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಸವಣೂರು ಮತ್ತು ಸುತ್ತಲಿನ ಒಟ್ಟು 11 ಶಾಲೆಗಳ ಒಟ್ಟು 192ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿ ಡ್ರೋನ್‌ನ ಕುರಿತಾಗಿ ವಿಸ್ತೃತ ಅನುಭವ ಪಡೆದುಕೊಂಡರು. ಸವಣೂರು ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕಿಶನ್ ಬಿ.ವಿ. ಮತ್ತು ಇತರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಾಗಾರದ ಬಗ್ಗೆ ಅನುಭವ ಹಂಚಿಕೊಂಡರು.
ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ವಿದ್ಯಾರಶ್ಮಿ ವಿದ್ಯಾಲಯದ ಉಪ ಪ್ರಾಂಶುಪಾಲೆ ಶಶಿಕಲಾ ಎನ್.ಜಿ. ಅವರು ಉಪಸ್ಥಿತರಿದ್ದರು.
ವಿದ್ಯಾರಶ್ಮಿ ವಿದ್ಯಾಲುಯದ ಪ್ರಾಚಾರ್ಯ ಸೀತಾರಾಮ ಕೇವಳ ಸ್ವಾಗತಿಸಿ,ವಿದ್ಯಾರ್ಥಿಗಳಾದ ಪ್ರಣವ್ ಕೆ.ಯು. ವಂದಿಸಿದರು. ಸನಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here