ಪುತ್ತೂರಿನಲ್ಲಿ ಅಂತರ್ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಪೂರ್ವಭಾವಿ ಸಭೆ

0

 ಪುತ್ತೂರಿನಿಂದ ಪೂರ್ಣ ಸಹಕಾರ- ಸವಣೂರು ಸೀತಾರಾಮ ರೈ

ಜಾಂಬೂರಿಯಿಂದ ಸಂಸ್ಕೃತಿಯ ಅನಾವರಣ- ವಿದ್ಯಾಗೌರಿ

ಪುತ್ತೂರು: ಡಿಸೆಂಬರ್ 21 ರಿಂದ 27ರ ತನಕ ಡಾ. ಮೋಹನ್ ಆಳ್ವರವರ ನೇತೃತ್ವದಲ್ಲಿ ಮೂಡಬಿದ್ರೆಯಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕಾರ್‍ಯಕ್ರಮದ ಬಗ್ಗೆ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯ ಪೂರ್ವಭಾವಿ ಸಭೆಯು ನ. 28 ರಂದು ಪುತ್ತೂರು ದರ್ಭೆ ಪ್ರಶಾಂತ್ ಮಹಲ್‌ನ ಸನ್ನಿಧಿ ಸಭಾಂಗಣದಲ್ಲಿ ಜರಗಿತು.


ಪುತ್ತೂರಿನಿಂದ ಪೂರ್ಣ ಸಹಕಾರ ನಡೆಯಲಿದೆ- ಸವಣೂರು ಸೀತಾರಾಮ ರೈ:

ಸಭೆಯ ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಡಾ.ಮೋಹನ್ ಆಳ್ವರವರ ನೇತೃತ್ವದಲ್ಲಿ ನಡೆಯುವ ಅಂತರ್ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಉತ್ಸವ 7 ದಿನ ಅದ್ದೂರಿಯಾಗಿ ನಡೆಯಲಿದ್ದು, ಪ್ರತಿ ದಿನ ಒಂದು ಲಕ್ಷ ಮಂದಿ ಭಾಗವಹಿಸುವ ಮೂಲಕ ಇಡೀ ಕಾರ್‍ಯಕ್ರಮ ವಿಶೇಷವಾಗಿ ರಂಜಿಸಲಿದೆ. ಈ ಕಾರ್‍ಯಕ್ರಮಕ್ಕೆ ಪುತ್ತೂರು ವ್ಯಾಪ್ತಿಯಿಂದ ಪೂರ್ಣ ರೀತಿಯ ಸಹಕಾರವನ್ನು ನೀಡಲಿದ್ದೇವೆ ಎಂದು ಹೇಳಿ, ಇಲ್ಲಿಂದ ತರಕಾರಿ, ಅಕ್ಕಿ, ತೆಂಗಿನಕಾಯಿಯನ್ನು ದೊಡ್ಡ ಲಾರಿಯಲ್ಲಿ ಒಂದು ಲೋಡ್ ಕಳಿಸುವ ಜೊತೆಗೆ ಹೆಚ್ಚಿನ ರೀತಿಯಲ್ಲಿ ಧನ ಸಂಗ್ರಹವನ್ನು ಕಾರ್‍ಯಕ್ರಮಕ್ಕೆ ನೀಡುವ ಯೋಜನೆ ಇದೆ. ಇದಕ್ಕೆ ಪೂರ್ಣ ರೀತಿಯ ಸಹಕಾರವನ್ನು ನೀಡುವಂತೆ ವಿನಂತಿಸಿದರು.

ಜಾಂಬೂರಿಯಿಂದ ಸಂಸ್ಕೃತಿಯ ಅನಾವರಣ- ವಿದ್ಯಾಗೌರಿ:

ಪುತ್ತೂರು ನಗರ ಸಭೆಯ ಉಪಾಧ್ಯಕ್ಷೆ ಹಾಗೂ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಕಾರ್‍ಯದರ್ಶಿ ವಿದ್ಯಾಗೌರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ 117 ವರ್ಷಗಳ ಇತಿಹಾಸವನ್ನು ಹೊಂದಿರುವ ಸ್ಕೌಟ್ ಗೈಡ್ ಸಂಸ್ಥೆಯು ಅಂತರ್ರಾಷ್ಟ್ರೀಯ ಸಂಸ್ಥೆಯಾಗಿದ್ದು, ಪುತ್ತೂರಿನಲ್ಲಿ 3200 ಮಕ್ಕಳು, 180 ತರಬೇತಿ ಶಿಕ್ಷಕರನ್ನು ಸಂಸ್ಥೆ ಹೊಂದಿದೆ. ಸಂಸ್ಥೆಯ ವತಿಯಿಂದ ಸ್ವಾವಲಂಬಿ, ಜೀವನ ಕೌಶಲ್ಯ, ನಾಯಕತ್ವ, ಮೌಲ್ಯಾಧಾರಿತ ಶಿಕ್ಷಣವನ್ನು ಸಂಸ್ಥೆಯ ವತಿಯಿಂದ ನೀಡುತ್ತಿದ್ದು, ಮೂಡುಬಿದಿರೆಯಲ್ಲಿ ನಡೆಯುವ ಜಾಂಬೂರಿ ಉತ್ಸವದಲ್ಲಿ ಭಾಗವಹಿಸಲು ಪುತ್ತೂರಿನಿಂದ ಈಗಾಗಲೇ ಒಂದು ಸಾವಿರ ವಿದ್ಯಾರ್ಥಿಗಳು ಹಾಗೂ 180 ಶಿಕ್ಷಕರು ನೋಂದಣಿ ಮಾಡಿದ್ದಾರೆ ಎಂದು ಹೇಳಿದರು.

