ನೂತನ ಕಟ್ಟಡಕ್ಕೆ ಶಿಲಾನ್ಯಾಸ, ಪ.ಜಾತಿ, ಪಂಗಡ, ವಿಕಲಚೇತನರಿಗೆ ಸೌಲಭ್ಯಗಳ ವಿತರಣೆ
ಪುತ್ತೂರು: ಗ್ರಾಮದ ಅಭಿವೃದ್ಧಿ, ಮೂಲಭೂತ ಸೌಲಭ್ಯಗಳ ಒದಗಿಸುವುದರ ಜೊತೆಗೆ ಕಬಕ ಗ್ರಾ.ಪಂ ಜನರಿಗೆ ಬದುಕ ಕಟ್ಟಿಕೊಡುವ ಕೆಲಸ ಮಾಡಿದೆ. ಜನರ ಸ್ವಾವಲಂಬನೆಯ ಬದುಕಿಗೆ ಪೂರಕವಾಗಿ ಪಂಚಾಯತ್ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮಿಣ ಕುಡಿಯುವನೀರು ಮತ್ತು ನೈರ್ಮಲ್ಯ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಕಬಕ ಗ್ರಾಮ ಪಂಚಾಯತ್‌ನ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಸ್ವಚ್ಚ ಸಂಕೀರ್ಣ, ಹಿಂದುರುದ್ರ ಭೂಮಿ, ಅಮೃತ ಉದ್ಯಾನವನ ಲೋಕಾರ್ಪಣೆ, ಪರಿಶಿಷ್ಟ ಜಾತಿ, ಪಂಗಡ ಮತ್ತು ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರಕಾರದ ಸುಮಾರು 700 ಯೋಜನೆಗಳನ್ನು ಗ್ರಾಮದ ಕಟ್ಟ ಕಡೆಯ ಜನರಿಗೆ ತಲುಪಿಸುವಲ್ಲಿ ಕಬಕ ಪಂಚಾಯತ್ ಪ್ರಮುಖ ಪಾತ್ರವಹಿಸಿದೆ. ಅಭಿವೃದ್ಧಿಯ ತುಡಿತವಿದ್ದು ಇದೆಲ್ಲಾ ಸಾಧ್ಯವಾಗಿದೆ. ಹುಟ್ಟಿನಿಂದ ಸಾವಿನ ತನಕ ಎಲ್ಲಾ ಸೇವೆಗಳನ್ನು ಜನರಿಗೆ ನೀಡಲಾಗುತ್ತಿದೆ. ಜನ ಸಾಮಾನ್ಯರ ಆರೋಗ್ಯವಂತ ಜೀವನಕ್ಕಾಗಿ ಸ್ವಚ್ಚ ಸಂಕೀರ್ಣ, ರುದ್ರಭೂಮಿಯನ್ನು ನಿರ್ಮಿಸಿಕೊಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.
ಜಲಜೀವನ್ ಮಿಷನ್ ಯೋಜನೆಯ ಪುತ್ತೂರಿಗೆ ರೂ.67ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕಬಕ ಗ್ರಾ.ಪಂಗೆ 1.48ಕೋಟಿ ಅನುದಾನ ನೀಡಲಾಗಿದೆ. ರೂ.370 ಕೋಟಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಡಿಪಿಆರ್ ಸಿದ್ದವಾಗಿದೆ. ಈ ಯೋಜನೆ ಅನುಷ್ಠಾನವಾದರೆ ಗ್ರಾಮೀಣ ಪ್ರದೇಶದಲ್ಲಿ ದಿನ 24 ಗಂಟೆಯೂ ಕುಡಿಯುವ ನೀರು ಸರಬರಾಜು ಆಗಲಿದೆ. ಕೊಳವೆಬಾವಿಗಳನ್ನು ಅವಲಂಭಿಸಿಬೇಕಾದ ಆವಶ್ಯಕತೆಯಿಲ್ಲ. ಎಲ್ಲ ಕಾಮಗಾರಿಗಳು ಕಾಲಮಿತಿಯಲ್ಲಿ ಗುಣಮಟ್ಟದಲ್ಲಿ ನಡೆಯಲಿದೆ. ಇದರ ಬಗ್ಗೆ ಗ್ರಾಮಸ್ಥರು ಎಸಿಬಿ, ಲೋಕಾಯುಕ್ತದಲ್ಲಿ ಎತ್ತಿ ಹಿಡಿಯುವ ಕೆಲಸ ಮಾಡಬಹುದು. ಅನುದಾನಗಳನ್ನು ಅನುಷ್ಟಾನಗೊಳಿಸಿ ಗ್ರಾಮದ ಅಭಿವೃದ್ಧಿಗೆ ಸದ್ವಿನಿಯೋಗಗೊಳಿಸಲಾಗುವುದು ಎಂದು ಶಾಸಕರು ಹೇಳಿದರು.
