ಶಿಕ್ಷಣದೊಂದಿಗೆ ಸಂಸ್ಕಾರ ದೊರೆತಾಗ ಉತ್ಕೃಷ್ಟ ವ್ಯಕ್ತಿತ್ವ ನಿರ್ಮಾಣ: ಆದರ್ಶ ಗೋಖಲೆ
ಪುತ್ತೂರು: ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ. ಶಾಲೆ ಕೇವಲ ಪಠ್ಯ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಂಸ್ಕಾರವನ್ನೂ ಪಡೆದಾಗ ಉತ್ಕೃಷ್ಟ ವ್ಯಕ್ತಿತ್ವ ಪಡೆಯಲು ಸಾಧ್ಯವಾಗುತ್ತದೆ ಎಂದು ವಾಗ್ಮಿ, ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ತರಂಗಿಣೀ 2022-23 – ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೇಶಕ್ಕಾಗಿ ಅನೇಕ ಮಹಾನ್ ನಾಯಕರು ಸಣ್ಣ ವಯಸ್ಸಿನಲ್ಲೇ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟರು. ನಮ್ಮ ದೇಶಕ್ಕೆ ಭವ್ಯ ಪರಂಪರೆಯಿದ್ದು, ದೇಶದ ಆದರ್ಶ ಉಳಿಸಿ ಬೆಳೆಸುವ ಯುವಕರನ್ನು ಸಮಾಜ ಅಪೇಕ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ಯುವಜನತೆ ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆಯುವ ಮೂಲಕ ಭಾರತವನ್ನು ವಿಶ್ವ ಗುರುವನ್ನಾಗಿಸುವ ಭರವಸೆ ಇದೆ. ದೇಶ ಹಾಗೂ ಧರ್ಮದ ಮೇಲಿನ ಕಾಳಜಿಯನ್ನು ಜನತೆ ಮೆರೆಸುವ ಯೋಚನೆ ಮಾಡಬೇಕು. ಮುಖ್ಯವಾಗಿ ಮನೆಯ ಸಂಸ್ಕೃತಿ, ಭಾಷೆ, ಸೊಗಡು, ಆಚರಣೆಗಳು, ಜಾನಪದ ಮೊದಲಾದವುಗಳನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಿದಾಗ ಭಾರತದ ಸಂಸ್ಕೃತಿ, ಪರಂಪರೆ ಮುಂದಿನ ಪೀಳಿಗೆಗೂ ತಿಳಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕಲೆಗಳು ಭಾರತೀಯ ಮೌಲ್ಯಗಳಿಗೆ ಆಸರೆಯಾಗಿದ್ದು, ಮಕ್ಕಳಲ್ಲಿ ಅಡಗಿರುವ ವಿಶೇಷ ಪ್ರತಿಭೆಗಳು ಸೂಕ್ತ ವೇದಿಕೆಯಲ್ಲಿ ಪ್ರದರ್ಶನವಾಗಬೇಕು. ವಿದ್ಯಾರ್ಥಿಗಳು ಪೂರ್ಣ ಮನಸ್ಸಿನಿಂದ ಭಾರತೀಯ ಕಲಾ ಪ್ರಕಾರಗಳ ಕುರಿತು ಅರಿತಾಗ ಅವರ ಚಿಂತನೆಯೂ ಬದಲಾಗುತ್ತದೆ ಎಂದರು.
ದೇಶಕ್ಕೆ ಭವ್ಯ ಕಲೆ, ಸಂಸ್ಕೃತಿಯ ಇತಿಹಾಸವಿದ್ದು ಅದನ್ನು ವಿಶ್ವದಾದ್ಯಂತ ಪಸರಿಸುವ ಕಾರ್ಯ ನಡೆಸಬೇಕಿದೆ. ಇಂದು ಹೊಸವರ್ಷಾಚರಣೆ ನೆಪದಲ್ಲಿ ಜನತೆಯ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಭಾರತೀಯ ವರ್ಷಾಚರಣೆ ಯುಗಾದಿ ಮೂಲಕ ಮನೆ-ಮನ ಬೆಳಗುವ ಕಾರ್ಯ ಆಗಬೇಕು. ಭಾರತೀಯತೆ ಅಳವಡಿಸಿಕೊಂಡಾಗ ಪ್ರತಿಯೊಬ್ಬರೂ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲೆಯ ವಾರ್ಷಿಕ ವಿಶೇಷ ವರದಿಯ ವಿಡಿಯೋ ಪ್ರದರ್ಶನ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಸುರೇಶ್ ಶೆಟ್ಟಿ, ಪ್ರಸನ್ನ ಭಟ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ವಿದ್ಯಾರ್ಥಿ ಪ್ರತಿನಿಧಿಗಳಾದ ಮನ್ವಿತ್ ಎಸ್., ಸಂಸ್ಕೃತಿ ವಿ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಮಾಲತಿ ಡಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಸುಜನಿ ಎಂ. ಬೋರ್ಕರ್ ವಂದಿಸಿದರು.