ಮೂಡುಬಿದಿರೆಗೆ ಪುತ್ತೂರಿನಿಂದ ಕೆ.ಎಸ್.ಆರ್.ಟಿ.ಸಿ, ಬಸ್:

ಜಾಂಬೂರಿ ಉತ್ಸವದಲ್ಲಿ ಸಾರ್ವಜನಿಕರು ಭಾಗವಹಿಸಲು ಅವಕಾಶವಾಗುವ ನಿಟ್ಟಿನಲ್ಲಿ ಪುತ್ತೂರಿನಿಂದ 7 ದಿನ ಕಾಲ ಮೂಡುಬಿದಿರೆಗೆ ಹೋಗಿ ಬರಲು ಕೆ.ಎಸ್.ಆರ್.ಟಿಸಿ, ಬಸ್ ಸಂಚಾರವನ್ನು ಮಾಡುವಂತೆ ಶಾಸಕ ಸಂಜೀವ ಮಠಂದೂರುರವರಲ್ಲಿ ಮನವಿಯನ್ನು ಮಾಡಲಾಗುವುದು ಎಂದು ವಿದ್ಯಾಗೌರಿ ಹೇಳಿದರು

ಸುವರ್ಣ ಅವಕಾಶ- ರೆ| ವಿಜಯ ಹಾರ್ವಿನ್:

ಪುತ್ತೂರು ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ಹಾಗೂ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ರೆ| ವಿಜಯ ಹಾರ್ವಿನ್‌ರವರು ಸ್ವಾಗತಿಸಿ ಮಾತನಾಡಿ ಜಾಂಬೂರಿ ಅಂತರಾಷ್ಟ್ರೀಯ ಸಮಾವೇಶವನ್ನು ನೋಡುವುದೇ ಒಂದು ಸುವರ್ಣ ಅವಕಾಶವಾಗಿದ್ದು, 50 ಸಾವಿರ ವಿದ್ಯಾರ್ಥಿಗಳ ಜೊತೆಗೆ 50 ಸಾವಿರ ಮಂದಿ ಸಾರ್ವಜನಿಕರು 7 ದಿವಸಗಳ ಕಾಲ ಭಾಗವಹಿಸಿ, ಸಂಭ್ರಮ ಪಡುವುದು ಅತ್ಯಂತ ಖುಷಿಯ ವಿಚಾರವಾಗಿದೆ ಎಂದು ಹೇಳಿದರು.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಸವಣೂರುರವರು ಅತಿಥಿಗಳನ್ನು ಗೌರವಿಸಿದರು. ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್‍ಯಾಧ್ಯಕ್ಷ ಹಾಗೂ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಡಶಾಲೆಯ ನಿವೃತ್ತ ಮುಖ್ಯಗುರು ಎಚ್.ಶ್ರೀಧರ್ ರೈ ಹೊಸಮನೆರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಸುನೀತಾ, ಮೇಬಲ್ ಹಾಗೂ ಹರಿಣಾಕ್ಷಿರವರುಗಳು ಪ್ರಾರ್ಥನೆಗೈದರು.

ಪಾಪೆಮಜಲು ಶಾಲಾ ಶಿಕ್ಷಕಿ ಮೇಬಲ್ ಕಾರ್‍ಯಕ್ರಮ ನಿರೂಪಿಸಿ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ವಂದಿಸಿದರು. ಕಾರ್‍ಯಕ್ರಮದಲ್ಲಿ ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಪದಾಧಿಕಾರಿಗಳು ಭಾಗವಹಿಸಿದ್ದರು.

ಮೂಡುಬಿದಿರೆಯಲ್ಲಿ ನಡೆಯುವ ಜಾಂಬೂರಿ ಉತ್ಸವದಲ್ಲಿ ಕೃಷಿ ಮೇಳ, ಸಾಂಸ್ಕೃತಿಕ ಮೇಳದ ಸಹಿತ ಅನೇಕ ವೈವಿಧ್ಯಮಯ ಕಾರ್‍ಯಕ್ರಮವನ್ನು ನೋಡುವುದೇ ಒಂದು ಸೌಭಾಗ್ಯವಾಗಿದೆ. ಇಂಥ ಅದ್ಬುತವಾದ ಕಾರ್‍ಯಕ್ರಮವನ್ನು ಸಂಘಟಿಸುವ ನಾಯಕತ್ವ ವಹಿಸಿರುವ ಡಾ. ಮೋಹನ್ ಆಳ್ವರವರಿಗೆ ನಾವೆಲ್ಲ ಪ್ರೋತ್ಸಾಹ ಮತ್ತು ಸಹಕಾರ ನೀಡೋಣ.
ಸವಣೂರು ಕೆ.ಸೀತಾರಾಮ ರೈ.
ಸಂಚಾಲಕರು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು.

LEAVE A REPLY

Please enter your comment!
Please enter your name here