ಪಂಚಾಯತ್‌ನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಶಾಸಕರ ಮೂಲಕ ಕಬಕ ಗ್ರಾಮಕ್ಕೆ ಸುಮಾರು ರೂ.7 ಕೋಟಿ ಅನುದಾನ ಬಂದಿದ್ದು ವಿವಿಧ ಅಭಿವೃದ್ಧಿ ಕಾಮಗಾರಿ ನಡೆದಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಪಂಚಾಯತ್ ಬಳಪಡಿಸುತ್ತಿದೆ. ಪಂಚಾಯತ್ ಮುಖಾಂತರ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತದೆ. ಶಾಸಕರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಪುತ್ತೂರಿಗೆ ಸುಮಾರು ರೂ.1,100 ಅನುದಾನ ತರುವ ಮೂಲಕ ಜನರ ಬೇಡಿಕೆಗಳಿಗೆ ಸ್ಪಂಧನೆ ನೀಡಿದ್ದಾರೆ. ಈ ಯೋಜನೆಯ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಮಾತನಾಡಿ, ಅಭಿವೃದ್ಧಿಯ ಇಚ್ಚಾಶಕ್ತಿ ಇದ್ದರೆ ಏನೂ ಮಾಡಬಹುದು ಎನ್ನುವುದಕ್ಕೆ ಕಬಕ ಗ್ರಾ.ಪಂ ಉದಾಹರಣೆಯಾಗಿದೆ. ಅನುದಾನಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಪೂರೈಸಿದೆ. ಸಾರ್ವಜನಿಕರು ಇದು ನಮ್ಮ ಯೋಜನೆ ಎಂದು ತಿಳಿದು ಸಹಕಾರ ನೀಡಿದರೆ ಗ್ರಾಮದ ಆಭಿವೃದ್ಧಿ ಸಾಧ್ಯ ಎಂದರು.
ಗ್ರಾ,ಪಂ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ಮಾತನಾಡಿ, ಗ್ರಾಮದ ಜನರಿಗೆ ಅತೀ ಅಗತ್ಯವಾದ ಹಿಂದು ರುದ್ರಭೂಮಿಯನ್ನು ರೂ.13 ಲಕ್ಷದ ನಿರ್ಮಿಸಲಾಗಿದೆ. ರೂ.25 ಲಕ್ಷದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ, ರೂ.7 ಲಕ್ಷದಲ್ಲಿ ಅಮೃತ ಉದ್ಯಾನವನ ನಿರ್ಮಾಣಗೊಂಡಿದೆ. ರೂ.44 ಲಕ್ಷದಲ್ಲಿ ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣವಾಗಲಿದೆ. ಗ್ರಾಮದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ರೂ.6.25 ಕೋಟಿ ಅನುದಾನ ಶಾಸಕರು ಮೂಲಕ ಬಿಡುಗಡೆಯಾಗಿದೆ. ಉದ್ಯೋಗ ಖಾತರಿ ಯೋಜನೆಯ ರೂ.18 ಲಕ್ಷ ಅನುದಾನದಲ್ಲಿ ಗೋದಾಮು ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಅಮೃತ ಗ್ರಾಮ ಯೋಜನೆಯ ರೂ.25 ಲಕ್ಷ ಅನುದಾನದಲ್ಲಿ ಅದರ ಮಾರ್ಗಸೂಚಿಯಂತೆ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದು ಮುಂದಿನ ಎರಡು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.
ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಪುರುಷೋತ್ತಮ ಮುಂಗ್ಲಿಮನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ರೂಪ್ಲಾ ನಾಯಕ್ ಎಸ್, ಗ್ರಾ.ಪಂ ಸದಸ್ಯರಾದ ಸುಶೀಲಾ, ಉಮ್ಮರ್ ಫಾರೂಕ್, ನಝೀರ್ ಡಿ., ಶಾಬಾ, ವಾರಿಜ, ಗೀತಾ, ಪ್ರೀತಾ ಬಿ., ಪುಷ್ಪಾ, ರಾಜೇಶ್ ಪೋಳ್ಯ, ಶಂಕರಿ ಜಿ.ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಕಬಕದ ಮಾಜಿ ಮಂಡಲ ಪ್ರಧಾನರು, ತಾ.ಪಂ ಕಬಕ ಕ್ಷೇತ್ರದ ಮಾಜಿ ಸದಸ್ಯರೂ ಆಗಿರುವ ಚನಿಲ ತಿಮ್ಮಪ್ಪ ಶೆಟ್ಟಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಉದ್ಘಾಟನೆ, ಶಿಲಾನ್ಯಾಸಗೊಂಡ ಕಾಮಗಾರಿಗಳು:
ರೂ.7 ಲಕ್ಷದ ಮುರ ಶಾಲಾ ಬಳಿಯ ಅಮೃತ ಉದ್ಯಾನವನ, ವಿದ್ಯಾಪುರದ ಪರನೀರಕಟ್ಟೆಯಲ್ಲಿ ರೂ.13ಲಕ್ಷ ಹಿಂದು ರುದ್ರಭುಮಿ, ರೂ.25 ಲಕ್ಷದ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸ್ವಚ್ಚ ವಾಹಿನಿ ವಾಹನ ಲೋಕಾರ್ಪಣೆಗೊಂಡಿತು. ರೂ.44ಲಕ್ಷದ ಪಂಚಾಯತ್‌ನ ನೂತನ ಕಟ್ಟಡಕ್ಕೆ ಹಾಗೂ ಶಾಸಕರ ರೂ.೫ಲಕ್ಷದ ಅನುದಾನದಲ್ಲಿ ಕಬಕದಲ್ಲಿ ನಿರ್ಮಾಣವಾಗಲಿರುವ ಪ್ರಯಾಣಿಕರ ತಂಗುದಾನಕ್ಕೆ ಶಿಲಾನ್ಯಾಸ ನೆರವೇರಿತು.
ಕಾರ್ಯಕ್ರಮದಲ್ಲಿ ರೂ.2.69 ಲಕ್ಷದಲ್ಲಿ ಪ.ಜಾತಿ ಹಾಗೂ ಪ.ಪಂಗಡದವರಿಗೆ ವಿವಿಧ ಸವಲತ್ತುಗಳು ಹಾಗೂ ರೂ.53,೦೦೦ ವೆಚ್ಚದಲ್ಲಿ ವಿಕಲಚೇತನರಿಗೆ ವಿವಿಧ ಸವಲತ್ತುಗಳ ವಿತರಿಸಲಾಯಿತು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಶಾ ಇ. ಸ್ವಾಗತಿಸಿದರು. ಉಪಾಧ್ಯಕ್ಷ ರುಕ್ಮಯ್ಯ ಗೌಡ ಪೋಳ್ಯ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಹಾಗೂ ಕಾರ್ಯದರ್ಶಿ ಸುರೇಶ್ ಕೆ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳು ಸಹಕರಿಸಿದರು. ಕಾರ್ಯಕ್ರಮದಲ್ಲಿ ಶ್ರೀರಾಗ್ ಮ್ಯೂಸಿಕಲ್ಸ್‌ನರವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು.
ಜಲಜೀವನ್ ಮಿಷನ್ ಯೋಜನೆಯಲ್ಲಿ ಪುತ್ತೂರಿಗೆ ರೂ.67ಕೋಟಿ ಅನುದಾನ ಬಿಡುಗಡೆಯಾಗಿದೆ.ಇದರಲ್ಲಿ ಕಬಕ ಗ್ರಾ.ಪಂಗೆ 1.48 ಕೋಟಿ ಅನುದಾನ ನೀಡಲಾಗಿದೆ.ರೂ.370 ಕೋಟಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಡಿಪಿಆರ್ ಸಿದ್ದವಾಗಿದೆ.ಈ ಯೋಜನೆ ಅನುಷ್ಠಾನವಾದರೆ ಗ್ರಾಮೀಣ ಪ್ರದೇಶದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರು ಸರಬರಾಜು ಆಗಲಿದೆ.ಕೊಳವೆ ಬಾವಿಗಳನ್ನು ಅವಲಂಬಿಸಬೇಕಾದ ಅವಶ್ಯಕತೆಯಿಲ್ಲ.ಎಲ್ಲ ಕಾಮಗಾರಿಗಳು ಕಾಲಮಿತಿಯಲ್ಲಿ ಗುಣಮಟ್ಟದಲ್ಲಿ ನಡೆಯಲಿದೆ.ಇದರ ಬಗ್ಗೆ ಗ್ರಾಮಸ್ಥರು ಎಸಿಬಿ, ಲೋಕಾಯುಕ್ತದಲ್ಲಿ ಎತ್ತಿ ಹಿಡಿಯುವ ಕೆಲಸ ಮಾಡಬಹುದು.ಅನುದಾನಗಳನ್ನು ಅನುಷ್ಟಾನಗೊಳಿಸಿ ಗ್ರಾಮದ ಅಭಿವೃದ್ಧಿಗೆ ಸದ್ವಿನಿಯೋಗಗೊಳಿಸಲಾಗುವುದು-
-ಸಂಜೀವ ಮಠಂದೂರು, ಶಾಸಕರು