ಮಾನಸಿಕ ಖಿನ್ನತೆ ಮಹಿಳೆ ಬೆಂಕಿ ಹಚ್ಚಿಕೊಂಡು ಸಾವು

0

ಪುತ್ತೂರು; ಕಳೆದ ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಘಟನೆ ಕುಂಬ್ರದಲ್ಲಿ ನಡೆದಿದೆ.

ಕುಂಬ್ರ ನಿವಾಸಿ ಇಬ್ರಾಹಿಂ ಎಂಬವರ ಪತ್ನಿ ನೆಬಿಸಾ (೬೦) ಎಂಬವರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಮಹಿಳೆ. ಕಳೆದ ೧೫ ವರ್ಷಗಳಿಂದ ಮಾನಸಿಕ ಖಿನ್ನತೆ ಕಾಯಿಲೆಗೆ ಒಳಗಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದಿಂದ ಗಂಭೀರ ಅವಸ್ಥೆಯಲ್ಲಿದ್ದ ಇವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಚಿಕಿತ್ಸೆ ಪಡೆದ ವಾರದ ಬಳಿಕ ಮ.೨೫ ರಂದು ರಾತ್ರಿ ಮನೆಯಿಂದ ಒಬ್ಬಂಟಿಯಾಗಿ ಹೊರಗೆ ಬಂದಿದ್ದ ಇವರು ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಮನೆಯಲ್ಲಿ ಮಕ್ಕಳಿದ್ದರೂ ಈ ಕೃತ್ಯ ಗೊತ್ತಾಗಿರಲಿಲ್ಲ. ಬೆಳಿಗ್ಗಿನ ಜಾವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಕಿ ಹಚ್ಚಿಕೊಂಡ ಪರಿಣಾಮ ಮಹಿಳೆ ಯ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪುತ್ರರಾದ ಸಂಶುದ್ದೀನ್, ಸಮಾಮುದ್ದೀನ್ ಪುತ್ರಿಯರಾದ ಶರೀಫಾ ಮತ್ತು ಹಾಜಿರಾರವರನ್ನು ಅಗಲಿದ್ದಾರೆ. ಶೇಕಮಲೆ ಮಸೀದಿ ವಠಾರದಲ್ಲಿ ಮೃತರ ದಫನ ಕಾರ್ಯ ನಡೆಸಲಾಯಿತು.

ಬೆಳಿಗ್ಗೆಯೇ ವಿಷಯ ಗೊತ್ತಾಗಿದೆ
ಕಳೆದ ಹಲವು ವರ್ಷಗಳಿಂದ ರಾತ್ರಿ ನಿದ್ದೆ ಬಾರದೇ ಇರುವ ಕಾರಣ ನೆಬಿಸಾರವರು ಮನೆಯ ಪಕ್ಕದಲ್ಲೇ ಇರುವ ಕೋಣೆಯಲ್ಲಿ ಇರುತ್ತಿದ್ದರು. ಕೆಲವೊಮ್ಮೆ ಬೀಡಿ ಕಟ್ಟುತ್ತಿದ್ದರು. ಎಲ್ಲಾ ವ್ಯವಸ್ಥೆಗಳಿರುವ ಕೋಣೆಯಲ್ಲೇ ಅವರು ರಾತ್ರಿ ಇದ್ದು ಬೆಳಿಗ್ಗಿನ ಜಾವದ ಬಳಿಕ ನಿದ್ದೆ ಮಾಡುತ್ತಿದ್ದರು ಎನ್ನಲಾಗಿದೆ. ಮಾನಸಿಕ ಖಿನ್ನತೆಯಿರುವ ಕಾರಣ ಅವರಿಗೆ ನಿದ್ದೆ ಬರುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದರು. ಎಲೆ ಅಡಿಕೆ ತಿನ್ನುತ್ತಿದ್ದ ಅವರನ್ನು ಎಲೆ ಅಡಿಕೆ ತಿನ್ನದಂತೆಯೂ ವೈದ್ಯರು ಸಲಹೆ ನೀಡಿದ ಬಳಿಕ ಕಳೆದ ಒಂದು ವಾರದಿಂದ ಎಲೆ ಅಡಿಕೆ ತಿನ್ನುವುದನ್ನು ಬಿಟ್ಟಿದ್ದರು. ಶುಕ್ರವಾರದಂದು ತಡ ರಾತ್ರಿ ಈ ಕೃತ್ಯ ನಡೆಸಿರುವ ಸಾಧ್ಯತೆ ಇದ್ದು ಬೆಳಗ್ಗಿನ ಜಾವದ ತನಕ ಮೃತದೇಹ ಬೆಂಕಿಯಲ್ಲೇ ಇದ್ದ ಕಾರಣ ದೇಹ ಸಂಪೂರ್ಣ ಬೆಂದು ಹೋಗಿತ್ತು. ಬೆಳಿಗ್ಗೆ ಪುತ್ರ ಸಂಶುದ್ದೀನ್ ರವರು ದನದ ಕೊಟ್ಟಿಗೆಯತ್ತ ತೆರಳುವಾಗ ಈ ದೃಶ್ಯ ಅವರ ಕಣ್ಣಿಗೆ ಬಿದ್ದಿದೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಷಯ ತಿಳಿದು ನೂರಾರು ಮಂದಿ ಮೃತರ ಮನೆಗೆ ಆಗಮಿಸಿದ್ದು ಮೃತರ ಅಂತಿಮ ದರ್ಶನ ಪಡೆದರು.

LEAVE A REPLY

Please enter your comment!
Please enter your name here